ADVERTISEMENT

12 ವರ್ಷದ ನಂತರ ಬಾಗಿಲು ತೆರೆಯುವ ಶೌಚಾಲಯ!

ಕೆ.ಎಸ್.ಸುನಿಲ್
Published 14 ಜನವರಿ 2018, 19:30 IST
Last Updated 14 ಜನವರಿ 2018, 19:30 IST
ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟದ ಆವರಣದಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಕ್ಕೆ ಬೀಗ ಹಾಕಲಾಗಿದೆ.
ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟದ ಆವರಣದಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯಕ್ಕೆ ಬೀಗ ಹಾಕಲಾಗಿದೆ.   

ಶ್ರವಣಬೆಳಗೊಳ: ಈ ಹಿಂದೆ ನಡೆದಿದ್ದ ಬಾಹುಬಲಿ ಮಹಾಮಸ್ತಕಾಭಿಷೇಕದ ಸಂದರ್ಭ ನಿರ್ಮಿಸಿದ್ದ 3 ಸಾರ್ವಜನಿಕ ಶೌಚಾಲಯಗಳ ಬಾಗಿಲುಗಳನ್ನು 12 ವರ್ಷಗಳ ನಂತರ ತೆರೆಯಲಾಗುತ್ತಿದೆ!

ಈ ಶೌಚಾಲಯಗಳನ್ನು ನಿರ್ವಹಣೆ ಮಾಡಬೇಕಾಗಿದ್ದ ಸ್ಥಳೀಯ ಗ್ರಾಮ ಪಂಚಾಯಿತಿ ಸಿಬ್ಬಂದಿ ಕೊರತೆ ನೆಪ ಮುಂದಿಟ್ಟು, ಮಹಾಮಸ್ತಕಾಭಿಷೇಕ ಮುಗಿದ ಬಳಿಕ ಬಂದ್ ಮಾಡಿದೆ. ಹಾಗಾಗಿ ಜೈನಕಾಶಿಗೆ ನಿತ್ಯ ಬರುವ ಪ್ರವಾಸಿಗರು, ಭಕ್ತರು, ಶೌಚಕ್ಕೆ ಹತ್ತಿರದ ಹೋಟೆಲ್, ಲಾಡ್ಜ್ ಹಾಗೂ ಬಯಲು ಪ್ರದೇಶ ಹುಡುಕಿಕೊಂಡು ಹೋಗಬೇಕಿದೆ.

ವಿಂಧ್ಯಗಿರಿ, ಚಂದ್ರಗಿರಿ ಬೆಟ್ಟದ ಆವರಣ ಮತ್ತು ಆದಿಕವಿ ಪಂಪ ಗ್ರಂಥಾಲಯದ ಆವರಣದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಈ ಪೈಕಿ ವಿಂಧ್ಯಗಿರಿ ಶೌಚಾಲಯ (ಹಣ ಪಾವತಿಸಿ ಬಳಸುವ) ಮಾತ್ರ ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ತೆರೆದಿರುತ್ತದೆ. ಆದರೆ, ಈ ಶೌಚಗೃಹದಲ್ಲೂ ನೀರಿನ ಕೊರತೆ ಇದೆ. ಪ್ರವಾಸಿಗರು, ಭಕ್ತರು ತೊಂದರೆ ಅನುಭವಿಸುವುದು ಮಾಮೂಲು ಆಗಿದೆ. ರಾತ್ರಿ ವೇಳೆ ಮಹಿಳೆಯರು, ವೃದ್ಧರ ಪಾಡು ಹೇಳತೀರದು. ಉಳಿದ ಎರಡು ಶೌಚಾಲಯಗಳನ್ನು ನಿರ್ವಹಣೆ ಮಾಡಲು ಆಗದೆ 12 ವರ್ಷಗಳಿಂದ ಬಂದ್ ಮಾಡಲಾಗಿದೆ.

ADVERTISEMENT

‘ಮಹೋತ್ಸವದ ಸಂದರ್ಭದಲ್ಲಿ ಮಾತ್ರ ಇದರ ಬಳಕೆಗೆ ಸಿದ್ಧತೆ ನಡೆಸುತ್ತಿರುವ ಜಿಲ್ಲಾಡಳಿತ, ಶಾಶ್ವತ ಸಾರ್ವಜನಿಕ ಶೌಚಾಲಯ ತೆರೆಯುವ ಬಗ್ಗೆ ಗಮನಹರಿಸಿಲ್ಲ’ ಎಂಬುದು ಸ್ಥಳೀಯರ ಆರೋಪ.

‘ಬಸ್‌ನಿಂದ ಇಳಿದ ತಕ್ಷಣ ಪ್ರವಾಸಿಗರು ಶೌಚಾಲಯ ಕೇಳುತ್ತಾರೆ. ಎಲ್ಲರಿಗೂ ಹೋಟೆಲ್, ಲಾಡ್ಜ್‌ಗೆ ಹೋಗಿ ಎನ್ನುತ್ತೇವೆ. ಶಾಲಾ ಮಕ್ಕಳು ಪ್ರವಾಸಕ್ಕೆ ಬರುತ್ತಾರೆ. ಅವರೂ ಬಯಲು ಪ್ರದೇಶವನ್ನೇ ಆಶ್ರಯಿಸುತ್ತಾರೆ. ಗ್ರಾಮ ಪಂಚಾಯಿತಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಶೌಚಾಲಯಗಳ ಬಾಗಿಲು ತೆರೆಯಲಿಲ್ಲ’ ಎಂದು ಗೊಂಬೆ ವ್ಯಾಪಾರಿ ಮಂಜು ತಿಳಿಸಿದರು.

‘ಧರ್ಮಸ್ಥಳ ಮಾದರಿಯಲ್ಲಿ ಶೌಚಾಲಯ ನಿರ್ಮಿಸಿದರೆ ಸಾಕಷ್ಟು ಅನುಕೂಲವಾಗುತ್ತದೆ. ಪ್ರತಿನಿತ್ಯ ಪ್ರವಾಸಿಗರು, ಭಕ್ತರು, ಯಾತ್ರಾರ್ಥಿಗಳು ಭೇಟಿ ನೀಡುತ್ತಲೇ ಇರುತ್ತಾರೆ. ಮಹೋತ್ಸವ ಸಂದರ್ಭದಲ್ಲಿ ಬಳಕೆ ಮಾಡಿ ಮತ್ತೆ ಬಾಗಿಲು ಹಾಕುತ್ತಾರೆ. ಉಳಿದ ಸಂದರ್ಭದಲ್ಲಿ ಹೊರಗಿನಿಂದ ಬಂದವರಿಗೆ ಸಮಸ್ಯೆ ತಪ್ಪಿದ್ದಲ್ಲ. ಇದಕ್ಕೆ ಶಾಶ್ವತ ಪರಿಹಾರ ಹುಡುಕಬೇಕು’ ಎಂದು ಹೋಟೆಲ್ ವ್ಯಾಪಾರಿ ಪ್ರಜ್ವಲ್ ಹೇಳಿದರು.

‘ಸಿಬ್ಬಂದಿ ಕೊರತೆಯಿಂದ ಶೌಚಾಲಯ ನಿರ್ವಹಣೆ ಮಾಡಲು ಆಗುತ್ತಿಲ್ಲ. ಹಾಗಾಗಿ ಬಂದ್ ಮಾಡಬೇಕಾಯಿತು. ಇದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತರಲಾಗಿದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನವೀನಕುಮಾರ್ ಪ್ರತಿಕ್ರಿಯಿಸಿದರು.

‘ಮಹೋತ್ಸವದ ಹಿನ್ನೆಲೆಯಲ್ಲಿ ಜನದಟ್ಟಣೆ ಇರುವ ಸ್ಥಳಗಳನ್ನು ಗುರುತಿಸಿ ಪ್ರತಿ 200 ಮೀಟರ್‌ಗೆ ತಾತ್ಕಾಲಿಕ ಶೌಚಾಲಯ ನಿರ್ಮಿಸಲಾಗುವುದು. 32 ಕಡೆ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಗೃಹ ಅಳವಡಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕ ಶೌಚಾಲಯಗಳು ಬಂದ್ ಆಗಿರುವುದರಿಂದ ಪ್ರವಾಸಿಗರಿಗೆ ತೊಂದರೆ ಆಗಿರುವುದು ನಿಜ. ಜನರಿಗೆ ಅನುಕೂಲವಾಗಬೇಕು. ಇವುಗಳ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲಾಗುವುದು. ಚನ್ನರಾಯಪಟ್ಟಣ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಜತೆ ಚರ್ಚಿಸಿ ವಾರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಮಹಾಮಸ್ತಕಾಭಿಷೇಕ ಮಹೋತ್ಸವ ವಿಶೇಷ ಅಧಿಕಾರಿ ಬಿ.ಎನ್.ವರಪ್ರಸಾದ್ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

* ಮೂಲಸೌಲಭ್ಯಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಸರ್ಕಾರ, ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೂ ಗಮನಹರಿಸಬೇಕು.
- ರವಿ, ಪ್ರವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.