ADVERTISEMENT

₹ 532 ಕೋಟಿ ವೆಚ್ಚದಲ್ಲಿ ಅನುಭವ ಮಂಟಪ: ರಾಜ್ಯ ಸರ್ಕಾರ

​ಪ್ರಜಾವಾಣಿ ವಾರ್ತೆ
Published 5 ಮೇ 2022, 19:45 IST
Last Updated 5 ಮೇ 2022, 19:45 IST
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ   

ಬೆಂಗಳೂರು: ಬಸವಕಲ್ಯಾಣದಲ್ಲಿ ₹ 532 ಕೋಟಿ ವೆಚ್ಚದಲ್ಲಿ ‘ಅನುಭವ ಮಂಟಪ’ ನಿರ್ಮಾಣ ಯೋಜನೆಯಕಾಮಗಾರಿ ಕೈಗೊಳ್ಳಲು ರಾಜ್ಯ ಸರ್ಕಾರ ಗುರುವಾರ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯ ಸಭೆ ಗುರುವಾರ ನಡೆಯಿತು. ಮೂರು ವರ್ಷಗಳ ಒಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿ ಸೂಚಿಸಿದರು.

‘ಅನುಭವ ಮಂಟಪ ಬಸವಣ್ಣನವರ ಕ್ರಾಂತಿಕಾರಿ ವೇದಿಕೆ. ಈ ಮಂಟಪದ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದುವ ಕೆಲಸವನ್ನು ಅವರು ಮಾಡಿದ್ದಾರೆ. ಅವರು ಮಾಡಿರುವ ಸಾಮಾಜಿಕ ಕ್ರಾಂತಿಯನ್ನು ಪ್ರತಿಬಿಂಬಿಸುವ ರೂಪದಲ್ಲಿ ಅನುಭವ ಮಂಟಪ ನಿರ್ಮಾಣ ಆಗಬೇಕು. 12ನೇ ಶತಮಾನದಲ್ಲಿ ಇದ್ದಂಥ ವಚನಕಾರರು, ದಾರ್ಶನಿಕ ಪುರುಷರ ಕುರಿತು ಮಾಹಿತಿ ನೀಡುವಂಥ ಕಿರುಚಿತ್ರಗಳ ಪ್ರದರ್ಶನ, ಬಸವಣ್ಣನವರ ಜೀವನ ಸಾಧನೆ ಬಿಂಬಿಸುವ ಮಾಹಿತಿಗಳನ್ನು ಅನುಭವ ಮಂಟಪ ವೀಕ್ಷಿಸಲು ಬರುವ ಎಲ್ಲರಿಗೂ ವಿವರಿಸುವ ವ್ಯವಸ್ಥೆಯೂ ಇರಬೇಕು’ ಎಂದು ಅವರು ಸಭೆಗೆ ತಿಳಿಸಿದರು.

ADVERTISEMENT

ಕಂದಾಯ ಸಚಿವ ಆರ್. ಅಶೋಕ, ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ರಘುನಾಥ ರಾವ್ ಮಲ್ಕಾಪುರೆ, ಅಮರನಾಥ ಪಾಟೀಲ, ಈಶ್ವರ ಖಂಡ್ರೆ, ಶಶೀಲ್ ಜಿ. ನಮೋಶಿ, ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ವಿಶೇಷ ಅಧಿಕಾರಿ, ಬೀದರ್ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಬಸವಕಲ್ಯಾಣ ಅವೃದ್ಧಿ ಮಂಡಳಿಯ ಆಯುಕ್ತ ಶಿವಕುಮಾರ್ ಶೀಲವಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.