ADVERTISEMENT

ತತ್ಕಾಲ್‌ ಪಾಸ್‌ಪೋರ್ಟ್‌: ನಿಯಮ ಸರಳ

ಸಚಿವಾಲಯ ಪಟ್ಟಿ ಮಾಡಿರುವ 12 ದಾಖಲೆಗಳಲ್ಲಿ ಯಾವುದಾದರೂ ಎರಡನ್ನು ಒದಗಿಸಬೇಕು

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 20:32 IST
Last Updated 26 ಜನವರಿ 2018, 20:32 IST

ಬೆಂಗಳೂರು: ತತ್ಕಾಲ್‌ ಯೋಜನೆ ಅಡಿ ಪಾಸ್‌ಪೋರ್ಟ್‌ ಪಡೆಯಲು ಅರ್ಜಿ ಸಲ್ಲಿಸುವ ನಿಯಮಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸರಳಗೊಳಿಸಿದೆ.

18 ವರ್ಷ ಮೇಲ್ಪಟ್ಟವರು ತತ್ಕಾಲ್‌ ಯೋಜನೆ ಅಡಿ ಅರ್ಜಿ ಸಲ್ಲಿಸುವಾಗ ಇನ್ನು ಮುಂದೆ ಪರಿಶೀಲನಾ ಪ್ರಮಾಣಪತ್ರವನ್ನು ನೀಡಬೇಕಾಗಿಲ್ಲ. ಆಧಾರ್‌ ಸಂಖ್ಯೆಯನ್ನು ಅಥವಾ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದಿಂದ ಪಡೆದಿರುವ ಆಧಾರ್‌ ನೋಂದಣಿ ರಸೀದಿಯನ್ನು ಒದಗಿಸಬೇಕು. ಅರ್ಜಿದಾರರು ಸಹಿ ಮಾಡಿರುವ ಅನುಬಂಧ–ಇ ಅನ್ನು ಸಲ್ಲಿಸಬೇಕು. ಸಚಿವಾಲಯವು ಪಟ್ಟಿ ಮಾಡಿರುವ 12 ದಾಖಲೆಗಳಲ್ಲಿ ಯಾವುದಾದರೂ ಎರಡನ್ನು ಒದಗಿಸಬೇಕು.

ತತ್ಕಾಲ್‌ ಅಡಿ 18 ವರ್ಷಗಳ ಒಳಗಿನವರು ಅರ್ಜಿ ಸಲ್ಲಿಸುವಾಗ ಆಧಾರ್‌ ಸಂಖ್ಯೆ ಅಥವಾ ಆಧಾರ್‌ ನೋಂದಣಿ ರಸೀದಿಯನ್ನು ನೀಡಬೇಕು. ಅದರ ಜೊತೆಗೆ ಶಿಕ್ಷಣ ಸಂಸ್ಥೆ ನೀಡಿರುವ ವಿದ್ಯಾರ್ಥಿಯ ಭಾವಚಿತ್ರಸಹಿತ ಗುರುತುಪತ್ರ, ಜನನ ಪ್ರಮಾಣಪತ್ರ ಅಥವಾ ಪಡಿತರ ಚೀಟಿ ಪೈಕಿ ಒಂದನ್ನು ಒದಗಿಸಬೇಕು.

ADVERTISEMENT

ಈ ಪ್ರಕರಣಗಳಲ್ಲಿ ಪೊಲೀಸ್‌ ಪರಿಶೀಲನಾ ವರದಿಗಾಗಿ ಕಾಯುವುದಿಲ್ಲ. ಅರ್ಜಿ ಸಲ್ಲಿಸಿದ ಮೂರು ದಿನಗಳ ಒಳಗೆ ಆಂತರಿಕ ತಪಾಸಣಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಪಾಸ್‌ಪೋರ್ಟ್‌ ನೀಡಲಾಗುತ್ತದೆ. ತತ್ಕಾಲ್‌ ಶು‌ಲ್ಕವನ್ನು ಅರ್ಜಿದಾರರು ಪಾವತಿಸಬೇಕು ಎಂದು ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿಯ (ಆರ್‌ಪಿಒ) ‍ಪ್ರಕಟಣೆ ತಿಳಿಸಿದೆ.

ಮೊದಲ ಬಾರಿ ಅರ್ಜಿ ಸಲ್ಲಿಸಿದವರು ಸರದಿ ತಪ್ಪಿಸಿ (ಔಟ್‌ ಆಫ್‌ ಟರ್ನ್‌) ಪಾಸ್‌ಪೋರ್ಟ್ ಪಡೆಯುವ ಅರ್ಜಿಗಳಿಗೂ ನಿಯಮ ಸರಳಗೊಳಿಸಲಾಗಿದೆ. ಅರ್ಜಿದಾರರು ಈ ಮೇಲೆ ಹೇಳಿದ ದಾಖಲೆಗಳನ್ನು ಒದಗಿಸಿದರೆ ಸಾಕಾಗುತ್ತದೆ.

ಪಾಸ್‌ಪೋರ್ಟ್‌ ಅರ್ಜಿಗೆ ಪರಿಗಣಿಸುವ ದಾಖಲೆಗಳು

* ಮತದಾರರ ಗುರುತಿನ ಚೀಟಿ (ಎಪಿಕ್‌ ಕಾರ್ಡ್)

* ಕೇಂದ್ರ ಅಥವಾ ರಾಜ್ಯ ಸರ್ಕಾರ, ಸರ್ಕಾರಿ ಅಧೀನದ ಸಂಸ್ಥೆ, ಸ್ಥಳೀಯ ಸಂಸ್ಥೆ, ಸರ್ಕಾರಿ ಕಂಪನಿಗಳು ಒದಗಿಸಿರುವ ಭಾವಚಿತ್ರಸಹಿತ ಸೇವಾ ಗುರುತಿನಚೀಟಿ

* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಥವಾ ಇತರೆ ಹಿಂದುಳಿದ ವರ್ಗಗಳ ಪ್ರಮಾಣಪತ್ರ

* ಶಸ್ತ್ರಾಸ್ತ್ರ ಪರವಾನಗಿ

* ಪಿಂಚಣಿ ದಾಖಲೆಗಳು

* ಅರ್ಜಿದಾರರ ಹಳೆ ಪಾಸ್‌ಪೋರ್ಟ್‌

* ಪ್ಯಾನ್‌ ಸಂಖ್ಯೆ

* ಬ್ಯಾಂಕ್‌/ ಕಿಸಾನ್‌/ ಅಂಚೆಕಚೇರಿ ಖಾತೆಯ ದಾಖಲೆ

* ಶಿಕ್ಷಣ ಸಂಸ್ಥೆ ನೀಡಿರುವ ವಿದ್ಯಾರ್ಥಿಯ ಭಾವಚಿತ್ರಸಹಿತ ಗುರುತುಚೀಟಿ

* ಚಾಲನಾ ಪರವಾನಗಿ

* ಜನನ ಪ್ರಮಾಣಪತ್ರ

* ಪಡಿತರ ಚೀಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.