ADVERTISEMENT

ಮಂಚನಬೆಲೆಯಿಂದ ನೀರು; ಅರ್ಕಾವತಿಯಲ್ಲಿ ಪ್ರವಾಹ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 20:12 IST
Last Updated 11 ಫೆಬ್ರುವರಿ 2018, 20:12 IST
ದೇವರಸೇಗೌಡನ ದೊಡ್ಡಿ ಬಳಿ ತಾತ್ಕಾಲಿಕ ಚೆಕ್‌ಡ್ಯಾಮ್‌ ಕೊಚ್ಚಿ ಹೋಗಿರುವುದು
ದೇವರಸೇಗೌಡನ ದೊಡ್ಡಿ ಬಳಿ ತಾತ್ಕಾಲಿಕ ಚೆಕ್‌ಡ್ಯಾಮ್‌ ಕೊಚ್ಚಿ ಹೋಗಿರುವುದು   

ರಾಮನಗರ: ಮಂಚನಬೆಲೆ ಜಲಾಶಯದಿಂದ ಅರ್ಕಾವತಿ ನದಿಗೆ ನಿರಂತರವಾಗಿ ನೀರು ಹರಿಸಲಾಗುತ್ತಿದ್ದು, ನದಿ ನೀರು ಕಾವೇರಿಯ ಒಡಲು ಸೇರತೊಡಗಿದೆ.

ಮಾಗಡಿ ತಾಲ್ಲೂಕಿನ ಗಡಿಯಲ್ಲಿರುವ ತಿಪ್ಪಗೊಂಡನಹಳ್ಳಿ ಜಲಾಶಯದ ಕ್ರಸ್ಟ್‌ ಗೇಟುಗಳು ದುರಸ್ತಿಯಾದ ಪರಿಣಾಮ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಹರಿದು ಮಂಚನಬೆಲೆ ಜಲಾಶಯವನ್ನು ಸೇರುತ್ತಿದೆ. ಹೀಗೆ ಬಂದ ನೀರನ್ನು ಜಲಾಶಯದ ಮೂಲಕ ಅರ್ಕಾವತಿ ನದಿಗೆ ಹರಿಸಲಾಗುತ್ತಿದೆ.

ನದಿಯಲ್ಲಿ ಹೆಚ್ಚಿದ ಪ್ರವಾಹದಿಂದಾಗಿ ದೇವರಸೇಗೌಡನ ದೊಡ್ಡಿ ಬಳಿ ನಿರ್ಮಿಸಲಾಗಿದ್ದ ತಾತ್ಕಾಲಿಕ ತಡೆಗೋಡೆ ಒಡೆದಿದೆ. ರಾಮನಗರಕ್ಕೆ ನಿತ್ಯ ಬಳಕೆಗೆ ನೀರು ಪೂರೈಸುವ ಸಲುವಾಗಿ ಇಲ್ಲಿ ಬಂಡ್‌ಗಳನ್ನು ಹಾಕಿ ಈ ತಾತ್ಕಾಲಿಕ ಚೆಕ್‌ ಡ್ಯಾಮ್‌ ಅನ್ನು ನಿರ್ಮಾಣ ಮಾಡಲಾಗಿತ್ತು.

ADVERTISEMENT

ತಿಪ್ಪಗೊಂಡನಹಳ್ಳಿ ಜಲಾಶಯವು ಬೆಂಗಳೂರಿನ ಕೊಳಚೆ ನೀರಿನಿಂದ ತುಂಬಿದೆ. ಇದೀಗ ಅಲ್ಲಿನ ನೀರು ಮಂಚನಬೆಲೆ ಸೇರಿ ಎರಡೂ ಕಲುಷಿತವಾಗತೊಡಗಿದೆ. ಮುಂದೆ ಇದೇ ನೀರು ಹಾರೋಬೆಲೆ ಜಲಾಶಯದ ಮೂಲಕ ಸಂಗಮದಲ್ಲಿ ಕಾವೇರಿಯೊಡನೆ ವಿಲೀನವಾಗುತ್ತಿದೆ. ಅದೇ ನೀರನ್ನು ಕುಡಿಯುವ ಉದ್ದೇಶಕ್ಕೂ ಬಳಸಿಕೊಳ್ಳಲಾಗುತ್ತಿದೆ.

ತಿಪ್ಪಗೊಂಡನಹಳ್ಳಿ ಜಲಾಶಯದ ಕ್ರಸ್ಟ್‌ ಗೇಟ್‌ಗಳು ದುರಸ್ತಿಯಾಗುವವರೆಗೂ ನದಿಯಲ್ಲಿ ನೀರಿನ ಹರಿವು ಮುಂದುವರಿಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.