ADVERTISEMENT

ಕಾಡಿನ ಪ್ರೀತಿ ಬಿತ್ತುವ ಜಂಗಲೇವಾಲಾ ಬಾಬಾ!

ಪ್ರವೀಣ ಕುಲಕರ್ಣಿ
Published 20 ಫೆಬ್ರುವರಿ 2018, 19:30 IST
Last Updated 20 ಫೆಬ್ರುವರಿ 2018, 19:30 IST
ಕಾಡಿನ ಪ್ರೀತಿ ಬಿತ್ತುವ ಜಂಗಲೇವಾಲಾ ಬಾಬಾ!
ಕಾಡಿನ ಪ್ರೀತಿ ಬಿತ್ತುವ ಜಂಗಲೇವಾಲಾ ಬಾಬಾ!   

ಚಂದ್ರಗಿರಿ (ಶ್ರವಣಬೆಳಗೊಳ): ಮೋಕ್ಷದ ಹಾದಿ ಹುಡುಕುತ್ತಲೇ ಪರಿಸರ ಸಂರಕ್ಷಣೆಗೂ ಕೊಡುಗೆಯನ್ನು ನೀಡುತ್ತಿರುವ ಮುನಿಯೊಬ್ಬರು ಮಸ್ತಕಾಭಿಷೇಕದಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ದರ್ಶನಕ್ಕೆ ಬಂದವರ ಎದೆಗಳಲ್ಲಿ ಕಾಡಿನ ಪ್ರೀತಿಯ ಬೀಜವನ್ನೂ ಬಿತ್ತುತ್ತಿದ್ದಾರೆ. ಆ ಮುನಿಯೇ ‘ಜಂಗಲೇವಾಲಾ ಬಾಬಾ’.

ತ್ಯಾಗಿನಗರದಲ್ಲಿ ಮುನಿಗಳ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರೂ ಈ ಬಾಬಾ ಉಳಿದುಕೊಂಡಿರುವುದು ಚಂದ್ರಗಿರಿ ನೆತ್ತಿಯ ಮೇಲಿರುವ ಬಂಡೆಗಲ್ಲಿನ ಮೇಲೆ. ಚಿನ್ಮಯ ಸಾಗರ ಎಂಬ ನಾಮಧೇಯವುಳ್ಳ ಅವರನ್ನು ಜನರೆಲ್ಲ ಕರೆಯುವುದು ‘ಜಂಗಲೇವಾಲಾ ಬಾಬಾ’ ಎಂದೇ. ಏಕೆಂದರೆ, ಅವರದು ಸದಾ ಕಾಡಿನಲ್ಲೇ ವಾಸ್ತವ್ಯ.

ಬಾಬಾ ಅವರನ್ನು ಹುಡುಕುತ್ತಾ, ಅವರು ವಾಸ್ತವ್ಯ ಮಾಡಿದ್ದ ಬೆಟ್ಟವನ್ನು ಏರುವ ವೇಳೆಗಾಗಲೇ ಯಾವುದೋ ಬಂಡೆಯ ಮರೆಯಲ್ಲಿ ಅದೃಶ್ಯವಾಗಿಬಿಟ್ಟಿದ್ದರು. ಆಹಾರ ಸಿದ್ಧಪಡಿಸಿಕೊಂಡ ಭಕ್ತರ ಗುಂಪು ಅವರಿಗಾಗಿ ಚೌಕದಲ್ಲಿ ಕಾಯುತ್ತಾ ಕುಳಿತಿತ್ತು.

ADVERTISEMENT

‘ಎಲ್ಲಿದ್ದಾರೆ ಬಾಬಾ’ ಎಂದು ಅಲ್ಲಿದ್ದ ಭಕ್ತರನ್ನು ಪ್ರಶ್ನಿಸಿದಾಗ, ‘ಭದ್ರಬಾಹು ಗುಹೆಯ ಹಿಂಭಾಗದಲ್ಲೆಲ್ಲೋ ಧ್ಯಾನ ಮಾಡಲು ಹೋಗಿದ್ದಾರೆ. ಇನ್ನೇನು ಆಹಾರ ಚರ್ಯೆಗಾಗಿ ಬರುತ್ತಾರೆ’ ಎಂದು ಉತ್ತರಿಸಿದರು. ಹೌದು, ಅವರ ರೂಢಿಯೇ ಹಾಗೆ. ನಿತ್ಯ ಬೆಳ್ಳಂಬೆಳಿಗ್ಗೆ ಗಿರಿ–ಕಂದರ, ಗುಹೆ, ಬಂಡೆಗಲ್ಲು, ದಟ್ಟಕಾಡು ಎಲ್ಲೆಂದರಲ್ಲಿ ನಿಂತೋ ಕುಳಿತೋ ಧ್ಯಾನ ಮಾಡುತ್ತಾರೆ.

ಬಾಬಾ ಅವರನ್ನು ಹುಡುಕುತ್ತಾ, ಕಡಿದಾದ ಹಾಸುಬಂಡೆಯ ಮೇಲೆ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಾ, ಕಲ್ಲುಬಂಡೆಗಳ ಮಧ್ಯೆ ನುಸುಳಿ ಹೋದಾಗ ದೂರದಲ್ಲೆಲ್ಲೋ ಜನರ ಸಣ್ಣ ಗುಂಪೊಂದು ಕಣ್ಣಿಗೆ ಬಿತ್ತು. ಹೋಗಿ ನೋಡಿದರೆ ಜಂಗಲೇವಾಲಾ ಬಾಬಾ ಅಲ್ಲೇ ಇದ್ದರು. ಸುತ್ತ ಕುಳಿತಿದ್ದ ಭಕ್ತರಿಗೆ ಉಪದೇಶ ನೀಡುತ್ತಿದ್ದರು. ಬಳಿಕ ನಮ್ಮ ತಂಡದೊಂದಿಗೂ ಮಾತಿಗೆ ಕುಳಿತರು ಬಾಬಾ.

ಚಾತುರ್ಮಾಸ್ಯ ವ್ರತವನ್ನು ಬನ್ನೇರುಘಟ್ಟದ ಕಾಡಿನಲ್ಲಿ ಕೈಗೊಂಡಿದ್ದ ಈ ಮುನಿ, ಒಂದುರಾತ್ರಿ ಆನೆಗಳ ಹಿಂಡಿನ ಮಧ್ಯೆ ಮಲಗಿದ್ದನ್ನು ಕಂಡು ಅರಣ್ಯ ಇಲಾಖೆಯ ಸಿಬ್ಬಂದಿಯೇ ಹೌಹಾರಿತ್ತು. ಆದರೆ, ಜಪ್ಪಯ್ಯ ಎಂದರೂ ಕಾಡಿನಿಂದ ಕಾಲು ಕೀಳಲು ಬಾಬಾ ಒಪ್ಪಿರಲಿಲ್ಲ. ಆದ್ದರಿಂದಲೇ ಅವರಿಗೆ ನಮ್ಮಿಂದ ಎದುರಾದ ಮೊದಲ ಪ್ರಶ್ನೆ: ‘ಸದಾ ಕಾಡಿನಲ್ಲೇ ಉಳಿಯುವುದೇಕೆ? ನಿಮಗೆ ಭಯ ಆಗುವುದಿಲ್ಲವೆ?’ ಎಂಬುದು.

‘ಸಾಧಕನಿಗೆ ಎಲ್ಲಕ್ಕಿಂತ ಸಾಧನೆಯೇ ಮುಖ್ಯ. ನಿಸ್ಪೃಹತೆಯಿಂದ ದೇಶದ ಸೇವೆ ಮಾಡಲು ಈ ದಾರಿಯನ್ನು ಕಂಡುಕೊಂಡಿದ್ದೇನೆ. ನಿಸರ್ಗದೊಟ್ಟಿಗೆ ಬಾಳಲು ಏತರ ಭಯ? ಜನದಟ್ಟಣೆಯ ನಡುವಿದ್ದು, ಏನೂ ಮಾಡದಿರುವುದಕ್ಕಿಂತ, ಹೀಗೆ ಕಾಡಿನಲ್ಲಿದ್ದು ಜನಹಿತಕ್ಕಾಗಿ ಶ್ರಮಿಸುವುದೇ ಲೇಸು’ ಎಂದರು.

‘ನಾನು ಅರಣ್ಯದಲ್ಲಿ ಇದ್ದುಕೊಂಡು ಮುಖ್ಯವಾಹಿನಿಯಿಂದ ದೂರ ಉಳಿದವರ, ದೀನರ, ದಲಿತರ, ದಮನಿತರ, ದುಃಖಿಗಳ ಒಳಿತಿಗಾಗಿ ಕೆಲಸ ಮಾಡುತ್ತಿದ್ದೇನೆ. ಅಲ್ಲದೆ, ಹೋದಲ್ಲೆಲ್ಲ ನಶೆಮುಕ್ತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದೇನೆ’ ಎಂದೂ ಹೇಳಿದರು.

ಅಂದಹಾಗೆ, ಪ್ರತಿದಿನ ನೂರಾರು ಪೊಲೀಸರು ಇವರಿಂದ ಜಪಮಾಲೆ ಪಡೆಯಲು ಬರುತ್ತಿದ್ದಾರೆ. ಚಟಗಳನ್ನು ಬಿಡಲು ವಾಗ್ದಾನ ಮಾಡುತ್ತಿರುವ ಅವರೆಲ್ಲರಿಗೂ ಬಾಬಾ ಸರಳ ಜೀವನದ, ಸಾತ್ವಿಕ ಬದುಕಿನ ಪಾಠ ಹೇಳುತ್ತಿದ್ದಾರೆ.

ಬಾಬಾ ಅವರ ಪರಿಸರ ಪ್ರೀತಿ ಕೂಡ ಅನನ್ಯವಾದುದು. ಒಮ್ಮೆ ಕುಂದಾದ್ರಿ ಬೆಟ್ಟದ ತಪ್ಪಲಿನಲ್ಲಿ ಅವರು ವಾಸ್ತವ್ಯ ಹೂಡಿದ್ದರು. ಅಲ್ಲಿನ ಮಾಲಿನ್ಯ ಕಂಡು ಅರಣ್ಯ ಇಲಾಖೆಯ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡಿದ್ದರು. ಸ್ವಚ್ಛಗೊಳಿಸಲು ಸಂಕಲ್ಪವನ್ನೂ ಮಾಡಿದರು.

‘ನಮ್ಮ ಭಕ್ತರ ಗುಂಪಿನೊಂದಿಗೆ ಸುತ್ತಲಿನ ಹಳ್ಳಿಗಳ ಜನ ಸಹ ಸೇರಿದ್ದರಿಂದ ಒಂದೇ ದಿನದಲ್ಲಿ ಏಳು ಲಾರಿ ಲೋಡ್‌ಗಳಷ್ಟು ತ್ಯಾಜ್ಯವನ್ನು ಕುಂದಾದ್ರಿ ಬೆಟ್ಟದಿಂದ ಆಚೆ ಸಾಗಿಸಲಾಗಿತ್ತು’ ಎಂದು ಬಾಬಾ ಸ್ಮರಿಸಿದರು. ‘ನಾನು ಹೋಗಿ ತಂಗಿದ ಕಾಡಿನ ಪ್ರದೇಶದಲ್ಲಿ ಅನೈತಿಕ ಚಟುವಟಿಕೆಗಳು ತಂತಾನೆ ನಿಂತು ಹೋಗುತ್ತವೆ. ಗಿಡಗಳನ್ನು ಕಡಿಯಲು ನಾನು ಬಿಡುವುದಿಲ್ಲ’ ಎಂದೂ ಸೇರಿಸಿದರು.

ನಶೆಮುಕ್ತಿಗಾಗಿ ಬಂದ ಜನರಿಗೆ ಜಪಮಾಲೆ ಜತೆಗೆ ಸಸಿಯನ್ನೂ ಅವರು ಪ್ರಸಾದ ರೂಪವಾಗಿ ಕೊಡುತ್ತಾರೆ. ಬಾಬಾ ಕೊಟ್ಟ ಸಸಿ ಎಂದು ಜನ ಪ್ರೀತಿ
ಯಿಂದ ನೀರೆರೆದು ಅವುಗಳನ್ನು ಬೆಳೆಸುತ್ತಾರೆ. ಹೀಗೆ ಅವರಿಂದ ಸದ್ದಿಲ್ಲದೆ ಪರಿಸರ ಸಂರಕ್ಷಣೆಯ ಕೆಲಸ ನಡೆದಿದೆ.

ಬಾಬಾ ಅವರ ಈ ಪರಿಸರ ಪ್ರೀತಿ ಅವರಿಗೆ ತೊಂದರೆಯನ್ನು ಕೊಟ್ಟಿದ್ದೂ ಇದೆ. ಅರಣ್ಯ ಇಲಾಖೆಯ ಸಿಬ್ಬಂದಿಯಂತೂ ಕಾಡಿನಿಂದ ಅವರನ್ನು ಆಚೆಗೆ ಕಳುಹಿಸಲು ಸದಾ ಹಾತೊರೆಯುತ್ತಾರಂತೆ. ‘ಅವರ ಅಕ್ರಮ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ ಎಂದು ಹಾಗೆ ಮಾಡುತ್ತಾರೆ. ಆದರೆ, ನಾನು ಕದಲುವುದಿಲ್ಲ’ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದರು ಈ ಸಂತ.

***

ಎಂಥಾ ಪರಿಸರ ಪ್ರೀತಿ!

40 ಸಾವಿರ ಕಿ.ಮೀ - ಜಂಗಲೇವಾಲಾ ಬಾಬಾ ಅವರು ಕಾಲ್ನಡಿಗೆಯಲ್ಲಿ ಕ್ರಮಿಸಿದ ಒಟ್ಟು ದೂರ

30 ವರ್ಷ - ಇದುವರೆಗೆ ಅವರು ಕಾಡಿನಲ್ಲಿ ಕಳೆದ ಅವಧಿ

25 ಲಕ್ಷ - ಭಕ್ತರ ನೆರವಿನಿಂದ ಬೆಳೆಸಿದ ಗಿಡಗಳು

***

ಭೋಗ ಸಾಮಗ್ರಿಗಳ ಜತೆ ಬದುಕುವ ಸ್ವಾಮಿಗಳು ಯಾರೂ ಸಾಧುಗಳೇ ಅಲ್ಲ. ಹಾಗೆಯೇ ದುಃಖದಿಂದ ಕಠೋರ ಸಾಧನೆ ಮಾಡುವವರು ಸಹ ಮುನಿಗಳಲ್ಲ
- ಜಂಗಲೇವಾಲಾ ಬಾಬಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.