ADVERTISEMENT

2ನೇ ಡೋಸ್ ಲಸಿಕೆ: ಬೆಂಗಳೂರು ನಗರ ಜಿಲ್ಲೆ ಶೇ 100ರಷ್ಟು ಗುರಿ ಸಾಧನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 19:31 IST
Last Updated 23 ಡಿಸೆಂಬರ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್ ಲಸಿಕೆ ವಿತರಣೆಯಲ್ಲಿ ಬೆಂಗಳೂರು ನಗರ ಜಿಲ್ಲೆ ಮುಂಚೂಣಿಯಲ್ಲಿದ್ದು, ಎರಡನೇ ಡೋಸ್ ವಿತರಣೆಯಲ್ಲೂ ಶೇ 100 ರಷ್ಟು ಗುರಿ ಸಾಧಿಸಿದೆ. ಈ ಮೂಲಕ ಗೊತ್ತುಪಡಿಸಲಾದ ಗುರಿ ಸಾಧಿಸಿದ ರಾಜ್ಯದ ಮೊದಲ ಜಿಲ್ಲೆಯಾಗಿ ಹೊರಹೊಮ್ಮಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 10.32 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಜಿಲ್ಲೆಯಲ್ಲಿ ವಲಸೆ ಕಾರ್ಮಿಕರು ಸೇರಿದಂತೆ 13.26 ಲಕ್ಷ ಮಂದಿಗೆ ಮೊದಲ ಡೋಸ್ (ಶೇ 129) ಹಾಗೂ 10.35 ಲಕ್ಷ ಮಂದಿಗೆ ಎರಡನೇ ಡೋಸ್ ನೀಡಲಾಗಿದೆ.

ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ 4.89 ಕೋಟಿ ಮಂದಿ ಇದ್ದಾರೆ. ಅವರಲ್ಲಿ 4.73 ಕೋಟಿ ಮೊದಲ ಡೋಸ್ ಪಡೆದಿದ್ದು, ಶೇ 97 ರಷ್ಟು ಗುರಿ ಸಾಧಿಸಲಾಗಿದೆ. 3.67 ಕೋಟಿ ಮಂದಿ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ಎರಡನೇ ಡೋಸ್ ವಿತರಣೆಯಲ್ಲಿ ರಾಜ್ಯವು ಶೇ 75 ರಷ್ಟು ಗುರಿ ಸಾಧಿಸಿದೆ.

ADVERTISEMENT

ಎರಡನೇ ಡೋಸ್ ವಿತರಣೆಯಲ್ಲಿ 16 ಜಿಲ್ಲೆಗಳು ರಾಜ್ಯದ ಸರಾಸರಿಗಿಂತ ಅಧಿಕ ಪ್ರಮಾಣದಲ್ಲಿ ಲಸಿಕೆ ನೀಡಿವೆ. ಕಲಬುರಗಿ (ಶೇ 60), ರಾಯಚೂರು (ಶೇ 64) ಸೇರಿದಂತೆ 15 ಜಿಲ್ಲೆಗಳು ಹಿಂದೆ ಬಿದ್ದಿವೆ. ಮೊದಲ ಡೋಸ್ ವಿತರಣೆಯಲ್ಲಿ ಗದಗ, ವಿಜಯಪುರ, ಬಾಗಲಕೋಟೆ ಹಾಗೂ ಕೊಡಗು ಜಿಲ್ಲೆಗಳು ಕೂಡ ಶೇ 100 ರಷ್ಟು ಗುರಿ ಸಾಧನೆ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.