ADVERTISEMENT

‘ಪ್ರಜಾವಾಣಿ’ ಕ್ವಿಜ್‌ ಚಾಂಪಿಯನ್‌ಶಿಪ್‌: ಫೈನಲ್‌ಗೆ ಮಹರ್ಷಿ ಪಬ್ಲಿಕ್‌ ಶಾಲೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 18:36 IST
Last Updated 8 ಜನವರಿ 2018, 18:36 IST
‘ಪ್ರಜಾವಾಣಿ ಕ್ವಿಜ್‌’ ಚಾಂಪಿಯನ್‌ಷಿಪ್‌ನ ಮೈಸೂರು ವಲಯ ಮಟ್ಟದಲ್ಲಿ ಮೊದಲ ಸ್ಥಾನ ಪಡೆದ ಮಹರ್ಷಿ ಪಬ್ಲಿಕ್‌ ಶಾಲೆ ವಿದ್ಯಾರ್ಥಿಗಳಾದ ವಶಿಷ್ಠ ಹಾಗೂ ಎನ್‌.ಅಭಯ್‌ ಅವರಿಗೆ ಜಿಲ್ಲಾಧಿಕಾರಿ ಡಿ.ರಂದೀಪ್‌ ಬಹುಮಾನ ನೀಡಿದರು. ಡಿಡಿಪಿಐ ಮಂಜುಳಾ ಇದ್ದಾರೆ –ಪ್ರಜಾವಾಣಿ ಚಿತ್ರ
‘ಪ್ರಜಾವಾಣಿ ಕ್ವಿಜ್‌’ ಚಾಂಪಿಯನ್‌ಷಿಪ್‌ನ ಮೈಸೂರು ವಲಯ ಮಟ್ಟದಲ್ಲಿ ಮೊದಲ ಸ್ಥಾನ ಪಡೆದ ಮಹರ್ಷಿ ಪಬ್ಲಿಕ್‌ ಶಾಲೆ ವಿದ್ಯಾರ್ಥಿಗಳಾದ ವಶಿಷ್ಠ ಹಾಗೂ ಎನ್‌.ಅಭಯ್‌ ಅವರಿಗೆ ಜಿಲ್ಲಾಧಿಕಾರಿ ಡಿ.ರಂದೀಪ್‌ ಬಹುಮಾನ ನೀಡಿದರು. ಡಿಡಿಪಿಐ ಮಂಜುಳಾ ಇದ್ದಾರೆ –ಪ್ರಜಾವಾಣಿ ಚಿತ್ರ   

ಮೈಸೂರು: ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ಪೈಪೋಟಿ, ಉತ್ತರ ತಪ್ಪಾದಾಗ ಏನೋ ಚಡಪಡಿಕೆ, ಬೇಸರ. ಗೆದ್ದ ತಂಡಕ್ಕೆ ಮೆಚ್ಚುಗೆಯ ಚಪ್ಪಾಳೆ.

ಚಾತುರ್ಯ ಪ್ರದರ್ಶನ, ಪೈಪೋಟಿ ಹಾಗೂ ಜ್ಞಾನ ಸಂಗಮಕ್ಕೆ ವೇದಿಕೆಯಾಗಿದ್ದು ಸೋಮವಾರ ಇಲ್ಲಿ ಆರಂಭವಾದ ‘ಪ್ರಜಾವಾಣಿ ಕ್ವಿಜ್‌’ ಚಾಂಪಿಯನ್‌ಶಿಪ್‌ನ ನಾಲ್ಕನೇ ಆವೃತ್ತಿ. ಮೈಸೂರು ವಲಯ ಮಟ್ಟದಲ್ಲಿ ಮಹರ್ಷಿ ಪಬ್ಲಿಕ್‌ ಶಾಲೆ ತಂಡ ಮೊದಲ ಸ್ಥಾನ ಪಡೆಯಿತು.

‘ದೀಕ್ಷಾ’ ನೆಟ್‌ವರ್ಕ್‌ ಪ್ರಾಯೋಜಕತ್ವದಲ್ಲಿ ಮೈಸೂರು ವಿಶ್ವವಿದ್ಯಾಲಯದ ಸೆನೆಟ್‌ ಭವನದಲ್ಲಿ ನಡೆದ ಸ್ಪರ್ಧೆಯಲ್ಲಿ ಈ ಶಾಲೆಯ ಎನ್‌.ಅಭಯ್‌ ಹಾಗೂ ವಶಿಷ್ಠ 80 ಅಂಕ ಪಡೆದು ಬೆಂಗಳೂರಿನಲ್ಲಿ ಜ.24ರಂದು ನಡೆಯಲಿರುವ ಫೈನಲ್‌ಗೆ ಆಯ್ಕೆಯಾದರು.

ADVERTISEMENT

ಎರಡನೆ ಸ್ಥಾನ ವಿದ್ಯಾವರ್ಧಕ ಸಂಘದ ಬಿಎಂಶ್ರೀ ವಿದ್ಯಾಸಂಸ್ಥೆಯ ಎಚ್‌.ಕೆ.ಮೇಘನ್‌ ಮತ್ತು ಎಂ.ಎಸ್‌.ಅರ್ಜುನ್‌ (35 ಅಂಕ) ಪಾಲಾಯಿತು. ಮೈಸೂರು ಲಯನ್ಸ್‌ ವೆಸ್ಟ್‌ ಶಾಲೆಯ ತಾನಿಶ್‌ ಹಾಗೂ ಲವಿನ್‌ (30) ಮೂರನೆ ಸ್ಥಾನ ಪಡೆದರು.

ಪ್ರಾಥಮಿಕ ಸುತ್ತಿನಲ್ಲಿ (ಲಿಖಿತ) ಕೇಳಿದ 20 ಪ್ರಶ್ನೆಗಳಿಗೂ ಉತ್ತರಿಸಿದ ಜೆಎಸ್‌ಎಸ್‌ ಪಬ್ಲಿಕ್‌ ಶಾಲೆ ತಂಡದ ರುದ್ರೇಶ್‌ ಹಾಗೂ ಶಮಂತ್‌ 20 ಅಂಕ ಪಡೆದರು. ಇದುವರೆಗೆ ನಡೆದ ‘ಪ್ರಜಾವಾಣಿ ಕ್ವಿಜ್‌’ ಚಾಂಪಿಯನ್‌ಶಿಪ್‌ಗಳಲ್ಲಿ ಇದು ದಾಖಲೆ ಅಂಕ ಕೂಡ. ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳ ಶಾಲಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.