ADVERTISEMENT

‘ಉತ್ತರ’ದ ನಿಧಿಯಲ್ಲಿ ಖರ್ಚಾಗದ ₹ 486 ಕೋಟಿ

ಕ್ಷೇತ್ರದ ಅಭಿವೃದ್ಧಿಗೆ ತಲಾ ₹ 2 ಕೋಟಿ lಅನುದಾನ ಬಳಕೆಗೆ ಶಾಸಕರ ನಿರಾಸಕ್ತಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 20:08 IST
Last Updated 16 ಡಿಸೆಂಬರ್ 2018, 20:08 IST

ಬೆಳಗಾವಿ:ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಈ ಭಾಗದ ಜನಪ್ರತಿನಿಧಿಗಳು ಏರು ಧ್ವನಿಯಲ್ಲಿ ಕೂಗೆಬ್ಬಿಸುತ್ತಿದ್ದಾರೆ. ಆದರೆ, ಈ ಭಾಗದ ಜಿಲ್ಲೆಗಳ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಅನುದಾನದಲ್ಲಿ ₹ 486 ಕೋಟಿ ಖರ್ಚೇ ಆಗಿಲ್ಲ.

ಅಭಿವೃದ್ಧಿಗೆ ನೀಡುತ್ತಿರುವ ಅನುದಾನ ಸಾಲದು ಎಂದು ಶಾಸಕರು ವಿಧಾನಮಂಡಲದ ಅಧಿವೇಶನಗಳಲ್ಲಿ ಪಕ್ಷಾತೀತವಾಗಿ ಆರೋಪಿಸುತ್ತಾರೆ. ಆದರೆ, ರಾಜ್ಯದಲ್ಲಿ ಶಾಸಕರ ನಿಧಿಯಡಿ ಬಿಡುಗಡೆಯಾಗಿರುವ ಭಾರಿ ಮೊತ್ತದ ಅನುದಾನ ಬಳಕೆಯೇ ಆಗಿಲ್ಲ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ಇತ್ತೀಚೆಗೆ ನೀಡಿದ ಮಾಹಿತಿಯಿಂದ ಅಂಶ ಬೆಳಕಿಗೆ ಬಂದಿದೆ.

ಪ್ರತಿ ವಿಧಾನಸಭಾ ಸದಸ್ಯರಿಗೆ ಹಾಗೂ ವಿಧಾನ ಪರಿಷತ್‌ ಸದಸ್ಯರಿಗೆ ಪ್ರತಿವರ್ಷ ಕ್ಷೇತ್ರದ ಅಭಿವೃದ್ಧಿಗಾಗಿ ತಲಾ ₹ 2 ಕೋಟಿ ಅನುದಾನ ನೀಡಲಾಗುತ್ತಿದೆ. ಶಾಸಕರ ವಿವೇಚನೆ ಹಾಗೂ ಅವರು ನೀಡುವ ಕ್ರಿಯಾಯೋಜನೆ ಆಧರಿಸಿ ಮಾರ್ಗಸೂಚಿ ಅನ್ವಯ ಆಯಾ ಜಿಲ್ಲಾಧಿಕಾರಿ ಅನುದಾನ ಬಿಡುಗಡೆ ಮಾಡುತ್ತಾರೆ. ಈ ನಿಧಿಗೆ 2018–19ನೇ ಸಾಲಿನಲ್ಲಿ ಸರ್ಕಾರ ಇದುವರೆಗೆ ₹ 292.44 ಕೋಟಿ ಬಿಡುಗಡೆ ಮಾಡಿದೆ. ಆದರೆ, ವರ್ಷದಿಂದ ವರ್ಷಕ್ಕೆ ವೆಚ್ಚವಾಗದ ಮೊತ್ತ ಬೆಟ್ಟದಂತೆ ಬೆಳೆಯುತ್ತಲೇ ಇದೆ.

ADVERTISEMENT

ಚಳಿಗಾಲದ ಅಧಿವೇಶನಕ್ಕೆ ಆತಿಥ್ಯ ವಹಿಸಿರುವ ಬೆಳಗಾವಿ ಜಿಲ್ಲೆಯಲ್ಲಿ ಬಳಕೆ ಆಗದ ಅನುದಾನ ಪ್ರಮಾಣ ಅತ್ಯಧಿಕ. 18 ವಿಧಾನಸಭಾ ಸದಸ್ಯರನ್ನು ಹೊಂದಿರುವ ಈ ಜಿಲ್ಲೆಯಲ್ಲಿ ಒಟ್ಟು ₹ 142 ಕೋಟಿ ಬಳಕೆ ಆಗದೆ ಜಿಲ್ಲಾಧಿಕಾರಿಯ ಖಾತೆಯಲ್ಲೇ ಉಳಿದಿದೆ.

ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಸರಾಸರಿ ಶೇ 51ರಷ್ಟು ಅನುದಾನ ಬಳಕೆ ಆಗದೇ ಉಳಿದಿದೆ.

2001–02ರಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಆರಂಭಿಸಲಾಗಿತ್ತು. ಆಗ ಪ್ರತಿ ವಿಧಾನ ಸಭಾ ಸದಸ್ಯರಿಗೆ ತಲಾ ₹ 25 ಲಕ್ಷ ಬಿಡುಗಡೆ ಮಾಡಲಾಗಿತ್ತು. 2006ರಲ್ಲಿ ಈ ಮೊತ್ತವನ್ನು ₹ 1 ಕೋಟಿಗೆ ಹಾಗೂ 2013ರಲ್ಲಿ ₹ 2 ಕೋಟಿಗೆ ಹೆಚ್ಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.