ADVERTISEMENT

ಸೂಳೆಕೆರೆ ದಡದಲ್ಲಿ ಕೊಕ್ಕರೆ, ನೀರು ಕೋಳಿ ಸಾವು

ಸ್ಥಳಕ್ಕೆ ಪಶುಪಾಲನಾ ಇಲಾಖೆ ಅಧಿಕಾರಿಗಳ ಭೇಟಿ: ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 19:38 IST
Last Updated 7 ಜನವರಿ 2018, 19:38 IST
ಸೂಳೆಕೆರೆ ದಡದಲ್ಲಿ ಕೊಕ್ಕರೆ, ನೀರು ಕೋಳಿ ಸಾವು
ಸೂಳೆಕೆರೆ ದಡದಲ್ಲಿ ಕೊಕ್ಕರೆ, ನೀರು ಕೋಳಿ ಸಾವು   

ಭಾರತೀನಗರ (ಮಂಡ್ಯ ಜಿಲ್ಲೆ): ಇಲ್ಲಿಗೆ ಸಮೀಪದ ಸೂಳೆಕೆರೆಯ ದಡದಲ್ಲಿ ಎರಡು ಕೊಕ್ಕರೆ ಹಾಗೂ ನೀರು ಕೋಳಿ ಕಳೇಬರ ಪತ್ತೆಯಾಗಿವೆ.

ಕೊಕ್ಕರೆ ಹಾಗೂ ನೀರು ಕೋಳಿಗಳ ಕಳೇಬರಗಳು ಕೊಳೆತ ಸ್ಥಿತಿಯಲ್ಲಿದ್ದು, ಸತ್ತು ಹಲವು ದಿನಗಳೆ ಕಳೆದಿದೆ ಎಂದು ಶಂಕಿಸಲಾಗಿದೆ. ಕೊಕ್ಕರೆ ಬೆಳ್ಳೂರಿನಲ್ಲಿ ಈಚೆಗೆ 7ಕ್ಕೂ ಹೆಚ್ಚು ಕೊಕ್ಕರೆಗಳು ಮೃತಪಟ್ಟಿದ್ದು, ಅವುಗಳ ಸಾವಿಗೆ ಜಂತುಹುಳು ಕಾರಣ ಎಂದು ಪ್ರಯೋಗಾಲಯ ವರದಿ ತಿಳಿಸಿದೆ. ಅಲ್ಲಿಂದಲೇ ಸೂಳೆಕೆರೆಗೆ ಬಂದು ಕೊಕ್ಕರೆಗಳು ಸಾವನ್ನಪ್ಪಿರಬಹುದೆಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಲ್‌.ಹನುಮೇಗೌಡ ಹಾಗು ಪಶು ವೈದ್ಯ ಡಾ.ಮನೋಹರ್‌ ಅವರು ಭಾನುವಾರ ಸೂಳೆಕೆರೆಗೆ ಭೇಟಿ ನೀಡಿ ಸತ್ತಿರುವ ಕೊಕ್ಕರೆ ಹಾಗೂ ನೀರು ಕೋಳಿ ಕಳೇಬರಗಳನ್ನು ಪರಿಶೀಲನೆ ನಡೆಸಿದ ನಂತರ ಹೂತು ಹಾಕಿಸಿದರು.

ADVERTISEMENT

‘ಕೊಕ್ಕರೆ ಹಾಗೂ ನೀರು ಕೋಳಿ ಸಾವಿನಿಂದ ಜನರು ಆತಂಕಗೊಳ್ಳುವ ಅಗತ್ಯವಿಲ್ಲ. ಕೊಕ್ಕರೆಬೆಳ್ಳೂರಿನಲ್ಲಿ ಕೊಕ್ಕರೆಗಳ ಸಾವಿಗೆ ಜಂತುಹುಳು ಕಾರಣ ಎಂದು ವರದಿ ಬಂದಿದೆ. ಕೊಕ್ಕರೆಗಳ ಹಿಕ್ಕೆ ಹಾಗೂ ಪಕ್ಷಿಗಳ ದೇಹದ ವಿವಿಧ ಭಾಗಗಳನ್ನು ಭೋಪಾಲ್‌ನ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಅಲ್ಲಿಯೂ ಹಕ್ಕಿಜ್ವರದ ಅನುಮಾನ ವ್ಯಕ್ತವಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.