ADVERTISEMENT

ಬಿಜೆಪಿ ತೊರೆದು ‘ಕೈ’ ಹಿಡಿದ ಆನಂದ್ ಸಿಂಗ್

ಜಾತ್ಯತೀತ ನಿಲುವಿಗೆ ಬಿಜೆಪಿಯಲ್ಲಿ ಅವಕಾಶವಿಲ್ಲ: ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2018, 19:30 IST
Last Updated 31 ಜನವರಿ 2018, 19:30 IST

ಬೆಂಗಳೂರು: ಬಳ್ಳಾರಿ ಜಿಲ್ಲೆ ವಿಜಯನಗರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಆನಂದ್ ಸಿಂಗ್ ಬೆಂಬಲಿಗರ ಜೊತೆ ಬುಧವಾರ ಕಾಂಗ್ರೆಸ್ ಪಕ್ಷ ಸೇರಿದರು.

ಈ ಹಿಂದೆಯೇ ಬಿಜೆಪಿ ತೊರೆದಿದ್ದ ಆನಂದ್‌ ಸಿಂಗ್ ಭಾನುವಾರ (ಜ.28) ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಬಳ್ಳಾರಿ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಈ ಸಂದರ್ಭದಲ್ಲಿದ್ದರು.

‘ಆನಂದ್ ಸಿಂಗ್ ಕಾಂಗ್ರೆಸ್ ಸೇರಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಸಿರು ನಿಶಾನೆ ತೋರಿದ್ದಾರೆ. ಜಾತ್ಯತೀತ ನಿಲುವಿಗೆ ಬಿಜೆಪಿಯಲ್ಲಿ ಅವಕಾಶವಿಲ್ಲ’ ಎಂದು ಮುಖ್ಯಮಂತ್ರಿ ಹೇಳಿದರು.

ADVERTISEMENT

‘ಆನಂದ ಸಿಂಗ್ ಕಾಂಗ್ರೆಸ್‌ ಸೇರಿದ್ದರಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಬಳ್ಳಾರಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯ ಗಳಿಸಲಿದೆ’ ಎಂದು ಸಂತೋಷ್ ಲಾಡ್ ಅಭಿಪ್ರಾಯಪಟ್ಟರು.

‘ಕಾಂಗ್ರೆಸ್ ಸಿದ್ಧಾಂತ ನಂಬಿ ಆನಂದ ಸಿಂಗ್ ಬಂದಿದ್ದಾರೆ. ಅವರ ಮೇಲಿರುವ ಅದಿರು ಅಕ್ರಮ ಪ್ರಕರಣಗಳ ತನಿಖೆ ಮುಂದುವರಿಯಲಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅವರು ಯಾವುದೇ ಅಕ್ರಮ ಎಸಗಿಲ್ಲ’ ಎಂದು ವಿಧಾನಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ ಹೇಳಿದರು.

ಹೆತ್ತವರನ್ನು ನೆನೆದು ಕಾಂಗ್ರೆಸ್ ಧ್ವಜ ಹಿಡಿದ ಆನಂದ್ ಸಿಂಗ್, ‘ನಾನು ಜಾತ್ಯತೀತ ಮನೋಭಾವ ಹೊಂದಿದವನು. ನಮ್ಮ ಜಿಲ್ಲೆಯಲ್ಲಿ ಸಂತೋಷ್ ಲಾಡ್ ನೇತೃತ್ವದಲ್ಲಿ ಕೆಲಸ ಮಾಡಿ ಜಿಲ್ಲೆಯ ಒಂಬತ್ತೂ ಸ್ಥಾನಗಳಲ್ಲಿ ಪಕ್ಷ ಜಯ ಗಳಿಸುವಂತೆ ಮಾಡುತ್ತೇನೆ’ ಎಂದರು.

‘ಈಗಾಗಲೇ ಹಲವು ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಸದ್ಯದಲ್ಲಿ ಅವರೂ ಪಕ್ಷಕ್ಕೆ ಬರಲಿದ್ದಾರೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

‘ವಿಜಯನಗರದ ಸೈನ್ಯ ಇನ್ನು ಮುಂದೆ ಕಾಂಗ್ರೆಸ್ ಪರ ಪ್ರಚಾರ ಮಾಡಲಿದೆ’ ಎಂದ ಶಿವಕುಮಾರ್‌, ‘ಹೊಸಪೇಟೆಯಲ್ಲಿ ಇದೇ 10ರಂದು ನಡೆಯಲಿರುವ ರಾಹುಲ್ ಕಾರ್ಯಕ್ರಮದಲ್ಲಿ ಶಕ್ತಿ ಪ್ರದರ್ಶನ ಮಾಡಬೇಕು’ ಎಂದು ಸಿಂಗ್ ಬೆಂಬಲಿಗರಿಗೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.