ADVERTISEMENT

ಬಶೀರ್ ಕೊಲೆ: ಜೈಲಿನಲ್ಲಿಯೇ ಸಂಚು

ಮಂಗಳೂರು: ಮಿಥುನ್‌ ಕಲ್ಲಡ್ಕ ನೇತೃತ್ವದಲ್ಲಿ ದೀಪಕ್‌ ರಾವ್‌ ಕೊಲೆ ಪ್ರತೀಕಾರಕ್ಕೆ ಯೋಜನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 19:30 IST
Last Updated 24 ಜನವರಿ 2018, 19:30 IST
ಮಿಥುನ್‌ ಕಲ್ಲಡ್ಕ
ಮಿಥುನ್‌ ಕಲ್ಲಡ್ಕ   

ಮಂಗಳೂರು: ನಗರದ ಕೊಟ್ಟಾರ ಚೌಕಿ ಬಳಿ ಇದೇ 3ರಂದು ರಾತ್ರಿ ಹಲ್ಲೆಗೊಳಗಾಗಿ 7ರಂದು ಆಸ್ಪತ್ರೆಯಲ್ಲಿ ಮೃತಪಟ್ಟ ಅಬ್ದುಲ್‌ ಬಶೀರ್ ಅವರ ಕೊಲೆಯ ಸಂಚನ್ನು ಆರೋಪಿಗಳು ಜೈಲಿನಲ್ಲಿ ಇದ್ದುಕೊಂಡೇ ರೂಪಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಬಂಟ್ವಾಳ ಗಲಭೆ ಪ್ರಕರಣದಲ್ಲಿ ಬಂಧಿತನಾಗಿ ಸದ್ಯಕ್ಕೆ ಜೈಲಿನಲ್ಲಿರುವ ಕಲ್ಲಡ್ಕ ಮಿಥುನ್ ನೇತೃತ್ವದಲ್ಲಿ ಈ ಹತ್ಯೆ ಸಂಚು ರೂಪಿಸಲಾಗಿತ್ತು ಎಂದು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್‌ ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಶೀರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಕಿಶನ್‌ ಪೂಜಾರಿ, ಶ್ರೀಜಿತ್‌, ಧನುಷ್‌ ಪೂಜಾರಿ, ಸಂದೇಶ್‌ ಕೊಟ್ಯಾನ್‌, ಪುಷ್ಪರಾಜ್‌ ಮತ್ತು ಲತೇಶ್‌ ಎಂಬವರನ್ನು ಈಗಾಗಲೇ ಬಂಧಿಸಲಾಗಿದೆ. ಈ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಬಶೀರ್‌ ಕೊಲೆ ಸಂಚನ್ನು ಜೈಲಿನಲ್ಲಿಯೇ ರೂಪಿಸಿರುವುದು ತಿಳಿದು ಬಂದಿದೆ ಎಂದರು.

ADVERTISEMENT

ಜೈಲಿನಲ್ಲಿರುವ ಮಿಥುನ್‌ ಯಾನೆ ಮಿಥುನ್‌ ಕಲ್ಲಡ್ಕ, ತಿಲಕ್‌ರಾಜ್‌ ಶೆಟ್ಟಿ, ರಾಜು ಯಾನೆ ರಾಜೇಶ್‌ ಈ ಹತ್ಯೆಯ ಸಂಚು ರೂಪಿಸಿದ್ದು, ಆಕಾಶ ಭವನದ ನಿವಾಸಿ ಅನೂಪ್‌ ಎಂಬಾತನ ಸಹಕಾರ ಪಡೆದು, ಈ ಕೃತ್ಯ ಎಸಗಿದ್ದಾರೆ ಎಂದರು.

ಕಾಟಿಪಳ್ಳದ ದೀಪಕ್‌ರಾವ್‌ ಕೊಲೆಯಾದ ದಿನವೇ ಪ್ರಮುಖ ಆರೋಪಿಗಳು, ಮಂಗಳೂರು ಜೈಲಿನಲ್ಲಿದ್ದ ಮಿಥುನ್‌ ಕಲ್ಲಡ್ಕ, ತಿಲಕ್‌ರಾಜ್‌ ಹಾಗೂ ರಾಜೇಶ್‌ನನ್ನು ಭೇಟಿಯಾಗಿ ಕೊಲೆಗೆ ಪ್ರತೀಕಾರ ತೀರಿಸಲು ನಿರ್ಧರಿಸಿದ್ದರು. ಇದಕ್ಕಾಗಿ ಸುರತ್ಕಲ್‌ನಿಂದ ಕೊಟ್ಟಾರ ಚೌಕಿವರೆಗಿನ ಪ್ರದೇಶದಲ್ಲಿ ಯಾರಾದರೂ ಮುಸ್ಲಿಂ ವ್ಯಕ್ತಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಆಕಾಶಭವನದ ನಿವಾಸಿ ಅನೂಪ್‌ ಸಹಕಾರ ನೀಡಿದ್ದ. ಕೊಟ್ಟಾರ ಚೌಕಿಯಲ್ಲಿ ಫಾಸ್ಟ್‌ಫುಡ್‌ ಅಂಗಡಿ ನಡೆಸುತ್ತಿರುವ ಬಶೀರ್‌ ಬಗ್ಗೆ ತಿಳಿದಿದ್ದ ಅನೂಪ್‌, ಆರೋಪಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದ ಎಂದು ವಿವರಿಸಿದರು.

ಬಂಟ್ವಾಳ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಥುನ್‌ ಈಗಾಗಲೇ ಜೈಲಿನಲ್ಲಿದ್ದಾನೆ. ಈತನ ಮೇಲೆ ಕೊಲೆ ಸೇರಿದಂತೆ ಒಟ್ಟು ಆರು ಪ್ರಕರಣಗಳಿವೆ. ತಿಲಕ್‌ರಾಜ್‌ ಶೆಟ್ಟಿ ಹಾಗೂ ರಾಜೇಶ್‌ ಮೇಲೆ ಕಂಕನಾಡಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಅನೂಪ್‌ನನ್ನು  ಬಂಧಿಸಬೇಕಾಗಿದೆ ಎಂದು ತಿಳಿಸಿದರು.

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಇತ್ತೀಚೆಗೆ ನಡೆದ ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ಮಿಥುನ್‌ ಕಲ್ಲಡ್ಕನನ್ನು ಬೆಂಗಳೂರು ಜೈಲಿಗೆ, ತಿಲಕ್‌ರಾಜ್‌ನನ್ನು ಬಳ್ಳಾರಿ ಜೈಲಿಗೆ ಹಾಗೂ ರಾಜೇಶ್‌ನನ್ನು ಬೆಳಗಾವಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಬಾಡಿ ವಾರೆಂಟ್ ಮೇಲೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಹೇಳಿದರು.

ಜೈಲಿನಲ್ಲಿ ಇದ್ದುಕೊಂಡೇ ಸಹ ಕೈದಿಯಿಂದ ₹15 ಲಕ್ಷ ವಸೂಲಿ ಮಾಡಿದ ಪ್ರಕರಣದಲ್ಲಿಯೂ ಮಿಥುನ್‌ ಕಲ್ಲಡ್ಕ, ತಿಲಕ್‌ರಾಜ್‌ ಶೆಟ್ಟಿ, ರಾಜೇಶ್‌ ಹಾಗೂ ಅನೂಪ್‌ ಆರೋಪಿಗಳಾಗಿದ್ದಾರೆ ಎಂದು ತಿಳಿಸಿದರು.

ಸಂಘ ಪರಿವಾರದ ನಂಟು: ಮಿಥುನ್‌ ಕಲ್ಲಡ್ಕ ಈ ಹಿಂದೆ ಬಂಟ್ವಾಳ ಗಲಭೆ ಪ್ರಕರಣದಲ್ಲಿ ಬಂಧಿತನಾದ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್‌ ಭಟ್ ಅವರೊಂದಿಗೆ ಸಮಾರಂಭದ ವೇದಿಕೆ ಹಂಚಿಕೊಂಡಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ದೀಪಕ್‌ ಕೊಲೆ: ಮತ್ತೆ ಆರು ಜನರ ಬಂಧನ
ಸುರತ್ಕಲ್‌ ಕಾಟಿಪಳ್ಳದ ದೀಪಕ್‌ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳೊಂದಿಗೆ ಸಂಚು ರೂಪಿಸಿದ ಹಾಗೂ ಕೃತ್ಯಕ್ಕೆ ಸಹಾಯ ಮಾಡಿದ ಆರೋಪದ ಮೇಲೆ ಮತ್ತೆ ಆರು ಜನರನ್ನು ಬಂಧಿಸಲಾಗಿದೆ. ಇದರಿಂದ ಬಂಧಿತರ ಸಂಖ್ಯೆ 12ಕ್ಕೆ ಏರಿದೆ.

ಕಾಟಿಪಳ್ಳ ಚೊಕ್ಕಪಟ್ಣದ ನಿವಾಸಿ ಮೊಹಮ್ಮದ್ ರಫೀಕ್‌ ಅಲಿಯಾಸ್ ಮಾಂಗೋ ರಫಿಕ್‌, ಇರ್ಫಾನ್‌, ಕಾಟಿಪಳ್ಳ 2ನೇ ಬ್ಲಾಕ್‌ ನಿವಾಸಿ ಮೊಹಮ್ಮದ್‌ ಆನಸ್‌ ಅಲಿಯಾಸ್‌ ಅಂಚು, 6ನೇ ಬ್ಲಾಕ್‌ ನಿವಾಸಿ ಮಹಮ್ಮದ್‌ ಜಾಹೀದ್‌ ಅಲಿಯಾಸ್‌ ಜಾಹಿ, 7ನೇ ಬ್ಲಾಕ್‌ ನಿವಾಸಿ ಹಿದಾಯಿತುಲ್ಲಾ, ಚೊಕ್ಕಪಟ್ಣದ ಇಮ್ರಾನ್‌ ನವಾಜ್‌ ಬಂಧಿತರು.

ಮೊಹಮ್ಮದ್ ರಫೀಕ್‌ ವಿರುದ್ಧ ಎರಡು ಕೊಲೆಯತ್ನ, ಇರ್ಫಾನ್‌ ವಿರುದ್ಧ ಒಂದು ಕೊಲೆ ಯತ್ನ, ಮೊಹಮ್ಮದ್‌ ಅನಸ್‌ ವಿರುದ್ಧ ಒಂದು ಕೊಲೆಯತ್ನ, ಒಂದು ಹಲ್ಲೆ ಹಾಗೂ ಒಂದು ಸುಲಿಗೆ ಪ್ರಕರಣ, ಮಹಮ್ಮದ್‌ ಜಾಹೀದ್ ವಿರುದ್ಧ ಎರಡು ಕೊಲೆ ಯತ್ನ, ಎರಡು ಕಳವು ಹಾಗೂ ಒಂದು ಹಲ್ಲೆ ಪ್ರಕರಣ, ಹಿದಾಯಿತುಲ್ಲ ವಿರುದ್ಧ ಒಂದು ಅತ್ಯಾಚಾರ ಪ್ರಕರಣ, ಇಮ್ರಾನ್‌ ನವಾಜ್‌ ವಿರುದ್ಧ ಒಂದು ಹಲ್ಲೆ ಪ್ರಕರಣ ದಾಖಲಾಗಿವೆ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ತಿಳಿಸಿದರು.

ಆರೋಪಿಗಳು ಕೆಲವೊಂದು ಸಂಘಟನೆಗಳ ಸದಸ್ಯರಾಗಿದ್ದಾರೆ. ಈ ಬಗ್ಗೆ ಇನ್ನೂ ವಿಚಾರಣೆ ನಡೆಯುತ್ತಿದ್ದು, ನಂತರವಷ್ಟೇ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದರು.

ಬ್ಯಾಂಕ್‌ ಉದ್ಯೋಗಿಗಳಿಗೆ ಹಿಂಸೆ
ಮಂಗಳೂರು:
ಜೈಲಿನಲ್ಲಿ ಇದ್ದುಕೊಂಡೇ ವಿಚಾರಣಾಧೀನ ಕೈದಿಗಳ ಮೇಲೆ ಹಲ್ಲೆ ನಡೆಸಿ, ಹಣ ವಸೂಲಿ ಮಾಡಿದ ಪ್ರಕರಣ ತಿರುವು ಪಡೆದಿದ್ದು, ಐಒಬಿ ಬ್ಯಾಂಕಿನ ಕುಳಾಯಿ ಶಾಖೆಯ ಸಿಬ್ಬಂದಿಯಿಂದ ಹಣ ವಸೂಲಿ ಮಾಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಕರಣದ ಮಾಹಿತಿ ನೀಡಿದ ನಗರ ಪೊಲೀಸ್‌ ಆಯುಕ್ತ ಟಿ.ಆರ್. ಸುರೇಶ್‌, ಕೆಆರ್‌ಐಟಿಎಲ್‌ ಸಂಸ್ಥೆಗೆ ಸೇರಿದ ಹಣವನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಒಟ್ಟು 6 ಜನರನ್ನು ಬಂಧಿಸಲಾಗಿತ್ತು. ಈ ಪೈಕಿ ಸಿಜೊ ಕೆ. ಜೋಸ್‌, ಸುನಿಲ್‌ ಮತ್ತು ಜೆರಿ ಫೌಲ್‌ ಎಂಬವರು ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿದ್ದರು. ಅವರ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕುವ ಮೂಲಕ ₹15 ಲಕ್ಷ ಹಾಗೂ ಒಂದು ಕಾರನ್ನು ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಮಿಥುನ್‌ ಕಲ್ಲಡ್ಕ, ತಿಲಕ್‌ರಾಜ್‌, ಶಿವರಾಜ್‌, ರಾಜು ಅಲಿಯಾಸ್‌ ರಾಜೇಶ್‌, ನಿಖಿಲ್‌, ಚರಣ್‌, ಅನೂಪ್‌, ಮನೋಜ್‌ ಕುಲಾಲ್‌ ಆರೋಪಿಗಳಾಗಿದ್ದಾರೆ. ಮಿಥುನ್‌ ಕಲ್ಲಡ್ಕ, ತಿಲಕ್‌ರಾಜ್‌, ಶಿವರಾಜ್‌, ರಾಜು ಅಲಿಯಾಸ್‌ ರಾಜೇಶ್‌, ನಿಖಿಲ್‌ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ಚರಣ್‌, ಅನೂಪ್‌ ಹಾಗೂ ಮನೋಜ್‌ ಕುಲಾಲ್‌ರನ್ನು ಬಂಧಿಸಬೇಕಾಗಿದೆ ಎಂದು ಹೇಳಿದರು.

ಹಣ ವರ್ಗಾವಣೆ ಪ್ರಕರಣದ ಆರೋಪಿಗಳಾದ ಸಿಜೊ ಕೆ. ಜೋಸ್‌, ಸುನಿಲ್‌ ಹಾಗೂ ಜೆರಿ ಫೌಲ್‌, ಡಿಸೆಂಬರ್‌ನಿಂದ ಜನವರಿ 15 ರವರೆಗೆ ಮಂಗಳೂರು ಜೈಲಿನಲ್ಲಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು, ಇವರ ಮೇಲೆ ಹಲ್ಲೆ ನಡೆಸಿದ್ದಲ್ಲದೇ, ಜೀವಂತವಾಗಿ ಹೊರಗೆ ಹೋಗಬೇಕಿದ್ದರೆ, ಕೇಳಿದಷ್ಟು ಹಣ ನೀಡುವಂತೆ ಒತ್ತಾಯಿಸಿದ್ದರು. ಅದರಂತೆ ಆರೋಪಿಗಳು ತಮ್ಮ ಸಹಚರರ ಮೂಲಕ ₹15 ಲಕ್ಷ ಪಡೆದುಕೊಂಡಿದ್ದಾರೆ. ಅಲ್ಲದೇ ಸುನಿಲ್‌ಗೆ ಸಂಬಂಧಿಸಿದ ನಿಸ್ಸಾನ್‌ ಕಂಪನಿಯ ಕಾರನ್ನು ಬಲವಂತವಾಗಿ ತಮ್ಮ ಸಹಚರ ಅನೂಪ್‌ಕುಮಾರ್ ಎಂಬಾತನ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಆರೋಪಿ ಚರಣ್‌ ಖಾತೆಗೆ ₹2 ಲಕ್ಷ ಜಮೆ ಮಾಡಿಸಿಕೊಂಡಿದ್ದು, ಆ ಹಣವನ್ನು ಅಂದೇ ಡ್ರಾ ಮಾಡಿಕೊಂಡಿದ್ದಾರೆ. ಈ ಹಣದಿಂದ ಅಡವಿಟ್ಟ ಚಿನ್ನವನ್ನು ಬಿಡಿಸಿಕೊಂಡಿದ್ದಾರೆ ಎಂಬ ಮಾಹಿತಿ ವಿಚಾರಣೆಯಿಂದ ತಿಳಿದು ಬಂದಿದೆ ಎಂದ ಅವರು, ಈ ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದರು.

ಪ್ರಕರಣದ ಕುರಿತು ಮಂಡ್ಯ ಜಿಲ್ಲೆಯ ಪಾಂಡವಪುರದ ಪೌಲ್‌ ಬರ್ಕೆ ಠಾಣೆಗೆ ದೂರು ನೀಡಿದ್ದಾರೆ ಎಂದರು.

ಯಾವುದೇ ಘಟನೆ ನಡೆದಿಲ್ಲ: ‘ಜೈಲಿನಲ್ಲಿ ಹಣ ವಸೂಲಿಗೆ ನನ್ನ ಮೇಲೆ ಹಲ್ಲೆ ಮಾಡಲಾಗಿದ್ದು, ನನ್ನ ತಂದೆ ದೂರು ನೀಡಿದ್ದಾರೆ ಎಂಬುದು ಸುಳ್ಳು. ನನಗೆ ಸಂಬಂಧಿಸಿದಂತೆ ಈ ರೀತಿಯ ಯಾವುದೇ ಪ್ರಕರಣಗಳು ನಡೆದಿಲ್ಲ’ ಎಂದು ಕೆಆರ್‌ಐಡಿಎಲ್‌ ಹಣ ವರ್ಗಾವಣೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿ ಬಿಡುಗಡೆಯಾಗಿರುವ ಐಒಬಿ ಕುಳಾಯಿ ಶಾಖೆಯ ಪ್ರಬಂಧಕ ಸಿರಿನ್‌ ಎಂ. ಸ್ಪಷ್ಪಪಡಿಸಿದ್ದಾರೆ.

ನಾನು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದೆ. ಮಂಗಳೂರು ಜೈಲಿನಲ್ಲಿ 2–3 ದಿನ ಮಾತ್ರ ಇದ್ದದ್ದು. ಈ ಸಂದರ್ಭದಲ್ಲಿ ನನಗೆ ಹಿಂಸೆ ನೀಡಿದ ಪ್ರಕರಣವಾಗಲಿ, ಹಣ ನೀಡಿದ ಪ್ರಕರಣವಾಗಲಿ ನಡೆದಿಲ್ಲ. ಈ ಬಗ್ಗೆ ನನ್ನ ಪಾಲಕರು ಯಾವುದೇ ದೂರು ನೀಡಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.