ADVERTISEMENT

ಜನರನ್ನು ಅರ್ಥಮಾಡಿಕೊಳ್ಳಲು ರಾಜ್ಯ ಪ್ರವಾಸ: ನಿಖಿಲ್‌ ಕುಮಾರಸ್ವಾಮಿ

‘ಜನರೊಂದಿಗೆ ಜನತಾದಳ’ ಕಾರ್ಯಕ್ರಮಕ್ಕೆ ಚಾಲನೆ | ನಿಖಿಲ್‌ ಪ್ರವಾಸ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 15:44 IST
Last Updated 15 ಜೂನ್ 2025, 15:44 IST
ಜೆಡಿಎಸ್‌ ಕೇಂದ್ರ ಕಚೇರಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ‘ಜನರೊಂದಿಗೆ ಜನತಾದಳ’ ರಾಜ್ಯ ಪ್ರವಾಸ ಮತ್ತು ಮಿಸ್ಡ್‌ ಕಾಲ್‌ ಅಭಿಯಾನದ ಪೋಸ್ಟರ್‌ ಬಿಡುಗಡೆ ಮಾಡಿದರು. ನಿಖಿಲ್‌ ಕುಮಾರಸ್ವಾಮಿ, ಎಚ್‌.ಡಿ.ಕುಮಾರಸ್ವಾಮಿ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ
ಜೆಡಿಎಸ್‌ ಕೇಂದ್ರ ಕಚೇರಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ‘ಜನರೊಂದಿಗೆ ಜನತಾದಳ’ ರಾಜ್ಯ ಪ್ರವಾಸ ಮತ್ತು ಮಿಸ್ಡ್‌ ಕಾಲ್‌ ಅಭಿಯಾನದ ಪೋಸ್ಟರ್‌ ಬಿಡುಗಡೆ ಮಾಡಿದರು. ನಿಖಿಲ್‌ ಕುಮಾರಸ್ವಾಮಿ, ಎಚ್‌.ಡಿ.ಕುಮಾರಸ್ವಾಮಿ ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು 58 ದಿನಗಳ ರಾಜ್ಯ ಪ್ರವಾಸ ಮತ್ತು ಸದಸ್ಯತ್ವ ನೋಂದಣಿಗಾಗಿ ‘ಜನರೊಂದಿಗೆ ಜನತಾದಳ’ ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಪಕ್ಷದ ಕಚೇರಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಜನರೊಂದಿಗೆ ಜನತಾದಳ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸೋಮವಾರ ತುಮಕೂರಿನಿಂದ ಪ್ರವಾಸ ಆರಂಭವಾಗಲಿದೆ. 58ನೇ ದಿನ ಮೈಸೂರಿನಲ್ಲಿ ಕೊನೆಗೊಳ್ಳಲಿದೆ’ ಎಂದರು. 

‘ಜೆಡಿಎಸ್‌ ಚುನಾವಣೆಯಲ್ಲಿ ಶೇ 22ರಷ್ಟು ಮತ ಪಡೆಯುತ್ತಿತ್ತು. ಈಗ ಆ ಪ್ರಮಾಣ ಕಡಿಮೆಯಾಗುತ್ತಲೇ ಬಂದಿದೆ. ಅದು ಏಕೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ಪುನಃ ಅಂತಹ ಶಕ್ತಿ ಗಳಿಸಿಕೊಳ್ಳಲು ಈ ಪ್ರವಾಸ ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದರು.

ADVERTISEMENT

‘ಪ್ರವಾಸದ ಅವಧಿಯಲ್ಲಿ ರಾಜ್ಯದ ಪ್ರತಿ ಜಿಲ್ಲೆ ಮತ್ತು ಪ್ರತಿ ತಾಲ್ಲೂಕಿನಲ್ಲೂ ಪಕ್ಷದ ನಾಯಕರು, ಕಾರ್ಯಕರ್ತರು ಮತ್ತು ಸಾಮಾನ್ಯ ಜನರನ್ನು ಭೇಟಿ ಮಾಡಲಿದ್ಧೇನೆ. ಪಕ್ಷದ ಬಗ್ಗೆ ಜನರು ಹೊಂದಿರುವ ಭಾವನೆಯನ್ನು ಅರ್ಥಮಾಡಿಕೊಳ್ಳಲಿದ್ದೇನೆ. ಪಕ್ಷವನ್ನು ಮತ್ತೆ ಗಟ್ಟಿಗೊಳಿಸಲು ಏನು ಮಾಡಬೇಕೆಂಬುದನ್ನೂ ಜನರಿಂದ ಕೇಳಲಿದ್ದೇನೆ’ ಎಂದರು.

‘‍ನಾವೀಗ ಎನ್‌ಡಿಎ ಮೈತ್ರಿಕೂಟದಲ್ಲಿದ್ದೇವೆ. ಪಕ್ಷವನ್ನು ಬಲಪಡಿಸಿದರಷ್ಟೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹೆಚ್ಚಿನ ಸ್ಥಾನಗಳಿಗೆ ಬೇಡಿಕೆ ಸಲ್ಲಿಸಬಹುದು. ಇದನ್ನು ಗಮನದಲ್ಲಿ ಇರಿಸಿಕೊಂಡು ಎಲ್ಲರೂ ಕೆಲಸ ಮಾಡಬೇಕು’ ಎಂದರು.

‘ಮಿಸ್ಡ್‌ ಕಾಲ್‌ ಅಭಿಯಾನದ ಮೂಲಕ ಕನಿಷ್ಠ 50 ಲಕ್ಷ ಜನರನ್ನು ಪಕ್ಷಕ್ಕೆ ನೋಂದಣಿ ಮಾಡಿಸಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ. ಪಕ್ಷದ ಕಾರ್ಯಕರ್ತರು ಕನಿಷ್ಠ 5 ಜನರನ್ನು ನೋಂದಣಿ ಮಾಡಿಸಿದರೂ ಈ ಗುರಿ ತಲುಪಬಹುದು’ ಎಂದರು.

‘ರಾಜ್ಯ ಸರ್ಕಾರದ ಸಹಕಾರ ಅಗತ್ಯ’: ‘ಕುಮಾರಸ್ವಾಮಿ ಕೇಂದ್ರದಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾಗಿದ್ದಾರೆ. ರಾಜ್ಯದಲ್ಲಿ ಸ್ಥಗಿತವಾಗಿರುವ ಕೆಲ ಬೃಹತ್ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಲು ರಾಜ್ಯ ಸರ್ಕಾರದ ಸಹಕಾರವೂ ಅಗತ್ಯವಿದೆ. ಇದನ್ನು ಎಲ್ಲರೂ ಮನಗಾಣಬೇಕು’ ಎಂದು ಎಚ್‌.ಡಿ.ದೇವೇಗೌಡ ಹೇಳಿದರು.

ಮನವಿ ನೀಡಲು ಮುಗಿಬಿದ್ದ ಜನರು: ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲು ಮುಂದಾಗುತ್ತಿದ್ದಂತೆಯೇ ಪಕ್ಷದ ಕೆಲ ಕಾರ್ಯಕರ್ತರು ವೇದಿಕೆಯತ್ತ ನುಗ್ಗಿದರು. ಮನವಿ ಸ್ವೀಕರಿಸುವಂತೆ ಒತ್ತಾಯಿಸಿದರು.

‘ಕಾರ್ಯಕ್ರಮ ಮುಗಿದ ನಂತರ ಮನವಿಗಳನ್ನು ಸ್ವೀಕರಿಸುತ್ತೇನೆ’ ಎಂದು ಕುಮಾರಸ್ವಾಮಿ ಅವರು ಹೇಳಿದರೂ ಕಾರ್ಯಕರ್ತರು ಪಟ್ಟು ಬಿಡಲಿಲ್ಲ. ‘ನೀವು ಸಿಗದೇ ಹೋಗುತ್ತೀರಿ. ಈಗಲೇ ಮನವಿ ಸ್ವೀಕರಿಸಿ’ ಎಂದು ಪಟ್ಟು ಹಿಡಿದರು.

ಆಗ ಕುಮಾರಸ್ವಾಮಿ, ‘ನಿಮ್ಮ ಸಮಸ್ಯೆ ನನಗೆ ಗೊತ್ತಿದೆ. ನಿಮ್ಮನ್ನು ಭೇಟಿ ಮಾಡಿ ಚರ್ಚಿಸಿಯೇ ನಾನು ಇಲ್ಲಿಂದ ಹೋಗುತ್ತೇನೆ. ದಯವಿಟ್ಟು ಕಾಯಿರಿ’ ಎಂದು ಹಲವು ಬಾರಿ ಮನವಿ ಮಾಡಿದ ನಂತರ ಕಾರ್ಯಕರ್ತರು ಹಿಂದೆ ಸರಿದು ಕೂತರು.

‘ಪ್ರಾದೇಶಿಕ ಪಕ್ಷಗಳೇ ಪ್ರಜಾಪ್ರಭುತ್ವದ ಜೀವಾಳ’

‘ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಈಗಲೂ ಆಡಳಿತ ಚುಕ್ಕಾಣಿ ಹಿಡಿದಿವೆ. ಹೀಗಾಗಿ ದೇಶದ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳು ಈಗಲೂ ಪ್ರಸ್ತುತ. ಅಂತಹ ಸ್ಥಾನವನ್ನು ಜೆಡಿಎಸ್‌ ಈಗಲೂ ಕಾಯ್ದುಕೊಂಡಿದೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಮತ್ತು ಶಕ್ತಿಗೆ ಸರಿಸಮನಾಗಿ ನಿಲ್ಲಬಲ್ಲ ಮತ್ತೊಬ್ಬ ವ್ಯಕ್ತಿ ಈ ದೇಶದ ಯಾವುದೇ ಪಕ್ಷದಲ್ಲಿ ಇಲ್ಲ. ಅದು ಸತ್ಯ ಮತ್ತು ಮೈತ್ರಿ ಅನಿವಾರ್ಯ. ಅಂತಹ ಪ್ರಧಾನಿ ಮೋದಿ ಅವರು ಗುರುತಿಸಿ ನಾವು ಕೇಳದೇ ಇದ್ದರೂ ಕೇಂದ್ರದಲ್ಲಿ ಸಚಿವ ಸ್ಥಾನ ಕೊಡುವಂತಹ ಶಕ್ತಿಯನ್ನು ಜೆಡಿಎಸ್‌ ಹೊಂದಿದೆ. ಹೀಗಾಗಿ ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕು’ ಎಂದು ಅವರು ಹೇಳಿದರು.

‘ಮೂರು ಬಾರಿ ಸೋತಿದ್ದರೂ ಎದೆಗುಂದದೆ ನಿಖಿಲ್‌ ಕುಮಾರಸ್ವಾಮಿ ಅವರು ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಸೋಲೇ ಗೆಲುವಿಗೆ ಸೋಪಾನ. ಅವರಿಗೆ ಎಲ್ಲರೂ ಸಹಕಾರ ನೀಡಿ ಪಕ್ಷವನ್ನು ಬಲಪಡಿಸಿ’ ಎಂದರು.

ಜನರು ರೋಸಿದ್ದಾರೆ: ಎಚ್‌ಡಿಕೆ

‘ವಿಪರೀತ ತೆರಿಗೆ ಬೆಲೆ ಏರಿಕೆ ಅಭಿವೃದ್ಧಿಗೆ ಕೊಕ್‌ ಸಾಲು ಸಾಲು ದುರಂತಗಳ ಕಾಂಗ್ರೆಸ್‌ ಆಡಳಿತದಿಂದ ಜನರು ರೋಸಿಹೋಗಿದ್ದಾರೆ. ಈ ಸರ್ಕಾರದ ಎಲ್ಲ ನಾಯಕರು ವೀರಾವೇಶದ ಭಾಷಣವನ್ನಷ್ಟೇ ಮಾಡುತ್ತಾರೆ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ದೂರಿದರು.

‘ಸಿದ್ದರಾಮಯ್ಯ ಅವರು ಕೆಪಿಎಸ್‌ಸಿ ಕೊಳೆಯನ್ನೆಲ್ಲಾ ತೊಳೆಯುತ್ತೇನೆ ಎಂದಿದ್ದರು. ಕೆಪಿಎಸ್‌ಸಿಯಲ್ಲಿ ಈಗ ಬರಿ ಕೊಳೆಯೇ ತುಂಬಿದೆ. ಡಿ.ಕೆ.ಶಿವಕುಮಾರ್ ಅವರು ಬೆಂಗಳೂರನ್ನು ಸಿಂಗಪುರ ಮಾಡುತ್ತೇನೆ ಎಂದಿದ್ದರು. ಒಂದು ಮಳೆಗೇ ಬೆಂಗಳೂರು ಏನಾಯಿತು ಎಂಬುದನ್ನು ಜನ ನೋಡಿದ್ದಾರೆ. ಶಿವಕುಮಾರ ನೀನು ಹೇಳಿದ್ದನ್ನು ಮಾಡಪ್ಪಾ. ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಯಾಣ ಕರ್ನಾಟಕದ ಬಗ್ಗೆಯೇ ಮಾತನಾಡುತ್ತಾರೆ. ಇಷ್ಟು ವರ್ಷ ಕಲ್ಯಾಣ ಕರ್ನಾಟಕಕ್ಕೆ ಬಂದ ಅನುದಾನ ಏನಾಯಿತು ಆ ಪ್ರದೇಶ ಏಕೆ ಅಭಿವೃದ್ಧಿ ಆಗಿಲ್ಲ’ ಎಂದು ಪ್ರಶ್ನಿಸಿದರು.

‘ನನ್ನ ಆರೋಗ್ಯ ಸರಿಯಿಲ್ಲ ಜೆಡಿಎಸ್‌ ಹೆಚ್ಚು ದಿನ ಉಳಿಯುವುದಿಲ್ಲ ಎಂದೆಲ್ಲಾ ಸುಳ್ಳುಗಳನ್ನು ಹಬ್ಬಿಸಿದ್ದಾರೆ. ನಾನು ಆರೋಗ್ಯವಾಗಿಯೇ ಇದ್ದೇನೆ. ಇನ್ನೂ 15 ರಿಂದ 20 ವರ್ಷ ಇರುತ್ತೇನೆ. ನಾವು ಯಾರು ಇಲ್ಲದಿದ್ದರೂ ಜೆಡಿಎಸ್‌ ಪಕ್ಷ ಇರಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.