ADVERTISEMENT

ಎಸ್‌ಐಟಿ ತನಿಖೆಗೆ ಶೇ 40 ಲಂಚ ಪ್ರಕರಣ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 23:30 IST
Last Updated 11 ಏಪ್ರಿಲ್ 2025, 23:30 IST
ಎಚ್‌.ಕೆ.ಪಾಟೀಲ
ಎಚ್‌.ಕೆ.ಪಾಟೀಲ   

ಬೆಂಗಳೂರು: ಬಿಜೆ‍ಪಿ ನೇತೃತ್ವದ ಹಿಂದಿನ ಸರ್ಕಾರದ ವಿರುದ್ಧ ಗುತ್ತಿಗೆದಾರರು ಮಾಡಿದ್ದ ಶೇ 40 ಲಂಚ ಆರೋಪದ ಕುರಿತು ನ್ಯಾ. ಎಚ್‌.ಎನ್‌. ನಾಗಮೋಹನ್‌ದಾಸ್‌ ಆಯೋಗ ಸಲ್ಲಿಸಿರುವ ವರದಿಯ ಆಧಾರದಲ್ಲಿ ಹೆಚ್ಚಿನ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ‘ತನಿಖೆ ನಡೆಸಿ ಎರಡು ತಿಂಗಳೊಳಗೆ ವರದಿ ನೀಡುವಂತೆ ಎಸ್‌ಐಟಿಗೆ ಸೂಚಿಸಲಾಗುವುದು’ ಎಂದು ಹೇಳಿದರು.

ಶೇ 40 ಲಂಚ ನೀಡಿರುವುದು ಅಥವಾ ಪಡೆದಿರುವುದು ಯಾವುದಾದರೂ ಪ್ರಕರಣಗಳಲ್ಲಿ ದೃಢಪಟ್ಟ ಸಂಬಂಧ ವರದಿಯಲ್ಲಿ ಮಾಹಿತಿ ಇದೆಯೇ ಎಂಬ ಪ್ರಶ್ನೆಗೆ ಪಾಟೀಲ ಅವರು ನೇರ ಉತ್ತರ ನೀಡಲಿಲ್ಲ. ವರದಿಯನ್ನು ಇನ್ನಷ್ಟೇ ಅಧ್ಯಯನ ಮಾಡಬೇಕಿದೆ ಎಂದರು.

ADVERTISEMENT

‘ಆಯೋಗವು ಮೂರು ಲಕ್ಷ ಕಾಮಗಾರಿಗಳಲ್ಲಿ 1,729 ಕಾಮಗಾರಿಗಳನ್ನು ಮಾದರಿ ಆಗಿ ತೆಗೆದುಕೊಂಡು ಪರಿಶೀಲನೆ ನಡೆಸಿದೆ. ಕೆಲವು ಪ್ರಕರಣಗಳಲ್ಲಿ ವ್ಯತ್ಯಾಸಗಳಿವೆ. ಕೆಲವು ಕಾಮಗಾರಿಗಳಲ್ಲಿ ಹೆಚ್ಚು ಹಣ ಪಾವತಿಯಾಗಿದೆ. ಕೆಲವು ಸಂಶಯಾಸ್ಪದವಾಗಿವೆ. ಟೆಂಡರ್‌ ಪ್ರಕ್ರಿಯೆಯಲ್ಲಿ ಲೋಪವಾಗಿದೆ. ಆದ್ದರಿಂದ, ಈ ಬಗ್ಗೆ ಹೆಚ್ಚಿನ ತನಿಖೆಗೆ ಎಸ್‌ಐಟಿ ರಚಿಸಲು ತೀರ್ಮಾನಿಸಲಾಯಿತು. ಎಸ್ಐಟಿಯಲ್ಲಿ ವಿಷಯ ಪರಿಣಿತರು, ಅಧಿಕಾರಿಗಳು ಇರಲಿದ್ದಾರೆ’ ಎಂದು ಪಾಟೀಲ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.