ADVERTISEMENT

ಮಹಾಮಸ್ತಕಾಭಿಷೇಕಕ್ಕೆ ಕಳೆಗಟ್ಟಿದ ಗೊಮ್ಮಟ ನಗರಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 19:32 IST
Last Updated 6 ಫೆಬ್ರುವರಿ 2018, 19:32 IST
ಮಹಾಮಸ್ತಕಾಭಿಷೇಕಕ್ಕೆ ಕಳೆಗಟ್ಟಿದ ಗೊಮ್ಮಟ ನಗರಿ
ಮಹಾಮಸ್ತಕಾಭಿಷೇಕಕ್ಕೆ ಕಳೆಗಟ್ಟಿದ ಗೊಮ್ಮಟ ನಗರಿ   

ಶ್ರವಣಬೆಳಗೊಳ: 12 ವರ್ಷಗಳಿಗೊಮ್ಮೆ ನಡೆಯುವ ಬಾಹುಬಲಿ 88ನೇ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಗೊಮ್ಮಟ ನಗರಿ ಸಿಂಗಾರಗೊಂಡಿದ್ದು, ಪಟ್ಟಣದ ರಸ್ತೆ, ವೃತ್ತಗಳು, ವಿಂಧ್ಯಗಿರಿ, ಚಂದ್ರಗಿರಿ ಬೆಟ್ಟಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

ದೇಶದ ವಿವಿಧ ಭಾಗಗಳಿಂದ ಮುನಿಗಳು, ತ್ಯಾಗಿಗಳು, ಮಾತಾಜಿಗಳು ಕಾಲ್ನಡಿಗೆಯಲ್ಲಿ ಕ್ಷೇತ್ರಕ್ಕೆ ಬಂದಿದ್ದು, ಧಾರ್ಮಿಕ ವಿಧಿ–ವಿಧಾನಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಯಾತ್ರಾರ್ಥಿಗಳು, ಭಕ್ತರು, ಪ್ರವಾಸಿಗರು ತಂಗಲು ವಸತಿ, ಊಟದ ವ್ಯವಸ್ಥೆ, ವೈದ್ಯಕೀಯ ಸೇವೆಗೆ ಸಿದ್ಧತೆಗಳಾಗಿವೆ. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ADVERTISEMENT

ಪಂಚಕಲ್ಯಾಣ ನಗರದಲ್ಲಿ ನಿರ್ಮಿಸಿರುವ ಚಾವುಂಡರಾಯ ಸಭಾಮಂಟಪದಲ್ಲಿ ಫೆ. 7ರಂದು ಬೆಳಿಗ್ಗೆ 10.45ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 20 ದಿನಗಳ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.

20 ದಿನಗಳ ಕಾಲ ಎರಡು ಬೃಹತ್‌ ವೇದಿಕೆಗಳಲ್ಲಿ ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ಕಲಾವಿದರು ಕಾರ್ಯಕ್ರಮ ಪ್ರಸ್ತುತ ಪಡಿಸುವರು. ಮೊದಲ ದಿನ ಸಂಜೆ ಹಾಸ್ಯ ಕಲಾವಿದ ಪ್ರೊ.ಕೃಷ್ಣೇಗೌಡ ತಂಡದವರಿಂದ ಹಾಸ್ಯೋತ್ಸವ, ಬಾಲಿವುಡ್‌ ಹಿನ್ನೆಲೆ ಗಾಯಕ ರೂಪೇಶ್‌ ಜೈನ್‌ ಹಾಗೂ ಗಾಯಕ ವಿಜಯ ಪ್ರಕಾಶ್‌ ತಂಡದವರಿಂದ ಸಂಗೀತ ಸಂಜೆ ನಡೆಯಲಿದೆ.

ಫೆ. 7ರಿಂದ 25ರ ವರೆಗೆ ಮಸ್ತಕಾಭಿಷೇಕ ಕಾರ್ಯಕ್ರಮಗಳು ನಡೆಯಲಿದ್ದು, ಎಲ್ಲೆಲ್ಲೂ ಹಬ್ಬದ ವಾತಾವರಣ ಕಂಡು ಬಂದಿದೆ. ಫೆ. 17ರಿಂದ ವಿಂಧ್ಯಗಿರಿ ಮೇಲಿರುವ ವಿರಾಗಿಗೆ ಮಹಾಮಜ್ಜನ ನಡೆಯಲಿದೆ. ಮಸ್ತಕಾಭಿಷೇಕದ ವೇಳೆ ಹೈಟೆಕ್ ಅಟ್ಟಣಿಗೆ ಮೇಲೆ 5 ಸಾವಿರ ಮಂದಿ ಕೂರುವ ವ್ಯವಸ್ಥೆ ಮಾಡಲಾಗಿದೆ. ಬೆಳಗೊಳ ಸಂಪರ್ಕಿಸುವ ರಸ್ತೆಗಳಿಗೆ ಡಾಂಬರು ಹಾಕಲಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ಸ್ವಾಗತ ಕೋರುವ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ರಸ್ತೆಯುದ್ದಕ್ಕೂ ವಿದ್ಯುದ್ದೀಪಗಳನ್ನು ಹಾಕಲಾಗಿದೆ. ಹೀಗಾಗಿ ಇಡೀ ಶ್ರವಣಬೆಳಗೊಳ ಮದುವೆ ಮನೆಯಂತೆ ಕಂಗೊಳಿಸುತ್ತಿದೆ.

ಫೆ. 8ರಿಂದ ಬಾಹುಬಲಿ ತಂದೆ ವೃಷಭನಾಥರ ಪಂಚಕಲ್ಯಾಣದ ವಿಧಿಗಳು ಹಾಗೂ ವಿವಿಧ ಆರಾಧನೆಗಳು ಸಂಸ್ಕಾರ ಮಂಟಪದಲ್ಲಿ ನಡೆಯಲಿವೆ. 16ರಂದು ಶೋಭಾಯಾತ್ರೆ ಆಯೋಜಿಸಿದ್ದು, ಅಂದು ಬಾಹುಬಲಿ ಇತಿಹಾಸ, ಪ್ರಾಚೀನ ಕಾಲದ ಜಿನಮಂದಿರಗಳ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ.

‘ಮಹೋತ್ಸವ ಯಶಸ್ವಿಯಾಗಿ ನಡೆಸಲು ರಾಜ್ಯ ಸರ್ಕಾರ ಹಗಲಿರುಳು ಶ್ರಮಿಸಿದೆ. ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಬರುತ್ತಿದ್ದಾರೆ. ಕಳೆದ ಮಹಾಮಸ್ತಕಾಭಿಷೇಕದಲ್ಲಿ ಅಂದಿನ ರಾಷ್ಟ್ರಪತಿ ಡಾ.ಅಬ್ದುಲ್‌ ಕಲಾಂ ಕ್ಷೇತ್ರಕ್ಕೆ ಬಂದು ಮಕ್ಕಳ ಆಸ್ಪತ್ರೆ ಲೋಕಾರ್ಪಣೆ ಮಾಡಿದ್ದರು’ ಎಂದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದರು.

ಬಾಹುಬಲಿ ದರ್ಶನಕ್ಕಾಗಿ 2 ಕಡೆಗಳಿಂದ ವಿಂಧ್ಯಗಿರಿ ಏರಲು ವ್ಯವಸ್ಥೆ ಮಾಡಲಾಗಿದ್ದು, ಜನದಟ್ಟಣೆ ನೋಡಿಕೊಂಡು ಸಾರ್ವಜನಿಕರನ್ನು ಬೆಟ್ಟದ ಮೇಲೆ ಕಳುಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

600ಕ್ಕೂ ಹೆಚ್ಚು ಬಸ್‌

ಸಾರಿಗೆ ಸಂಸ್ಥೆ ಈಗಾಗಲೇ  600ಕ್ಕೂ ಹೆಚ್ಚು ಬಸ್‌ಗಳನ್ನು ವ್ಯವಸ್ಥೆ ಮಾಡಿದೆ. ಬೆಳಗಾವಿ, ಅಥಣಿ, ನಿಪ್ಪಾಣಿ, ಸೊಲ್ಲಾಪುರ, ಕೊಲ್ಲಾಪುರ, ಸಾಂಗ್ಲಿ, ಹುಬ್ಬಳ್ಳಿ ಸೇರಿದಂತೆ ಮಹಾರಾಷ್ಟ್ರದ ಗಡಿ ಜಿಲ್ಲೆಗಳಿಗೆ ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಿದೆ. ಜತೆಗೆ ಶ್ರವಣಬೆಳಗೊಳದ ಸುತ್ತಲಿನ ಜಿಲ್ಲೆಗಳಿಗೂ ವಿಶೇಷ ಬಸ್‌ ಸಂಚಾರ ಮಾಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.