ADVERTISEMENT

ಮಂಡ್ಯ: ಕ್ಯಾಂಟೀನ್‌ನಲ್ಲಿ ಬಹುರೂಪಿ ರಾಜಕೀಯ

ಎಂ.ಎನ್.ಯೋಗೇಶ್‌
Published 1 ಜನವರಿ 2018, 19:30 IST
Last Updated 1 ಜನವರಿ 2018, 19:30 IST
ಮಂಡ್ಯದ ಆಸ್ಪತ್ರೆ ರಸ್ತೆಯಲ್ಲಿರುವ ರಮ್ಯಾ ಕ್ಯಾಂಟೀನ್‌ನಲ್ಲಿ ಜನಜಾತ್ರೆ
ಮಂಡ್ಯದ ಆಸ್ಪತ್ರೆ ರಸ್ತೆಯಲ್ಲಿರುವ ರಮ್ಯಾ ಕ್ಯಾಂಟೀನ್‌ನಲ್ಲಿ ಜನಜಾತ್ರೆ   

ಮಂಡ್ಯ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ನಗರದಲ್ಲಿ 10ಕ್ಕೂ ಹೆಚ್ಚು ರಾಜಕೀಯ ಕೃಪಾ ಪೋಷಿತ ಕ್ಯಾಂಟೀನ್‌ಗಳು ಸದ್ದು ಮಾಡುತ್ತಿವೆ. ಕೇವಲ ₹ 10ಕ್ಕೆ ತಿಂಡಿ, ಊಟ ಕೊಡುತ್ತಿದ್ದು, ಬಡವರ ಹೊಟ್ಟೆ ತುಂಬಿಸುತ್ತಿವೆ.

ರಾಜ್ಯ ಸರ್ಕಾರ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ ಜಿಲ್ಲೆಗೂ ಬಂದಿದ್ದು, ಹೊಳಲು ವೃತ್ತದಲ್ಲಿ ಸ್ಥಳ ಗುರುತಿಸಲಾಗಿದೆ. ಜೆಡಿಎಸ್‌ ಮುಖಂಡರ ನೇತೃತ್ವದಲ್ಲಿ ಎರಡು ‘ಅಪ್ಪಾಜಿ’ ಕ್ಯಾಂಟೀನ್‌ಗಳು ಭರ್ಜರಿಯಾಗಿ ನಡೆಯುತ್ತಿವೆ. ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯ ನಗರಸಭೆ ವಾಣಿಜ್ಯ ಸಂಕೀರ್ಣ ಹಾಗೂ ಹೊಸಹಳ್ಳಿ ಸರ್ಕಲ್‌ನಲ್ಲಿ ತೆರೆಯಲಾಗಿದೆ. ನಗರಸಭೆ ಕಟ್ಟಡದಲ್ಲಿರುವ ಕ್ಯಾಂಟೀನ್‌ ತರಕಾರಿ ಮಾರುಕಟ್ಟೆಯ ಸಮೀಪದಲ್ಲಿದ್ದು ಹಳ್ಳಿ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಈ ಕ್ಯಾಂಟೀನ್‌ನಿಂದಾಗಿ ಅದೇ ಕಟ್ಟಡದಲ್ಲಿರುವ ಇತರ ಕ್ಯಾಂಟೀನ್‌ಗಳ ವ್ಯಾಪಾರ ಕುಸಿದಿದೆ. ಮಾರುಕಟ್ಟೆ ರಸ್ತೆ ಬದಿಯಲ್ಲಿದ್ದ ಎರಡು ಫಾಸ್ಟ್‌ಫುಡ್‌ ಕೇಂದ್ರಗಳು ಸ್ಥಗಿತಗೊಂಡಿವೆ.

‘ಲೋಕಸಭೆ ಚುನಾವಣೆ ವೇಳೆ ನಮೋ ಟೀ ಸ್ಟಾಲ್‌ ಆರಂಭಿಸಲಾಗಿತ್ತು. ಆಗ ಉಚಿತವಾಗಿ ಟೀ ವಿತರಣೆ ಮಾಡುತ್ತಿದ್ದರು. ಹೀಗಾಗಿ,  ಒಂದೂವರೆ ತಿಂಗಳು ನಮ್ಮ ಟೀ ಸ್ಟಾಲ್‌ನಲ್ಲಿ ವ್ಯಾಪಾರ ನಡೆಯಲಿಲ್ಲ. ಚುನಾವಣೆ ಮುಗಿದ ದಿನವೇ ಟೀ ಸ್ಟಾಲ್‌ ಮುಚ್ಚಿತು. ಈಗಲೂ ಅದೇ ರೀತಿ ಆಗುತ್ತದೆ. ಚುನಾವಣೆ ಮುಗಿದ ಕೂಡಲೇ ಈ ಕ್ಯಾಂಟೀನ್‌ಗಳು ಮಾಯವಾಗುತ್ತವೆ’ ಎಂದು ನಗರಸಭೆ ಕಟ್ಟಡದಲ್ಲಿ ಟೀ ವ್ಯಾಪಾರ ಮಾಡುವ ನಾಗರಾಜ್‌ ಹೇಳುತ್ತಾರೆ.

ADVERTISEMENT

ರಮ್ಯಾ ಕ್ಯಾಂಟೀನ್‌

ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಹೆಸರಿನಲ್ಲಿರುವ ಕ್ಯಾಂಟೀನ್‌ ಜಿಲ್ಲಾಸ್ಪತ್ರೆ ರಸ್ತೆಯಲ್ಲಿ ಸಾರ್ವಜನಿಕರ ಮನ ಸೆಳೆದಿದೆ. ಆಸ್ಪತ್ರೆ ಪಕ್ಕದಲ್ಲೇ ಇರುವುದು ರೋಗಿಗಳಿಗೆ ವರವಾಗಿದೆ. ಇಲ್ಲಿ ಸಾವಿರಕ್ಕೂ ಹೆಚ್ಚು ಜನರು ನಿತ್ಯ ಊಟ ಮಾಡುತ್ತಾರೆ. ರಘು ಎನ್ನುವವರು ಕ್ಯಾಂಟೀನ್‌ ಆರಂಭಿಸಿದ್ದಾರೆ. ಮಳಿಗೆಯ ಬಾಡಿಗೆಯನ್ನು ಕಾಂಗ್ರೆಸ್‌ ಜಿಲ್ಲಾ ಘಟಕ ಭರಿಸುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ಕ್ಯಾಂಟೀನ್‌ನಿಂದಾಗಿ ಆಸ್ಪತ್ರೆ ರಸ್ತೆಯಲ್ಲಿದ್ದ ನಾಲ್ಕೈದು ಫಾಸ್ಟ್‌ಫುಡ್‌ ಮಳಿಗೆಗಳು ತಮ್ಮ ಸ್ಥಳ ಬದಲು ಮಾಡಿವೆ.

ಮಹಿಳೆಯರಿಂದ ಮಹಿಳೆಯರಿಗಾಗಿ

ನಗರದ ಗುತ್ತಲು ಬಡಾವಣೆಯಲ್ಲಿ ಮಹಿಳಾ ಸಂಘದ ಐವರು ಮಹಿಳೆಯರು  ‘ಜನಸ್ನೇಹಿ ಮಹಿಳಾ ಕ್ಯಾಂಟೀನ್‌’ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ, ಶಾಸಕ ಅಂಬರೀಷ್‌ ಬೆಂಬಲಿಗ ಪಿ.ರವಿಕುಮಾರ್‌ಗೌಡ ಗಣಿಗ ಕೃಪೆಯಿಂದ ಈ ಕ್ಯಾಂಟೀನ್‌ ನಡೆಯುತ್ತಿದೆ. ಡಿ.31ರಂದು ತಮ್ಮ ಜನ್ಮದಿನದ ಅಂಗವಾಗಿ ಹೊಸಹಳ್ಳಿ ವೃತ್ತದಲ್ಲಿ ಇನ್ನೊಂದು ‘ರವಿ ಗಣಿಗ’ ಕ್ಯಾಂಟೀನ್‌ ಆರಂಭಿಸಿದ್ದಾರೆ.

‘ನಾನು ಹಲವು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದೇನೆ. ಕ್ಯಾಂಟೀನ್‌ಗೆ ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಇದರಿಂದ ಮಹಿಳಾ ಸಂಘದ ಸದಸ್ಯೆಯರಿಗೆ ಕೆಲಸ ಸಿಕ್ಕಿದೆ. ಬಡವರು, ಶ್ರಮಿಕರಿಗೆ ಕಡಿಮೆ ಹಣಕ್ಕೆ ಊಟ ಸಿಗುತ್ತಿದೆ’ ಎಂದು ರವಿಕುಮಾರ್‌ಗೌಡ ತಿಳಿಸಿದರು.

₹ 5ಕ್ಕೆ ಊಟ

ಜೆಡಿಎಸ್, ಕಾಂಗ್ರೆಸ್‌ನವರಿಗಿಂತ ಕಡಿಮೆ ಇಲ್ಲ ಎಂಬಂತೆ ಬಿಜೆಪಿಯವರೂ ಕ್ಯಾಂಟೀನ್ ಆರಂಭಿಸಲು ಪೈಪೋಟಿ ನಡೆಸಿದ್ದಾರೆ. ಯಡಿಯೂರಪ್ಪ ಅಭಿಮಾನಿಗಳ ಸಂಘದ ವತಿಯಿಂದ ಹೊಸದಾಗಿ ‘ಯಡಿಯೂರಪ್ಪ ಜೀ ಕ್ಯಾಂಟೀನ್‌’ ಆರಂಭವಾಗುತ್ತಿದೆ. ಇಲ್ಲಿ ಏನೇ ಕೊಂಡರೂ ₹ 5 ಎಂದು ಜಿಲ್ಲಾ ಘಟಕದ ಅಧ್ಯಕ್ಷ ಜಿತೇಂದ್ರ ತಿಳಿಸಿದ್ದಾರೆ. ಜ.19ರಂದು ಪರಿವರ್ತನಾ ರ‍್ಯಾಲಿ ಅಂಗವಾಗಿ ನಗರಕ್ಕೆ ಬರುತ್ತಿರುವ ಬಿ.ಎಸ್‌. ಯಡಿಯೂರಪ್ಪ ಕ್ಯಾಂಟೀನ್‌ ಉದ್ಘಾಟಿಸಲಿದ್ದಾರೆ.

ಇವಿಷ್ಟು ಮಾತ್ರವಲ್ಲದೆ ವಿವೇಕಾನಂದ ರಸ್ತೆಯಲ್ಲಿ ಅಪ್ಪಾಜಿ (ಡಾ.ರಾಜ್‌ಕುಮಾರ್‌) ಕ್ಯಾಂಟೀನ್‌, ಫ್ಯಾಕ್ಟರಿ ವೃತ್ತದಲ್ಲಿ ಮಹಾತ್ಮ ಗಾಂಧಿ ಕ್ಯಾಂಟೀನ್‌, ಮಹಾವೀರ ವೃತ್ತದಲ್ಲಿ ವಿಷ್ಣುವರ್ಧನ್‌ ಕ್ಯಾಂಟೀನ್‌ ಆರಂಭವಾಗಿವೆ. ಇವೆಲ್ಲವೂ ವಿವಿಧ ಪಕ್ಷಗಳ ಟಿಕೆಟ್‌ ಆಕಾಂಕ್ಷಿಗಳ ಕೃಪೆಯಿಂದ ನಡೆಯುತ್ತಿವೆ.

ಉದ್ಯೋಗ ಮೇಳ, ಕಬಡ್ಡಿ, ಪೌರಾಣಿಕ ನಾಟಕ

ಚುನಾವಣೆ ಸಮೀಪಿಸಿದಂತೆ ಮಂಡ್ಯ ಜಿಲ್ಲೆ ಹಲವು ಕುತೂಹಲಕರ ಸಂಗತಿಗಳಿಂದ ಗಮನ ಸೆಳೆಯುತ್ತಿದೆ. ಮೇಲುಕೋಟೆ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ರೇವಣ್ಣ, ಮದ್ದೂರು ಕ್ಷೇತ್ರದಲ್ಲಿ ಜೆಡಿಎಸ್‌ ಟಿಕೆಟ್‌ ಮೇಲೆ ಕಣ್ಣಿಟ್ಟಿರುವ ಪಿ.ಸ್ವಾಮಿ ಉದ್ಯೋಗ ಮೇಳ ಆಯೋಜಿಸಿದ್ದಾರೆ. ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಮಧುಚಂದನ್‌ ಕಬಡ್ಡಿ ಟೂರ್ನಿ ಏರ್ಪಡಿಸಿದ್ದಾರೆ. ರಾಜ್ಯ ರಾಜಕೀಯಕ್ಕೆ ಬರಲು ಹವಣಿಸುತ್ತಿರುವ ಸಂಸದ ಸಿ.ಎಸ್‌.ಪುಟ್ಟರಾಜು ಪೌರಾಣಿಕ ನಾಟಕೋತ್ಸವ ಆಯೋಜಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.