ADVERTISEMENT

ಪಾಲಿಕೆ ಸದಸ್ಯ, ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ

ಉದ್ಯೋಗಕ್ಕೇ ವೋಟು ಆಂದೋಲನ:

​ಪ್ರಜಾವಾಣಿ ವಾರ್ತೆ
Published 11 ಜನವರಿ 2018, 19:30 IST
Last Updated 11 ಜನವರಿ 2018, 19:30 IST
ಪಾಲಿಕೆ ಸದಸ್ಯ,  ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ
ಪಾಲಿಕೆ ಸದಸ್ಯ, ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ   

ಮೈಸೂರು: ‘ಉದ್ಯೋಗಕ್ಕೇ ವೋಟು ಆಂದೋಲನ’ (ನೋ ಜಾಬ್‌ ನೋ ವೋಟ್‌) ರಾಷ್ಟ್ರೀಯ ಸಂಚಾಲಕ ಚಂದ್ರ ಮಿಶ್ರಾ ಸೇರಿ ನಾಲ್ವರ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರು ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಗುರುವಾರ ಹಲ್ಲೆ ನಡೆಸಿದ್ದಾರೆ.

ಒಡಿಶಾದ ‘ಶೂನ್ಯ ನಿರುದ್ಯೋಗ ಮಾದರಿ’ ಸಂಸ್ಥೆಯ ಸಂಸ್ಥಾಪಕ ಮಿಶ್ರಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಷೇತ್ರ ವರುಣದಲ್ಲಿ ‘ಪ್ರಶ್ನಾಗ್ರಹ’ ಚಳವಳಿ ನಡೆಸುತ್ತಿದ್ದರು. ಐದು ವರ್ಷಗಳ ಹಿಂದೆ ನೀಡಿದ್ದ ಭರವಸೆಯನ್ನು ಸಿದ್ದರಾಮಯ್ಯ ಈಡೇರಿಸಿಲ್ಲವೆಂದು ಜಾಥಾ ನಡೆಸಿ ನಗರಕ್ಕೆ ಮರಳಿದಾಗ ಈ ದಾಳಿ ನಡೆದಿದೆ.

ಹಲ್ಲೆ ಹಾಗೂ ಕೊಲೆ ಬೆದರಿಕೆ ಆರೋಪದಡಿ ಮಹಾನಗರ ಪಾಲಿಕೆಯ 36ನೇ ವಾರ್ಡ್ ಸದಸ್ಯ ಪಿ.ಪ್ರಶಾಂತ್‌ ಹಾಗೂ ಬೆಂಬಲಿಗರ ವಿರುದ್ಧ ಲಕ್ಷ್ಮಿಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ. ದಲಿತ ಸಂಘರ್ಷ ಸಮಿತಿಯ ಮುಖಂಡ ಚೋರನಹಳ್ಳಿ ಶಿವಣ್ಣ, ಡಾ.ಜೇಡರ್‌, ದೇವದಾಸ್ ಗಾಯಗೊಂಡಿದ್ದಾರೆ.

ADVERTISEMENT

‘ಉದ್ಯೋಗಕ್ಕೇ ವೋಟು ಆಂದೋಲನ’ ಕಾರ್ಯಕರ್ತರು ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಸಭೆ ಸೇರಿದ್ದರು. ‘ವರುಣ ವಿಧಾನಸಭಾ ಕ್ಷೇತ್ರದಲ್ಲಿ 22,321 ಉದ್ಯೋಗ ಸೃಷ್ಟಿಸಿದ್ದೀರಾ? ಬನ್ನಿ, ತೋರಿಸಿ’ ಎಂಬ ಶೀರ್ಷಿಕೆಯೊಂದಿಗೆ ಸಿದ್ದರಾಮಯ್ಯ ಅವರ ಭಾವಚಿತ್ರವಿದ್ದ ಬ್ಯಾನರ್‌ ಕಟ್ಟಿದ್ದರು. ಉದ್ಯಾನದ ಪ್ರವೇಶ ದ್ವಾರದಲ್ಲಿದ್ದ ಬ್ಯಾನರ್ ಕಂಡು ಕಾರ್ಪೊರೇಟರ್‌ ಪ್ರಶಾಂತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ಕಾಂಗ್ರೆಸ್‌ ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ. ಈ ವೇಳೆ ತಳ್ಳಾಟ ಉಂಟಾಗಿದೆ. ಈ ದಾಳಿಯಲ್ಲಿ ಮಿಶ್ರಾ ಅವರ ಮೂಗು, ಬಾಯಿಯಿಂದ ರಕ್ತ ಒಸರಿದೆ. ಲಕ್ಷ್ಮಿಪುರಂ ಠಾಣೆಯ ಪೊಲೀಸರು ಧಾವಿಸಿ ಗಲಾಟೆ ಬಿಡಿಸಿದ್ದಾರೆ.

‘ಸರ್ಕಾರ ಅಕ್ಕಿ, ರಾಗಿ, ಉಪ್ಪು ಕೊಡುವ ಬದಲಿಗೆ ಉದ್ಯೋಗ ನೀಡಿದರೆ ಸ್ವಾವಲಂಬಿಗಳಾಗುತ್ತೇವೆ. ಈ ಕುರಿತು ಜಾಗೃತಿ ಮೂಡಿಸುವ ಆಂದೋಲನ ವರುಣ ಕ್ಷೇತ್ರದ 41 ಹಳ್ಳಿಗಳಲ್ಲಿ ನಡೆಯುತ್ತಿದೆ. ಚಳವಳಿಯನ್ನು ಹತ್ತಿಕ್ಕುವ ಉದ್ದೇಶದಿಂದ ದಾಳಿ ಮಾಡಲಾಗಿದೆ’ ಎಂದು ಅಭಿಯಾನದ ಸದಸ್ಯ ಜೇಡರ್‌ ದೂರಿದರು.

‘2013ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಮುಂದಿನ ಐದು ವರ್ಷದಲ್ಲಿ 50 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ ನೀಡಲಾಗಿತ್ತು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 22,321 ಉದ್ಯೋಗ ಸೃಷ್ಟಿಯಾಗಬೇಕಿತ್ತು. ಇದನ್ನು ಕೇಳುವ ಉದ್ದೇಶದಿಂದ ‘ಪ್ರಶ್ನಾಗ್ರಹ’ ಚಳವಳಿಯನ್ನು ಮುಖ್ಯಮಂತ್ರಿ ಪ್ರತಿನಿಧಿಸುವ ವರುಣ ಕ್ಷೇತ್ರದಲ್ಲಿ ಜ.4ರಿಂದ ನಡೆಸುತ್ತಿದ್ದೇವೆ. ವಾರದಿಂದ ನಮ್ಮನ್ನು ಹಿಂಬಾಲಿಸುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಏಕಾಏಕಿಯಾಗಿ ದಾಳಿ ನಡೆಸಿದ್ದಾರೆ’ ಎಂದು ಚಂದ್ರ ಮಿಶ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿ ದೂರು ದಾಖಲು

‘ಉದ್ಯೋಗಕ್ಕೇ ವೋಟು ಆಂದೋಲನ’ ಸದಸ್ಯರ ವಿರುದ್ಧ ಪಾಲಿಕೆ ಸದಸ್ಯ ಪ್ರಶಾಂತ್‌ ಪ್ರತಿ ದೂರು ದಾಖಲಿಸಿದ್ದಾರೆ. ಹಲ್ಲೆ ನಡೆಸಲು ಯತ್ನಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

‘ಉದ್ಯಾನದ ಕಾಂಪೌಂಡ್‌ ಮೇಲೆ ಬ್ಯಾನರ್‌ ಕಟ್ಟಿ ನಿಯಮ ಉಲ್ಲಂಘಿಸಿದ್ದರು. ಅನುಮತಿ ಇಲ್ಲದೇ ಸಭೆ ನಡೆಸುತ್ತಿದ್ದರು. ಪಾಲಿಕೆಯ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪ್ರಶ್ನಿಸಿದಾಗ ಅಸಂಬದ್ಧ ಉತ್ತರ ನೀಡಿ, ಹಲ್ಲೆಗೆ ಮುಂದಾದರು’ ಎಂದು ಪ್ರಶಾಂತ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.