ADVERTISEMENT

ಕಳಂಕಿತ ಅಧಿಕಾರಿಗೆ ಐಎಎಸ್‌ ಹುದ್ದೆ ?

ಮಂಜುನಾಥ್‌ಗೆ ಬಡ್ತಿ ನೀಡಲು ಶಿಫಾರಸು: 10 ವರ್ಷ ಸೇವಾವಧಿ ಇರುವವರಿಗೆ ತಪ್ಪಿದ ಅವಕಾಶ

ವೈ.ಗ.ಜಗದೀಶ್‌
Published 4 ಜನವರಿ 2018, 19:30 IST
Last Updated 4 ಜನವರಿ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೆಎಎಸ್ ವೃಂದದಲ್ಲದ ಅಧಿಕಾರಿಗಳಿಗೆ (ನಾನ್ ಕೆಎಎಸ್‌) ಐಎಎಸ್‌ ಹುದ್ದೆಗೆ ಬಡ್ತಿ ನೀಡುವ ಸಂಬಂಧ ರಾಜ್ಯ ಸರ್ಕಾರವು ಕೇಂದ್ರಕ್ಕೆ ಕಳುಹಿಸಿರುವ ಪಟ್ಟಿಯಲ್ಲಿ ಲೋಕಾಯುಕ್ತ ದಾಳಿಗೆ ಸಿಕ್ಕಬಿದ್ದ ಅಬಕಾರಿ ಜಂಟಿ ಆಯುಕ್ತ ಡಾ.ವೈ. ಮಂಜುನಾಥ್‌ ಹೆಸರು ಇದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್) 15 ಅಧಿಕಾರಿಗಳಿಗೆ ಬಡ್ತಿ ನೀಡುವ ಸಂಬಂಧ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ (ಡಿಒಪಿಟಿ) 2017ರ ಡಿಸೆಂಬರ್ 27ರಂದು ಪಟ್ಟಿ ರವಾನಿಸಿದೆ.

ಕೆಎಎಸ್‌ ವೃಂದದವರಲ್ಲದ ಸಾರಿಗೆ, ಅಬಕಾರಿ, ಲೆಕ್ಕಪತ್ರ, ಪಂಚಾಯತ್ ರಾಜ್, ವಾರ್ತಾ ಇಲಾಖೆಯಲ್ಲಿ ಸೇವಾ ಹಿರಿತನ ಹೊಂದಿರುವ ಹಾಗೂ ಐಎಎಸ್‌ಗೆ ಬಡ್ತಿ ಪಡೆಯುವ ಅರ್ಹತೆ ಇದ್ದ 35 ಅಧಿಕಾರಿಗಳ ಹೆಸರನ್ನು ಡಿಪಿಎಆರ್ ಪಟ್ಟಿ ಮಾಡಿತ್ತು. ಈ ಪೈಕಿ ಅರ್ಹತೆ ಇರುವವರನ್ನು ಬಿಟ್ಟು ಕಳಂಕಿತರು ಹಾಗೂ ಕೆಲವು ಪ್ರಭಾವಿಗಳ ಹೆಸರನ್ನು ಶಿಫಾರಸು ಮಾಡಿರುವುದಕ್ಕೆ ಅಧಿಕಾರಿಗಳ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ADVERTISEMENT

ಇಲ್ಲ ವಿಚಾರಣೆ– ಬಡ್ತಿಗೆ ಮಣೆ: 2012ರಲ್ಲಿ ಮೈಸೂರು ಜಿಲ್ಲೆಯ ಅಬಕಾರಿ ಅಧೀಕ್ಷಕರಾಗಿದ್ದ ಮಂಜುನಾಥ್‌ (ಸದ್ಯ ಬೆಳಗಾವಿ ವಿಭಾಗದ ಜಂಟಿ ಆಯುಕ್ತ) ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು.

ಮಂಜುನಾಥ್ ಕಚೇರಿಯಲ್ಲಿ ₹1.55 ಲಕ್ಷ ಹಾಗೂ ಇತರೆ ಸಿಬ್ಬಂದಿ ಬಳಿ ಇದ್ದ ಹಣ ಸೇರಿ ಒಟ್ಟು ₹4.19 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದರು. ಈ ಸಂಬಂಧ ಎಂಟು ಜನರ ಮೇಲೆ ಪ್ರಥಮ ವರ್ತಮಾನ ವರದಿ ದಾಖಲಾಗಿತ್ತು. ಈ ಪ್ರಕರಣದಲ್ಲಿ ಮಂಜುನಾಥ್ ಜೈಲುವಾಸ ಅನುಭವಿಸಿದ್ದರು.

ಹೆಚ್ಚಿನ ಮಾಹಿತಿ ಕಲೆ ಹಾಕಿದ್ದ ಲೋಕಾಯುಕ್ತ ಪೊಲೀಸರು, ಮಂಜುನಾಥ್‌ ಆದಾಯ ಮೀರಿ ಆಸ್ತಿ ಗಳಿಸಿರುವುದನ್ನು ಪತ್ತೆ ಹಚ್ಚಿದ್ದರು. ಎಲ್ಲ ಎಂಟು ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ವಿಚಾರಣೆಗೆ ಗುರಿಪಡಿಸಲು ಮೈಸೂರು ಲೋಕಾಯುಕ್ತ ಎಸ್.ಪಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇವರಲ್ಲಿ ಏಳು ಜನರನ್ನು ವಿಚಾರಣೆಗೆ ಗುರಿಪಡಿಸಲು ಅನುಮತಿ ನೀಡಲಾಗಿತ್ತು. ಇವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.

ಮಂಜುನಾಥ್‌ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ವಿಚಾರಣೆ ಗುರಿಪಡಿಸಲು ಅನುಮತಿ ನೀಡುವಂತೆ 2016ರಿಂದ ಸರ್ಕಾರಕ್ಕೆ ಪದೇ ಪದೇ ಪ್ರಸ್ತಾವನೆ ಕಳುಹಿಸಲಾಗುತ್ತಿದೆ. ಆದರೆ, ಈವರೆಗೂ ಅನುಮತಿ ನೀಡಿಲ್ಲ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

‘ಮಂಜುನಾಥ್ ಹಾಲಿ ಸಹಕಾರಿ ಸಚಿವ ರಮೇಶ ಜಾರಕಿಹೊಳಿ, ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ, ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಭಾವ. ಮಂಜುನಾಥ್‌ಗೆ ಐಎಎಸ್ ಹುದ್ದೆಗೆ ಬಡ್ತಿ ನೀಡುವಂತೆ ಶಿಫಾರಸು ಮಾಡದೇ ಇರುವ ಕಾರಣಕ್ಕೆ ಸತೀಶ ಜಾರಕಿಹೊಳಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಬಂಧ ಹಳಸಿತ್ತು. ಬೆಳಗಾವಿಯಲ್ಲಿ ನವೆಂಬರ್‌ನಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ವೇಳೆ ಈ ಬಗ್ಗೆ ಮಾತುಕತೆ ನಡೆಯಿತು. ಹೀಗಾಗಿ, ಸಿದ್ದರಾಮಯ್ಯ–ಜಾರಕಿಹೊಳಿ ಬಾಂಧವ್ಯ ಮತ್ತೆ ಚಿಗುರಿದೆ’ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ಗುಟ್ಟು ಬಿಡದ ಡಿಪಿಎಆರ್: ಕೇಂದ್ರಕ್ಕೆ ಕಳುಹಿಸಿರುವ ಪಟ್ಟಿಯಲ್ಲಿ ಯಾರ ಹೆಸರಿದೆ ಎಂಬ ಗುಟ್ಟನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಬಿಟ್ಟುಕೊಡುತ್ತಿಲ್ಲ. ಯಾವುದೇ ಅಧಿಕಾರಿಗಳ ಬಳಿ ಹೋದರೂ 35 ಜನರ ಹೆಸರಿರುವ ಮೊದಲ ಪಟ್ಟಿ ನೋಡಿದ್ದೇವೆ. ಶಿಫಾರಸು ಮಾಡಿದ ಪಟ್ಟಿಯ ಬಗ್ಗೆ ಗೊತ್ತಿಲ್ಲ. ಮುಖ್ಯ ಕಾರ್ಯದರ್ಶಿ ಹಾಗೂ ಡಿಪಿಎಆರ್ ಪ್ರಧಾನ ಕಾರ್ಯದರ್ಶಿಯವರನ್ನು ಕೇಳಿ ಎಂದು ಸಾಗ ಹಾಕುತ್ತಾರೆ.

ಕೆಎಎಸ್ ಅಲ್ಲದ ಅಧಿಕಾರಿಗಳ ಹೆಸರುಗಳನ್ನು ಶಿಫಾರಸು ಮಾಡುವಾಗ ಯಾವುದೇ ನಿರ್ಬಂಧ ಇರಲಿಲ್ಲ. ಯಾವುದೇ ಕಳಂಕ ಇಲ್ಲದ, ಸೇವಾ ಹಿರಿತನ ಹೊಂದಿದವರ ಹೆಸರನ್ನು ಕಳುಹಿಸಲಾಗುತ್ತಿತ್ತು. ಕೆಲವು ಪ್ರಭಾವಿಗಳ ಹೆಸರನ್ನು ಪಟ್ಟಿಯಲ್ಲಿ ಸೇರಿಸುವ ಉದ್ದೇಶದಿಂದ ಸ್ವಯಂ ನಿರ್ಬಂಧವನ್ನು ಡಿಪಿಎಆರ್ ವಿಧಿಸಿಕೊಂಡಿದೆ.

ಬಡ್ತಿ ಪಡೆಯಲು ಇನ್ನೂ ಅವಕಾಶ ಇದೆ ಎಂಬ ಕಾರಣ ಮುಂದೊಡ್ಡಿ, 10 ವರ್ಷ ಸೇವಾವಧಿ ಇರುವ ಅಧಿಕಾರಿಗಳ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಇದರಿಂದಾಗಿ ರಾಜ್ಯ ಲೆಕ್ಕಪತ್ರ ಇಲಾಖೆ, ಪಂಚಾಯತ್ ರಾಜ್‌ ಹಾಗೂ ಸಾರಿಗೆ ಇಲಾಖೆಯ ಕೆಲವು ಅಧಿಕಾರಿಗಳಿಗೆ ಈ ಸಾಲಿನಲ್ಲಿ ಅವಕಾಶ ತಪ್ಪಿಹೋಗಿದೆ ಎಂದು ಅಧಿಕಾರಿಗಳು ಅಲವತ್ತುಕೊಳ್ಳುತ್ತಾರೆ.

ಅವಕಾಶ ತಪ್ಪಿಸಿರುವುದು ಹಾಗೂ ಕಳಂಕಿತರ ಹೆಸರು ಇರುವ ಕಾರಣಕ್ಕೆ ಪಟ್ಟಿಯನ್ನು ರಹಸ್ಯವಾಗಿ ಇಡಲಾಗಿದೆ. ಹಿಂದೆಲ್ಲ ಪಟ್ಟಿ ಹೋಗುತ್ತಿದ್ದಂತೆ ಮಾಹಿತಿ ಸಿಗುತ್ತಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.