ADVERTISEMENT

2024 ಏ.1ರಿಂದ ಡಿ.31ರವರೆಗೆ ರಾಜ್ಯದಲ್ಲಿ 464 ಬಾಣಂತಿಯರ ಸಾವು: ವರದಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 1:00 IST
Last Updated 5 ಏಪ್ರಿಲ್ 2025, 1:00 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: 2024 ಏಪ್ರಿಲ್‌ 1 ರಿಂದ ಡಿಸೆಂಬರ್‌ 31 ರ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 464 ಬಾಣಂತಿಯರ ಸಾವು (ಪ್ರಸವ ಪೂರ್ವ ಮತ್ತು ಪ್ರಸವ ನಂತರ) ಸಂಭವಿಸಿದ್ದು, ಇದರಲ್ಲಿ ಶೇ 70ರಷ್ಟು ಸಾವನ್ನು ತಡೆಯಬಹುದಾಗಿತ್ತು ಎಂದು ರಾಜ್ಯ ಮಟ್ಟದ ತಜ್ಞರ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವಿಶ್ಲೇಷಣಾ ವರದಿ ಹೇಳಿದೆ.

ಕಳೆದ ನವೆಂಬರ್‌ನಲ್ಲಿ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ 5 ಬಾಣಂತಿಯರ ಸಾವು ಸಂಭವಿಸಿತ್ತು. ಈ ಎಲ್ಲ ಸಾವುಗಳು ನವೆಂಬರ್‌ 9 ರಿಂದ 11 ಮಧ್ಯೆ ನಡೆದ ಸಿಸೇರಿಯನ್‌ ಶಸ್ತ್ರಚಿಕಿತ್ಸೆಗಳ ನಂತರ ಸಂಭವಿಸಿದ ಕಾರಣ ರಾಜ್ಯದಲ್ಲಿ ಬಾಣಂತಿಯರ ಸಾವಿನ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಪಡೆಯಲು ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಸವಿತಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.

ADVERTISEMENT

ಸಮಿತಿಯು ಮಧ್ಯಂತರ ವರದಿಯನ್ನು (ಡೆತ್‌ ಆಡಿಟ್‌) ಸಲ್ಲಿಸಿದೆ. ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ರಿಂಗರ್ ಲ್ಯಾಕ್ಟೇಟ್ ದ್ರಾವಣದ ಸಮಸ್ಯೆ ಮಾತ್ರವಲ್ಲದೆ, ಸಾವಿಗೆ ಹಲವು ವೈಫಲ್ಯಗಳನ್ನೂ ವರದಿ ಬೆಳಕು ಚೆಲ್ಲಿದೆ ಎಂದು ಹೇಳಿದರು.

ಮಧ್ಯಂತರ ವರದಿಯ ಪ್ರಮುಖ ಅಂಶಗಳು:

* ಶೇ 70 ರಷ್ಟು ಬಾಣಂತಿಯರ ಸಾವನ್ನು ತಪ್ಪಿಸಬಹುದಾಗಿತ್ತು

* ಲಿಂಗರ್ ಲ್ಯಾಕ್ಟೇಟ್‌ ಕಾರಣದಿಂದ 18 ಸಾವುಗಳಾಗಿವೆ, ಬಳ್ಳಾರಿ 5, ರಾಯಚೂರು 4, ಬೆಂಗಳೂರು ನಗರ 3, ಉತ್ತರಕನ್ನಡ, ಯಾದಗಿರಿ ಮತ್ತು ಬೆಳಗಾವಿಯಲ್ಲಿ ತಲಾ 1

* 10 ಪ್ರಕರಣಗಳಲ್ಲಿ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ಸಾಬೀತು

* ಒಟ್ಟು ಸಾವಿನ ಪ್ರಕರಣಗಳಲ್ಲಿ ಶೇ 50 ರಷ್ಟು ತಾಯಂದಿರ ವಯೋಮಿತಿ 19 ವರ್ಷದಿಂದ 25 ವರ್ಷಗಳು

* ಶೇ 68.05 ರಷ್ಟು ಸಾವಿಗೆ ಅಧಿಕ ರಕ್ತದೊತ್ತಡ, ಹೃದ್ರೋಗ, ಡಯಾಬಿಟಿಸ್, ಸೋಂಕು ಮುಂತಾದವುಗಳು ಕಾರಣ

* ಭವಿಷ್ಯದಲ್ಲಿ ತಾಯಂದಿರ ಸಾವನ್ನು ತಪ್ಪಿಸಲು 27 ಶಿಫಾರಸುಗಳನ್ನು ಮಾಡಲಾಗಿದೆ. ಪ್ರಸವ ಪೂರ್ವ ಮತ್ತು ಪ್ರಸವಾನಂತರದ ಸೇವೆಗಳನ್ನು ಉತ್ತಮಪಡಿಸುವುದರ ಜತೆಗೆ ಸೌಲಭ್ಯಗಳ ಸುಧಾರಣೆ ಬಗ್ಗೆಯೂ ಒತ್ತು ನೀಡಲು ಸೂಚಿಸಲಾಗಿದೆ. ಮುಖ್ಯವಾಗಿ, ಉತ್ತಮ ಕಟ್ಟಡ ಸೌಲಭ್ಯ, ಉಪಕರಣಗಳು, ಔಷಧಗಳು, ರಕ್ತನಿಧಿ, ಸಾಮಾನ್ಯ ಹೆರಿಗೆ ಆದವರು 3 ದಿನಗಳು ಮತ್ತು ಸಿಸೇರಿಯನ್‌ ಆದವರು 7 ದಿನಗಳು ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು

* ಸಾವಿಗೆ ಕಾರಣ ಸ್ಪಷ್ಟವಾಗಿಲ್ಲದ ಕೆಲವು ಸಂದರ್ಭಗಳಲ್ಲಿ ಮರಣೋತ್ತರ ಪರೀಕ್ಷೆಯನ್ನು ಕಡ್ಡಾಯಗೊಳಿಸಲು ಶಿಫಾರಸು

ಬಾಣಂತಿಯರ ಮರಣದ ಅನುಪಾತ ತಮಿಳುನಾಡಿಗಿಂತ ಕೇರಳದಲ್ಲಿ ಶೇ 57 ಕ್ಕಿಂತ ಕಡಿಮೆ ಇದೆ. ಅದೇ ಮಾದರಿಯನ್ನು ಇಲ್ಲಿ ಅನುಸರಿಸಲು ಸಮಗ್ರ ಸುಧಾರಣೆ ತರುತ್ತೇವೆ
ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

ತಾಲ್ಲೂಕು ಆಸ್ಪತ್ರೆಗಳ ಬಲವರ್ಧನೆ

‘ಮಧ್ಯಂತರ ವರದಿಯ ಶಿಫಾರಸಿನ ಅನ್ವಯ ಎಲ್ಲಾ ತಾಲ್ಲೂಕು ಆಸ್ಪತ್ರೆಗಳನ್ನು ಬಲವರ್ಧನೆಗೊಳಿಸಲು ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು. ‘ಕಾರ್ಯಭಾರ ಹೆಚ್ಚಿರುವ ತಾಲ್ಲೂಕುಗಳಿಗೆ ಕಾರ್ಯಭಾರ ಕಡಿಮೆ ಇರುವ ತಾಲ್ಲೂಕುಗಳ ಆಸ್ಪತ್ರೆಗಳ ವೈದ್ಯ ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗುವುದು. ಒಟ್ಟಿನಲ್ಲಿ ಪ್ರತಿ ತಾಲ್ಲೂಕು ಆಸ್ಪತ್ರೆಗೆ ತಲಾ ಇಬ್ಬರು ವಿಶೇಷ ತಜ್ಞ ವೈದ್ಯರು ಮಕ್ಕಳ ತಜ್ಞರು ಮತ್ತು ಒಬ್ಬ ಅರಿವಳಿಕೆ ತಜ್ಞರು ಕಡ್ಡಾಯವಾಗಿರುವಂತೆ ನೋಡಿಕೊಳ್ಳಲಾಗುವುದು. ಆದಷ್ಟು ಬೇಗನೇ 130 ವಿಶೇಷ ತಜ್ಞ ವೈದ್ಯರ ನೇಮಕ ಆಗಲಿದೆ’ ಎಂದರು. ‘ಮಧ್ಯಂತರ ವಿಶ್ಲೇಷಣಾ ವರದಿಯ ಶಿಫಾರಸುಗಳಲ್ಲಿ ಕೆಲವು ಈಗಾಗಲೇ ಜಾರಿಯಾಗಿವೆ. ಮುಂದಿನ ಹಂತದ ಕಾರ್ಯ ಯೋಜನೆಗೆ ₹360 ಕೋಟಿಯನ್ನು ಬಜೆಟ್‌ನಲ್ಲಿ ಮೀಸಲಿರಿಸಲಾಗಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.