ADVERTISEMENT

3 ಅಕಾಡೆಮಿ ಅಧ್ಯಕ್ಷರ ನೇಮಕ ರದ್ದು

​ಪ್ರಜಾವಾಣಿ ವಾರ್ತೆ
Published 21 ಜೂನ್ 2014, 19:30 IST
Last Updated 21 ಜೂನ್ 2014, 19:30 IST

ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿ, ಯಕ್ಷಗಾನ ಬಯಲಾಟ ಅಕಾಡೆಮಿ ಮತ್ತು ಬ್ಯಾರಿ ಸಾಹಿತ್ಯ ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರ ನೇಮಕವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರದ್ದು ಮಾಡಿದೆ.

ಈ ಅಕಾಡೆಮಿಗಳಿಗೆ ಕ್ರಮವಾಗಿ ಡಾ.ಎಂ.ಎಸ್‌. ಮೂರ್ತಿ, ಬೆಳಗಲ್‌ ವೀರಣ್ಣ ಮತ್ತು ಬಿ.ಎ. ಮಹಮ್ಮದ್‌ ಹನೀಫ್‌ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಫೆಬ್ರುವರಿಯಲ್ಲಿ ಆದೇಶ ಹೊರಡಿಸಲಾ­ಗಿತ್ತು. ಅವರು ಅಧಿಕಾರ ಸ್ವೀಕರಿಸಿಯೂ ಆಗಿತ್ತು.
ಈಗ ಯಾವ ಕಾರಣಕ್ಕೆ ನೇಮಕ ರದ್ದು ಮಾಡ­ಲಾಗಿದೆ ಎಂಬುದನ್ನು ಇಲಾಖೆ ತನ್ನ ಆದೇಶ­ದಲ್ಲಿ ಉಲ್ಲೇಖಿಸಿಲ್ಲ. ಆದರೆ ಮೂಲಗಳ ಪ್ರಕಾರ, ಹೈಕೋರ್ಟ್‌­ನಿಂದ ನ್ಯಾಯಾಂಗ ನಿಂದನೆ ಪ್ರಕರಣ ಎದು­ರಿಸಬೇಕಾಗುತ್ತದೆ ಎಂಬ ಭೀತಿಯೇ ಇದಕ್ಕೆ ಕಾರಣ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕ­ಗೊಂಡಿದ್ದ ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸುವಂತೆ 2013ರ ಮೇನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಸೂಚಿ­ಸಿತ್ತು. ಆಗ ಕೆಲವರು ರಾಜೀನಾಮೆ ನೀಡಿ­ದ್ದರು. ಇನ್ನು ಕೆಲವರು ರಾಜೀನಾಮೆ ನೀಡಲು ಒಪ್ಪಿ­ರ­ಲಿಲ್ಲ. ರಾಜೀನಾಮೆ ಕೊಡದೇ ಇದ್ದವರನ್ನು ಸರ್ಕಾರ ಪದಚ್ಯುತಗೊಳಿಸಿತ್ತು.

ಹಿನ್ನೆಲೆ: ‘ನಾವು ಮೂರು ವರ್ಷಗಳ ಅವಧಿಗೆ ನೇಮಕ­ಗೊಂಡಿದ್ದೇವೆ. ಸರ್ಕಾರ ನಮ್ಮನ್ನು ಪದಚ್ಯುತ­ಗೊಳಿಸಿರುವುದು ತಪ್ಪು’ ಎಂದು ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದ ಚಿ.ಸು. ಕೃಷ್ಣಸೆಟ್ಟಿ, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ರಹೀಂ ಉಚ್ಚಿಲ ಮತ್ತು ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರಾಗಿದ್ದ ಪ್ರೊ.ಎಂ.ಎಲ್‌. ಸಾಮಗ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಅವರ ಈ ಅರ್ಜಿಗಳು ಪ್ರಸ್ತುತ ವಿಚಾರಣೆಯ ಹಂತದಲ್ಲಿವೆ. ಆದರೆ ಈ ಹಿಂದೆ ಹೈಕೋರ್ಟ್‌, ಈ ಮೂರು ಅಕಾಡೆಮಿಗಳಿಗೆ ಸಂಬಂಧಿಸಿದಂತೆ ಯಥಾ­ಸ್ಥಿತಿ ಕಾಯ್ದುಕೊಳ್ಳುವಂತೆ ಸರ್ಕಾರಕ್ಕೆ ಮಧ್ಯಾಂತರ ಆದೇಶದಲ್ಲಿ ಸೂಚಿಸಿತ್ತು. ‘ಮಧ್ಯಾಂತರ ಆದೇಶ ನೀಡಿದ ಸಂದರ್ಭದಲ್ಲಿ ಈ ಮೂರು ಅಕಾಡೆಮಿಗಳಿಗೆ ಹೊಸ ಅಧ್ಯಕ್ಷರ ನೇಮಕ ಆಗಿರಲಿಲ್ಲ’ ಎಂದು ಮೂಲಗಳು ತಿಳಿಸಿವೆ.

‘ಸರ್ಕಾರ ಹೊಸಬರನ್ನು ನೇಮಕ ಮಾಡಿದಾಗ ವಿವಾದ ಕೋರ್ಟ್‌ ಅಂಗಳದಲ್ಲಿತ್ತು. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆಯೂ ಇತ್ತು. ಹೀಗಿದ್ದೂ, ಹೊಸಬರನ್ನು ನೇಮಕ ಮಾಡಲಾಯಿತು. ಮಧ್ಯಾಂತರ ಆದೇಶ ಉಲ್ಲಂಘಿಸಿದ ಕಾರಣ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂಬ ಭಯದಿಂದ ಸರ್ಕಾರ ಹೊಸ ನೇಮಕಾತಿಯನ್ನು ರದ್ದು ಮಾಡಿರಬಹುದು’ ಎಂದು ಅಕಾಡೆಮಿಯ ಮೂಲಗಳು ತಿಳಿಸಿವೆ.

ಸಚಿವರಿಗೆ ತಿಳಿದಿರಲಿಲ್ಲ: ಈ ಮೂರು ಅಕಾಡೆಮಿ­ಗಳಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳು­ವಂತೆ ಹೈಕೋರ್ಟ್‌ ಸೂಚಿಸಿದ್ದನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರ ಗಮನಕ್ಕೆ ಇಲಾಖೆಯ ಅಧಿಕಾರಿಗಳು ತಂದಿರಲಿಲ್ಲ. ಮಧ್ಯಾಂತರ ಆದೇಶ ತೆರವುಗೊಳಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಅದು ತೆರವಾದ ತಕ್ಷಣ ಹೊಸದಾಗಿ ನೇಮಕ ಮಾಡಲು ಅಡ್ಡಿಯಿಲ್ಲ ಎಂದು ಅಡ್ವೊಕೇಟ್‌ ಜನರಲ್‌ ಅವರು ಅಭಿಪ್ರಾಯ ನೀಡಿದ್ದಾರೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪದೇಪದೇ ತಪ್ಪು: ‘ಸರ್ಕಾರ ಒಂದರ ನಂತರ ಇನ್ನೊಂದು ತಪ್ಪು ಮಾಡುತ್ತಿದೆ. ನಮ್ಮನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿ ತಪ್ಪು ಮಾಡಿತು. ವಿವಾದ ನ್ಯಾಯಾಲಯದಲ್ಲಿದ್ದಾಗ ಹೊಸಬರನ್ನು ನೇಮಕ ಮಾಡಿ ಇನ್ನೊಂದು ತಪ್ಪೆಸಗಿತು. ಈಗ ಹೊಸಬರ ನೇಮಕ ರದ್ದುಗೊಳಿಸಿ ಮತ್ತೊಂದು ತಪ್ಪೆಸಗಿದೆ’ ಎಂದು ಕೃಷ್ಣಸೆಟ್ಟಿ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.