ADVERTISEMENT

‘ಪಿಡಬ್ಲ್ಯುಡಿಯಲ್ಲಿ ಶೇ 15 ಲಂಚ!’

ಎಸಿಬಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರ ಸಂಘದ ದೂರು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 18:43 IST
Last Updated 8 ಫೆಬ್ರುವರಿ 2018, 18:43 IST

ಬೆಂಗಳೂರು: ಸಿದ್ದರಾಮಯ್ಯ ಅವರದ್ದು 10 ಪರ್ಸೆಂಟ್‌ ಸರ್ಕಾರ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪ ಮಾಡಿದ ಬೆನ್ನಲ್ಲೇ ಲೋಕೋಪಯೋಗಿ ಇಲಾಖೆಯಲ್ಲಿ ಕಾಮಗಾರಿ ಗುತ್ತಿಗೆ ಪಡೆಯಲು 15 ಪರ್ಸೆಂಟ್ ಲಂಚ ನೀಡಬೇಕು ಎಂದು ಆರೋಪಿಸಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ಕೊಡಲಾಗಿದೆ.

ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರ ಸಂಘ ಗುರುವಾರ ಈ ದೂರು ನೀಡಿದೆ.

ಕಾಮಗಾರಿಗಳನ್ನು ವಿಭಾಗಿಸಿ ತುಂಡುಗುತ್ತಿಗೆ ನೀಡದೆ ಇ–ಟೆಂಡರ್ ಮೂಲಕವೇ ಗುತ್ತಿಗೆ ನೀಡಬೇಕು ಎಂಬ ನಿಯಮ ಇದೆ. ನಿಯಮ ಉಲ್ಲಂಘಿಸಿದರೆ ಎಂಜಿನಿಯರ್‌ಗಳನ್ನು ಹೊಣೆ ಮಾಡುವುದಾಗಿ ಸರ್ಕಾರ ಸುತ್ತೋಲೆ ಹೊರಡಿಸಿದೆ.  ಆದರೂ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ಗಳಾದ ಎಚ್‌.ಆರ್. ಕೃಷ್ಣಮೂರ್ತಿ ಮತ್ತು ಜಿ. ಚಂದ್ರಶೇಖರ್ ನಿಯಮ ಉಲ್ಲಂಘಿಸಿ ಟೆಂಡರ್ ನಡೆಸುತ್ತಿದ್ದಾರೆ ಎಂದು ಸಂಘದ ಅಧ್ಯಕ್ಷ ಎನ್. ಮಹದೇವಸ್ವಾಮಿ ದೂರಿನಲ್ಲಿ ಅರೋಪಿಸಿದ್ದಾರೆ.

ADVERTISEMENT

ಟೆಂಡರ್ ಪ್ರಕಟಣೆ ಪ್ರತಿಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ ಸಿಗದಂತೆ ನೋಡಿಕೊಳ್ಳಲಾಗುತ್ತಿದೆ. ಪ್ರಸಾರವೇ ಇಲ್ಲದ ಪತ್ರಿಕೆಗಳಲ್ಲಿ ಜಾಹಿರಾತು ಕೊಡಲಾಗುತ್ತಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

‘ಕಾಮಗಾರಿ ಅನುದಾನ ಬಿಡುಗಡೆಗೆ ಹಿರಿಯ ಅಧಿಕಾರಿಗಳಿಗೆ ಶೇ 5, ಇತರೆ ಖರ್ಚುಗಳು ಸೇರಿ ಶೇ 15ರಷ್ಟು ಲಂಚ ನೀಡಬೇಕು. ಹಣ ನೀಡುವ ಯೋಗ್ಯತೆ ಇದ್ದರೆ ಮಾತ್ರ ಬರುವಂತೆ ಅಧಿಕಾರಿಗಳು ಪದೇ ಪದೇ ಹೇಳುತ್ತಾರೆ’ ಎಂದು ದೂರಿನಲ್ಲಿ ವಿವರಿಸಲಾಗಿದೆ.

**

ಸುಳ್ಳು ಆರೋಪ

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಯಪಾಲಕ ಎಂಜಿನಿಯರ್ ಎಚ್‌.ಆರ್. ಕೃಷ್ಣಮೂರ್ತಿ, ‘15 ಪರ್ಸೆಂಟ್ ಲಂಚ ನೀಡಬೇಕು ಎಂಬುದು ಗುತ್ತಿಗೆ ಸಿಗದವರ ಸುಳ್ಳು ಆರೋಪ. ಇ–ಟೆಂಡರ್ ಮೂಲಕವೂ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಮುಖ್ಯ ಎಂಜಿನಿಯರ್ ಆದೇಶದಂತೆ ಟೆಂಡರ್ ಪ್ರಕ್ರಿಯೆ ತಡೆ ಹಿಡಿಯಲಾಗಿದೆ’ ಎಂದು ಸ್ಪಷ್ಪಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.