ADVERTISEMENT

‘ಹಿಂದೂಗಳ ಭಾವನೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಕ್ಕಂದ’

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 14:37 IST
Last Updated 8 ಫೆಬ್ರುವರಿ 2018, 14:37 IST
ಅನಂತಕುಮಾರ್ ಹೆಗಡೆ (ಸಂಗ್ರಹ ಚಿತ್ರ)
ಅನಂತಕುಮಾರ್ ಹೆಗಡೆ (ಸಂಗ್ರಹ ಚಿತ್ರ)   

ನವದೆಹಲಿ: ಮಠಗಳು ಮತ್ತು ದೇವಸ್ಥಾನಗಳನ್ನು ಧಾರ್ಮಿಕ ದತ್ತಿ ಕಾಯ್ದೆ ಅಡಿ ಸೇರಿಸುವ ನಿಟ್ಟಿನಲ್ಲಿ ಪ್ರಕಟಣೆ ಹೊರಡಿಸಿ, ಅಭಿಪ್ರಾಯ ಸಂಗ್ರಹಿಸಲು ಹೊರಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುಸಂಖ್ಯಾತ ಹಿಂದೂಗಳ ಭಾವನೆಗಳ ಜೊತೆ ಚಕ್ಕಂದ ಆಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಆರೋಪಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯನ್ನೇ ದೃಷ್ಟಿಯಲ್ಲಿ ಇರಿಸಿಕೊಂಡು ಮತ್ತೊಬ್ಬರ ಭಾವನೆಯನ್ನು ಅವಹೇಳನ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

‘ಹಿಂದೂಗಳ ಮನ ನೋಯಿಸುವ ನಿಟ್ಟಿನಲ್ಲಿ ದಿನಕ್ಕೊಂದು ಪ್ರಕಟಣೆ ಹೊರಡಿಸಿ ಅದನ್ನು ಹಿಂದಕ್ಕೆ ಪಡೆದುಕೊಳ್ಳುತ್ತಿರುವುದರ ಹಿಂದಿನ ಉದ್ದೇಶವಾದರೂ ಏನು’ ಎಂದು ಅವರು ಪ್ರಶ್ನಿಸಿದರು. ಅಲ್ಲದೆ, ‘ಇನ್ನೆರಡು ತಿಂಗಳಲ್ಲಿ ಅಧಿಕಾರ ಕಳೆದುಕೊಂಡು ಮನೆ ಸೇರಲಿರುವ ನೀವು ಅಲ್ಲಿಯವರೆಗಾದರೂ ಸುಮ್ಮನಿರಿ’ ಎಂದು ಹೇಳಿದರು.

ADVERTISEMENT

‘ಅಲ್ಪಸಂಖ್ಯಾತರ ವಿರುದ್ದ ದಾಖಲಾಗಿದ್ದ ಅಪರಾಧ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದಾಗಿ ಸುತ್ತೋಲೆ ಹೊರಡಿಸಿರುವ ಸರ್ಕಾರ, ಹಿಂದೂಗಳನ್ನು ಅದರಿಂದ ದೂರವಿರಿಸಿದೆ. ಹಿಂದೂ ಮಠಗಳು, ದೇವಸ್ಥಾನಗಳ ಆಸ್ತಿ ಕಬಳಿಸುವ ಹೊಂಚು ಹಾಕುತ್ತಿರುವ ಸಿದ್ದರಾಮಯ್ಯ ಮುಸ್ಲಿಮರು, ಕ್ರೈಸ್ತರ ಮಸೀದಿ ಮತ್ತು ಚರ್ಚ್‌ಗಳನ್ನು ಪರಿಗಣಿಸದೇ ಇರುವುದು ಏಕೆ’ ಎಂದು ಅವರು ಹರಿಹಾಯ್ದರು.

‘ತಾರತಮ್ಯ ನೀತಿ’: ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸದೆ ಹಿಂದೂಗಳ ಭಾವನೆಗಳೊಂದಿಗೆ ಆಟ ಆಡಿದ ಸಿದ್ದರಾಮಯ್ಯ, ‘ಶಾದಿ ಭಾಗ್ಯ’ ಯೋಜನೆ ಜಾರಿಗೊಳಿಸಿ ತಾರತಮ್ಯ ನೀತಿ ಅನುಸರಿಸಿದರು. ಲಿಂಗಾಯತ– ವೀರಶೈವ ಎಂಬ ಭೇದ ಹುಟ್ಟುಹಾಕಿ ಹಿಂದೂಗಳನ್ನು ಒಡೆಯಲು ಯತ್ನಿಸಿದರು ಎಂದು ಸಂಸದ ನಳಿನ್‌ಕುಮಾರ್‌ ಕಟೀಲು ಆರೋಪಿಸಿದರು.

‘ತಾಕತ್ತಿದ್ದರೆ ಪ್ರಕಟಣೆ ಹಿಂದಕ್ಕೆ ಪಡೆಯಬೇಡಿ’
ಮಠಗಳು ಮತ್ತು ದೇವಸ್ಥಾನಗಳನ್ನು ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಹೊರಡಿಸಲಾಗಿದ್ದ ಪ್ರಕಟಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ವಾಪಸ್‌ ಪಡೆದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ತಾಕತ್ತಿದ್ದರೆ ಅದನ್ನು ಹಿಂದಕ್ಕೆ ಪಡೆಯದೆ ಜಾರಿಗೊಳಿಸಲಿ ಎಂದು ಸವಾಲೆಸೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.