ADVERTISEMENT

ಈ ವರ್ಷವೂ ನೌಕರರಿಗೆ ಜನವರಿ ತುಟ್ಟಿ ಭತ್ಯೆ?

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 19:30 IST
Last Updated 5 ಫೆಬ್ರುವರಿ 2018, 19:30 IST
ಈ ವರ್ಷವೂ ನೌಕರರಿಗೆ ಜನವರಿ ತುಟ್ಟಿ ಭತ್ಯೆ?
ಈ ವರ್ಷವೂ ನೌಕರರಿಗೆ ಜನವರಿ ತುಟ್ಟಿ ಭತ್ಯೆ?   

ಬೆಂಗಳೂರು: ಸರ್ಕಾರಿ ನೌಕರರಿಗೆ ಜನವರಿಯಿಂದ ಪೂರ್ವಾನ್ವಯವಾಗುವಂತೆ ಪ್ರತಿ ವರ್ಷ ನೀಡುತ್ತಿರುವ ತುಟ್ಟಿಭತ್ಯೆಯನ್ನು ಈ ವರ್ಷವೂ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಸಿದ್ದರಾಮಯ್ಯ ಅವರನ್ನು ಸೋಮವಾರ ಭೇಟಿ ಮಾಡಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.‍ಪಿ. ಮಂಜೇಗೌಡ ನೇತೃತ್ವದ ನಿಯೋಗ ಈ ಕುರಿತು ಮನವಿ ಸಲ್ಲಿಸಿತು. ಕೇಂದ್ರ ಸರ್ಕಾರ ಘೋಷಣೆ ಮಾಡುವ ಶೇಕಡಾವಾರು ತುಟ್ಟಿಭತ್ಯೆಯ ‍ಪ್ರಮಾಣದಲ್ಲಿ ಶೇ 0.944ರಷ್ಟು ತುಟ್ಟಿಭತ್ಯೆಯನ್ನು ನೀಡುವುದಾಗಿ ಮುಖ್ಯಮಂತ್ರಿ ಒ‍ಪ್ಪಿಕೊಂಡರು ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರಿ ನೌಕರರು ವೇತನ ಪರಿಷ್ಕರಣೆ ಬಳಿಕ ಶೇ 5ರಷ್ಟು ತುಟ್ಟಿಭತ್ಯೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ವೇತನ ಪರಿಷ್ಕರಣೆಯಾದ ಬಳಿಕ ಶೇ 45.25ರಷ್ಟಿರುವ ತುಟ್ಟಿಭತ್ಯೆ ಮೂಲವೇತನದಲ್ಲಿ ವಿಲೀನವಾಗಲಿದೆ. ಹೀಗಾಗಿ ಮಾರ್ಚ್‌ ಅಂತ್ಯ ಅಥವಾ ಏಪ್ರಿಲ್‌ ಮೊದಲ ವಾರದಲ್ಲಿ (ಜನವರಿಯಿಂದ ಪೂರ್ವಾನ್ವಯವಾಗುವಂತೆ) ಘೋಷಣೆ ಮಾಡುವ ತುಟ್ಟಿಭತ್ಯೆಯನ್ನು ನೀಡಬೇಕು ಎಂದು ಸಂಘ ಕೋರಿಕೆ ಸಲ್ಲಿಸಿತು.

ADVERTISEMENT

ಮೂಲವೇತನದ ಮೊತ್ತಕ್ಕೆ ಶೇ 30ರಷ್ಟು ಫಿಟ್‌ಮೆಂಟ್‌ (ವೇತನ ತಾರತಮ್ಯ ಸರಿದೂಗಿಸುವ ಮೊತ್ತ) ನೀಡಿದರೆ ತಾರತಮ್ಯ ಮುಂದುವರಿಯಲಿದೆ. ಶೇ 45ರಷ್ಟು ಫಿಟ್‌ಮೆಂಟ್ ನೀಡಬೇಕು. ಆಯೋಗ ಶಿಫಾರಸು ಮಾಡಿರುವಂತೆ ಮನೆ ಬಾಡಿಗೆ ಭತ್ಯೆಯನ್ನು ಕಡಿಮೆ ಮಾಡಬಾರದು. ಈಗ ಇರುವಂತೆ ಶೇ 30, ಶೇ 20, ಶೇ 10ರವರೆಗಿನ ಮನೆಬಾಡಿಗೆ ಭತ್ಯೆಯನ್ನು ಮುಂದುವರಿಸಬೇಕು ಎಂದು ಮಂಜೇಗೌಡ ಮನವಿ ಮಾಡಿದರು.

ಪರಿಷ್ಕರಣೆ ಮಾಡಿದರೆ ವಾರ್ಷಿಕ ₹10,500 ಕೋಟಿ ಹೊರೆ ಬೀಳಲಿದೆ. ಅಷ್ಟು ಪ್ರಮಾಣದಲ್ಲಿ ಹೆಚ್ಚಿಸಲು ಸಾಧ್ಯವಿಲ್ಲ. ಸಚಿವ ಸಹೋದ್ಯೋಗಿಗಳು, ಅಧಿಕಾರಿಗಳ ಚರ್ಚಿಸಿ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಳ ಮಾಡುವ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ತಿಳಿಸಿದರು.

ಎನ್‌ಪಿಎಸ್‌ ನೌಕರರಿಗೆ ಸೌಲಭ್ಯ:

ನೂತನ ಪಿಂಚಣಿ ಯೋಜನೆ(ಎನ್‌ಪಿಎಸ್) ವ್ಯಾಪ್ತಿಯ ನೌಕರರಿಗೆ 2016ರ ಆಗಸ್ಟ್‌ 26ರಿಂದ ಪೂರ್ವಾನ್ವಯವಾಗುವಂತೆ ಮರಣ ಮತ್ತು ನಿವೃತ್ತಿ ಉಪದಾನ ಸೌಲಭ್ಯವನ್ನು ನೀಡುವುದಾಗಿ ಮುಖ್ಯಮಂತ್ರಿ ಆಶ್ವಾಸನೆ ನೀಡಿದರು.

‘ರಾಜ್ಯದಲ್ಲಿ 1.80 ಲಕ್ಷ ಎನ್‌ಪಿಎಸ್‌ ನೌಕರರಿದ್ದಾರೆ. ಕೇಂದ್ರ ಸರ್ಕಾರ 2016ರಿಂದಲೇ ಪೂರ್ವಾನ್ವಯವಾಗುವಂತೆ ನಿವೃತ್ತಿ ಉಪದಾನ ನೀಡುತ್ತಿದೆ. ರಾಜ್ಯದಲ್ಲೂ ಅದನ್ನು ನೀಡಬೇಕು’ ಎಂದು ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷ ರಮೇಶ ಸಂಗಾ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.