ADVERTISEMENT

ಖಾಸಗಿ ಆಸ್ಪತ್ರೆಗಳ ಶೇ‌.50ರಷ್ಟು ಹಾಸಿಗೆ ಕೋವಿಡ್ ಸೋಂಕಿತರಿಗೆ: ಸಚಿವ ಸುಧಾಕರ್

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 19:37 IST
Last Updated 12 ಏಪ್ರಿಲ್ 2021, 19:37 IST
ಆರೋಗ್ಯ ಸಚಿವ ಡಾ. ಕೆ. ಸುಧಾಕರ್
ಆರೋಗ್ಯ ಸಚಿವ ಡಾ. ಕೆ. ಸುಧಾಕರ್   

ಬೆಂಗಳೂರು: 'ಖಾಸಗಿ ಆಸ್ಪತ್ರೆಯವರು ಒಂದು ವಾರದ ಒಳಗೆ ಶೇ‌ 50ರಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಕೊಡಲು ಒಪ್ಪಿದ್ದಾರೆ' ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು

ಖಾಸಗಿ ಆಸ್ಪತ್ರೆಗಳ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಜೊತೆ ಸೋಮವಾರ ವಿಡಿಯೊ ಸಂವಾದ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 'ಕೋವಿಡ್ ಪ್ರಕರಣಗಳ ಸಂಖ್ಯೆ ದಿನನಿತ್ಯ ಹೆಚ್ಚುತ್ತಿದೆ. ಕೋವಿಡ್ ಅಲ್ಲದ ರೋಗಿಗಳಿಗೂ ಹಾಸಿಗೆ ಮೀಸಲಿಡಲು ಮನವಿ ಮಾಡಿದ್ದೇವೆ. ರೋಗದ ಲಕ್ಷಣ ಸ್ವಲ್ಪ ಇರುವ ಅಥವಾ ಯಾವುದೇ ರೋಗಲಕ್ಷಣ ಇಲ್ಲದವರು ಆಸ್ಪತ್ರೆಯಲ್ಲಿ ಇರಬೇಕು ಎಂದು ಬಯಸುವವರು ಹೋಟೆಲ್‌ನಲ್ಲಿ ಇರಲು ಸೂಚನೆ ನೀಡಿದ್ದೇವೆ. ಆಸ್ಪತ್ರೆಗಳಲ್ಲಿ ಸಿಗುವ ಹಾಸಿಗೆಗಳು ಅನಿವಾರ್ಯ ಇರುವವರಿಗೆ ಅನುಕೂಲವಾಗಲಿದೆ' ಎಂದರು.

'ಕೋವಿಡ್ ಚಿಕಿತ್ಸೆಗೆ ರೆಮಿಡಿಸೀವರ್ ಅವಶ್ಯಕತೆ ಇದೆ. ಅದರ ತಯಾರಿಕೆ ಕಡಿಮೆಯಾಗಿದೆ. ರಾಜ್ಯದಲ್ಲಿ ಸಾಕಷ್ಟು ರೆಮಿಡಿಸೀವರ್ ಲಭ್ಯತೆ ಇದೆ. ಆದರೆ, ಖಾಸಗಿ ಆಸ್ಪತ್ರೆಯವರು ಇಲ್ಲವೆಂದು ಹೇಳಿದ್ದಾರೆ. ಎಷ್ಟು ಬೇಕಿದೆ ಎಂದು ಖಾಸಗಿ ಆಸ್ಪತ್ರೆಗಳಿಂದ ಲೆಕ್ಕ ಪಡೆದು. ಸರ್ಕಾರ ಪಡೆದ ದರದಲ್ಲೇ ಪೂರೈಸುತ್ತೇವೆ' ಎಂದರು.

ADVERTISEMENT

'ಜನರು ಅನಗತ್ಯವಾಗಿ ಸೇರುವುದು ಬಿಡಬೇಕು. ನಾವೇ ನಿಬಂದನೆ ಹಾಕಿಕೊಂಡರೆ ಲಾಕ್ ಡೌನ್ ಮಾಡುವ ಅವಶ್ಯಕತೆ ಇಲ್ಲ. ಏನೆಲ್ಲ ಮಾಡಬೇಕೋ ಅದೆಲ್ಲವನ್ನೂ ಸರ್ಕಾರ ವತಿಯಿಂದ ಪೂರ್ವ ಯೋಜಿತವಾಗಿ ಮಾಡುತಿದ್ದೇವೆ. ಲಾಕ್ ಡೌನ್ ಮಾಡುತ್ತೇವೆ ಎಂದು ಮುಖ್ಯಮಂತ್ರಿಯಾಗಲಿ, ನಾನಾಗಲಿ ಹೇಳಿಲ್ಲ. ನಮಗೆ ಸುತಾರಾಂ ಇಷ್ಟ ಇಲ್ಲ. ಲಾಕ್ ಡೌನ್‌ನಿಂದ ಎಷ್ಟು ಆರ್ಥಿಕ ಕಷ್ಟ ಇದೆ ಅನ್ನೋದು ಗೊತ್ತಿದೆ. ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡುತ್ತೇವೆ' ಎಂದರು.

'ಯುಗಾದಿ ಎಲ್ಲರಿಗೂ ದೊಡ್ಡ ಹಬ್ಬ. ಕೋವಿಡ್ ಬಂದಿದ್ದು, ಲಸಿಕೆ ಎಲ್ಲರೂ ಪಡೆಯಿರಿ. ಬೇವು ಕೋವಿಡ್, ಬೆಲ್ಲ ಲಸಿಕೆ. ಎಲ್ಲರೂ ಲಸಿಕೆ ಪಡೆಯಿರಿ. ಹಳ್ಳಿಗೆ ಹೋಗುವುದು ಕಡಿಮೆ ಮಾಡಿ ಎಂದು ಮನವಿ ಮಾಡುತ್ತೇನೆ. ಹಳ್ಳಿಯಲ್ಲಿ ಇರುವವರು ಸುರಕ್ಷಿತವಾಗಿ ಇರಲಿ. ಇಲ್ಲಿಂದ ರೋಗ ತೆಗೆದುಕೊಂಡು ಹೋಗುವುದು ಬೇಡ' ಎಂದೂ ಅವರು ವಿನಂತಿಸಿದರು.

‘ಏಕಾಏಕಿ ರೋಗಿಗಳ ಬಿಡುಗಡೆ ಅಸಾಧ್ಯ’

‘ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಕೋವಿಡೇತರ ರೋಗಿಗಳು ದಾಖಲಾಗಿ, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರನ್ನು ಏಕಾಏಕಿ ಆಸ್ಪತ್ರೆಯಿಂದ ಮನೆಗೆ ಕಳುಹಿಸಲು ಸಾಧ್ಯವಿಲ್ಲ. ಹಾಗಾಗಿ, ಒಂದು ವಾರದ ಗಡುವು ಕೋರಿದ್ದು, ಸದ್ಯ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ 850 ಹಾಸಿಗೆಗಳ ಮಾಹಿತಿ ನೀಡಿದ್ದೇವೆ.ಸರ್ಕಾರವು ಪ್ರತಿ ಖಾಸಗಿ ಆಸ್ಪತ್ರೆಗಳಿಗೆ ಆಪ್ತ ಮಿತ್ರ ಸಿಬ್ಬಂದಿಯನ್ನು ನೇಮಿಸಿ, ಅವರ ಮೂಲಕ ಹಾಸಿಗೆಗಳ ಮಾಹಿತಿ ಪಡೆದುಕೊಳ್ಳಬೇಕು. ‘ರೆಮ್‌ಡಿಸಿವಿರ್’ ಔಷಧ ಪೂರೈಸುವಂತೆ ಮನವಿ ಮಾಡಿಕೊಂಡಿದ್ದೇವೆ’ ಎಂದು ಫಾನಾ ಅಧ್ಯಕ್ಷ ಡಾ. ಪ್ರಸನ್ನ ಎಚ್.ಎಂ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.