ADVERTISEMENT

ಚಿರತೆ ದಾಳಿಗೆ 3 ತಿಂಗಳಲ್ಲಿ 4 ಸಾವು: ತಿ.ನರಸೀಪುರ ತಾಲ್ಲೂಕಿನಲ್ಲಿ ಆತಂಕ

ತಿ.ನರಸೀಪುರ ತಾಲ್ಲೂಕಿನಲ್ಲಿ ಆತಂಕ, ಜನರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 21:26 IST
Last Updated 22 ಜನವರಿ 2023, 21:26 IST
   

ತಿ.ನರಸೀಪುರ(ಮೈಸೂರು ಜಿಲ್ಲೆ): ತಾಲ್ಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಚಿರತೆಯು ಬಾಲಕನನ್ನು ಎಳೆದೊಯ್ದು ಕೊಂದಿದೆ.

ಜಯಂತ್

ಗ್ರಾಮದ ದಶಕಂಠ ಅವರ ಪುತ್ರ ಜಯಂತ್ (11) ಮೃತ ಪಟ್ಟವನು. ಮುಖ್ಯ‌ರಸ್ತೆಯಲ್ಲಿ ಮನೆಗೆ ಹೋಗುತ್ತಿದ್ದಾಗ ರಸ್ತೆಬದಿ ಅವಿತಿದ್ದ ಚಿರತೆ ದಾಳಿ ಮಾಡಿದೆ. ಆತ ಮನೆಗೆ ಬಾರದಿದ್ದರಿಂದ ಪೋಷಕರು ಹಾಗೂ ಸಂಬಂಧಿಕರು ಹುಡುಕಾಟ ನಡೆಸಿದ್ದರು. ಆಗ, ರಸ್ತೆ ಬದಿಯಲ್ಲಿ ಬಿಸ್ಕೆಟ್‌ ‍ಪ್ಯಾಕೆಟ್ ಹಾಗೂ ರಕ್ತದ ಕಲೆಗಳು ಕಂಡುಬಂದಿದ್ದವು. ಇದರಿಂದ ಗಾಬರಿಗೊಂಡು ಹುಡುಕಾಟ ನಡೆಸಿದ್ದರು. ಭಾನುವಾರ ಬೆಳಿಗ್ಗೆ ಬಾಲಕನ ಶವ ಪತ್ತೆಯಾಗಿದೆ. ಒಂದು ಕೈ, ತಲೆ ಭಾಗ ಬಿಟ್ಟು ದೇಹದ ಉಳಿದ ಭಾಗ ದೊರೆತಿದೆ.

2 ತಾಸು ಪ್ರತಿಭಟನೆ: ಹೊರಳಹಳ್ಳಿ ಗ್ರಾಮಸ್ಥರು, ತಾಲ್ಲೂಕು ಕುರುಬರ ಸಂಘದವರು, ರೈತರು, ದಲಿತ ಸಂಘಟನೆಗಳ ಪ್ರಮುಖರು ಮತ್ತು ಸಾರ್ವಜನಿಕರು ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಪಟ್ಟಣದ ಕಪಿಲಾ ಮೇಲ್ಸೇತುವೆ ಬಳಿ ಎರಡು ತಾಸು ಪ್ರತಿಭಟನೆ ನಡೆಸಿದರು. ಇದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.

ADVERTISEMENT

ಶಾಸಕ ಎಂ.ಅಶ್ವಿನ್‌ ಕುಮಾರ್‌ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.ಜನರ ಅಹವಾಲು ಆಲಿಸಿದರು. ‘ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಲಾಗುವುದು. ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳಲಾಗುವುದು. ತ್ವರಿತವಾಗಿ ಕಬ್ಬು ಕಟಾವು ಮಾಡಿಸಲಾಗುವುದು ಹಾಗೂ ಜಮೀನು ಗಳಲ್ಲಿನ ಪೊದೆಗಳನ್ನು ತೆರವುಗೊಳಿಸಲಾಗುವುದು. ಚಿರತೆಯನ್ನು ಕಂಡಲ್ಲಿ ಗುಂಡಿಕ್ಕುವ ಹಂತಕ್ಕೆ ತಲುಪಿದ್ದೇವೆ’ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ ನಂತರ ಜನರು ಪ್ರತಿಭಟನೆ ಹಿಂಪಡೆದರು.

ಜನರಲ್ಲಿ ಆತಂಕ: ಕಳೆದ ಅಕ್ಟೋಬರ್‌ ಅಂತ್ಯದಲ್ಲಿ ಎಂ.ಎಲ್.ಹುಂಡಿಯ ಮಂಜುನಾಥ್ ಎಂಬ ಯುವಕ, ಅದಾದ ವಾರದ ಅಂತರದಲ್ಲಿ‌ ಎಸ್. ಕೆಬ್ಬೆಹುಂಡಿಯ ಮೇಘನಾ ಎಂಬ ಯುವತಿ, ಶುಕ್ರವಾರ ಕನ್ನಾಯಕನ ಹಳ್ಳಿಯ ಸಿದ್ದಮ್ಮ ಎಂಬುವರು ಚಿರತೆ ದಾಳಿಗೆ ತುತ್ತಾಗಿದ್ದರು. 3 ತಿಂಗಳಲ್ಲಿ ನಾಲ್ವರನ್ನು ಚಿರತೆ ಕೊಂದಿರುವುದು, ಜನರಲ್ಲಿ ಭೀತಿ ಮೂಡಿಸಿದೆ.

ಹುಲಿ ದಾಳಿಗೆ ಹಾಡಿ ನಿವಾಸಿ ಸಾವು

ಎಚ್.ಡಿ.ಕೋಟೆ (ಮೈಸೂರು ಜಿಲ್ಲೆ): ತಾಲ್ಲೂಕಿನ ನಾಗರಹೊಳೆ ಅಭಯಾರಣ್ಯದ ಬಳ್ಳೆ ಹಾಡಿ ನಿವಾಸಿ ಮಂಜು ಅಲಿಯಾಸ್ ಬಿ.ಕಾಳ (18) ಹುಲಿ ದಾಳಿಗೆ ಸಿಲುಕಿ ಮೃತಪಟ್ಟಿದ್ದಾನೆ.

ಸೌದೆ ತರಲು ಕಾಡಿಗೆ ಹೋಗಿದ್ದಾಗ ಘಟನೆ ನಡೆದಿದೆ. ಡಿ.ಬಿ.ಕುಪ್ಪೆ ವಲಯದ ಬಳ್ಳೆ ಕಾಡಿನ ಒಳಭಾಗದಲ್ಲಿ ಭಾನುವಾರ ‘ಬ್ಯಾಕ್‌ ವಾಟರ್‌ ಫೀಮೇಲ್’ ಹುಲಿ (ನಾಲ್ಕು ಮರಿಗಳನ್ನು ಹೊಂದಿದೆ) ದಾಳಿ ನಡೆಸಿದೆ ಎಂಬ ಸಂಶಯ ವ್ಯಕ್ತವಾಗಿದೆ.

ಇದರಿಂದ ಆಕ್ರೋಶಗೊಂಡ ಸ್ಥಳೀಯರು ಬಳ್ಳೆ ಹಾಡಿಯಲ್ಲಿ ಪ್ರತಿಭಟಿಸಿದರು. ಮೈಸೂರು–ಮಾನಂದವಾಡಿ ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಅರಣ್ಯ ಅಧಿಕಾರಿಗಳು, ಪೊಲೀಸರು ಮನವೊಲಿಸಿದ ಬಳಿಕ ಶವಪರೀಕ್ಷೆಗೆ ಹಾಡಿ ನಿವಾಸಿಗಳು ಒಪ್ಪಿಗೆ ನೀಡಿದರು.

‘ಮೃತನ ಕುಟುಂಬಕ್ಕೆ ತಕ್ಷಣದ ಪರಿಹಾರವಾಗಿ ₹ 2.5 ಲಕ್ಷ ನೀಡಲಾಗುವುದು. ನಂತರ ₹ 12.5 ಲಕ್ಷವನ್ನು ಇಲಾಖೆ ನೀಡಲಿದೆ’ ಎಂದು ಎಸಿಎಫ್ ರಂಗಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಘಟನೆಯಿಂದಾಗಿ, ಕಬಿನಿ ಹಿನ್ನೀರಿಗೆ ಸಫಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ’ ಎಂದು ಹೇಳಿದರು.

‘ಇನ್ನೊಂದು ಸಾವಾದರೆ ನಿನ್ನನ್ನೇ ಕೊಲ್ಲುವೆ’

ಮೊಮ್ಮಗ ಸಾವಿಗೀಡಾಗಿದ್ದಕ್ಕೆ ಕಣ್ಣೀರಿಟ್ಟ ಅಜ್ಜ ಗುರುರಾಜ್‌, ‘ಚಿರತೆ ದಾಳಿಯಿಂದ ತಾಲ್ಲೂಕಿನಲ್ಲಿ ಇನ್ನೊಂದು ಸಾವಾದರೂ ನಿನ್ನನ್ನೇ ಕೊಲ್ಲುತ್ತೇನೆ’ ಎಂದು ಸಿಸಿಎಫ್‌ ಮಾಲತಿ ಪ್ರಿಯ ಅವರಿಗೆ ಎಚ್ಚರಿಕೆ ನೀಡಿದರು.

‘ಒಂದಲ್ಲ, ಎರಡು ಬಾರಿ ನಿಮಗೆ ದೂರು ನೀಡಿದ್ದೇನೆ. ಚಿರತೆಗಳು ಓಡಾಡುತ್ತಿವೆ ಎಂದು ಹೇಳಿದ್ದರೂ ಕ್ರಮ ಕೈಗೊಂಡಿಲ್ಲ ನೀವು. ಅಧಿಕಾರಿಗಳು ಎಸಿ ರೂಂನಲ್ಲಿ ಕುಳಿತಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.


ರೈತನ ಮೇಲೆ ಚಿರತೆ ದಾಳಿ

ನಂಜನಗೂಡು (ಮೈಸೂರು ಜಿಲ್ಲೆ): ತಾಲ್ಲೂಕಿನ ನಂದಿಗುಂದಪುರದಲ್ಲಿ ಜಮೀನಿಗೆ ತೆರಳಿದ್ದ ರೈತರೊಬ್ಬರ ಮೇಲೆ ಚಿರತೆ ದಾಳಿ ನಡೆಸಿದ್ದರಿಂದ, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಂದಿಗುಂದಪುರ ಗ್ರಾಮದ ನಿವಾಸಿ ಶಿವಕುಮಾರ್ (50) ಗಾಯಗೊಂಡವರು. ಕೈ ಹಾಗೂ ಎದೆ ಭಾಗಕ್ಕೆ ಗಾಯವಾಗಿದೆ. ಚೀರಾಟ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದೊಯ್ಯಲು ನೆರವಾದರು. ಸ್ಥಳದಲ್ಲಿ ಚಿರತೆ ಸೆರೆಗಾಗಿ ಬೋನು ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

***

ತ್ವರಿತವಾಗಿ ಚಿರತೆ ಸೆರೆಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದೇನೆ. ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ

- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.