ADVERTISEMENT

ಬೆಳಗಾವಿ: ‘ನೆರೆ’ ಬಳಿಕ 6 ರೈತರ ಆತ್ಮಹತ್ಯೆ

ಆರೇ ತಿಂಗಳಲ್ಲಿ 28 ಮಂದಿ ಸಾವಿನ ಮನೆಯ ಕದ ತಟ್ಟಿದ್ದಾರೆ

ಎಂ.ಮಹೇಶ
Published 14 ಅಕ್ಟೋಬರ್ 2019, 8:57 IST
Last Updated 14 ಅಕ್ಟೋಬರ್ 2019, 8:57 IST
ಪ್ರವಾಹ ಪೀಡಿತ ಪ್ರದೇಶ – ಸಾಂದರ್ಭಿಕ ಚಿತ್ರ
ಪ್ರವಾಹ ಪೀಡಿತ ಪ್ರದೇಶ – ಸಾಂದರ್ಭಿಕ ಚಿತ್ರ   

ಬೆಳಗಾವಿ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಅಂದರೆ ಆರೇ ತಿಂಗಳಲ್ಲಿ 28 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.

ನೆರೆ ಮತ್ತು ಧಾರಾಕಾರ ಮಳೆಯಾದ ನಂತರ (ಆಗಸ್ಟ್‌ನಿಂದ ಅಕ್ಟೋಬರ್‌ ಮೊದಲ ವಾರದವರೆಗೆ) 6 ರೈತರು ನೇಣು ಹಾಕಿಕೊಂಡು ಅಥವಾ ವಿಷ ಸೇವಿಸಿ ಸಾವಿನ ಮನೆಯ ಕದ ತಟ್ಟಿದ್ದಾರೆ. ಇದರಿಂದಾಗಿ ಅವರ ಕುಟುಂಬಗಳು ಅತಂತ್ರವಾಗಿವೆ. ಬೆಳೆ ಹಾನಿ, ಸಾಲ ಪಾವತಿಗೆ ನೋಟಿಸ್‌ ಜಾರಿ ಮೊದಲಾದ ಒತ್ತಡ, ಆತಂಕ ಸೇರಿದಂತೆ ವಿವಿಧ ಕಾರಣಗಳಿಂದ ರೈತರಿಗೆ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಜಿಲ್ಲೆಯು ಸತತ ನಾಲ್ಕು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿದೆ. ಮುಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಮಳೆಯಾಗಿರಲಿಲ್ಲ. ಆದರೆ, ಜುಲೈ ಅಂತ್ಯ, ಆಗಸ್ಟ್‌ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ರೈತರು, ಪ್ರವಾಹದಿಂದಾಗಿ ಬೆಳೆಗಳೊಂದಿಗೆ ತಮ್ಮ ಮನೆಗಳು ಮೊದಲಾದ ಆಸ್ತಿ–ಪಾಸ್ತಿ ಕಳೆದುಕೊಂಡಿದ್ದಾರೆ. ಬರಗಾಲಪೀಡಿತವಾಗಿದ್ದ ತಾಲ್ಲೂಕುಗಳು ಪ್ರವಾಹಪೀಡಿತವಾಗಿವೆ. ಬೆಳೆದ ಬೆಳೆ ಕೈಗೆ ಬಾರದೇ ಕಂಗಾಲಾಗಿದ್ದಾರೆ. ಜಾಗೃತಿ ನಡುವೆಯೂ ಆತ್ಮಹತ್ಯೆ ಪ್ರಕರಣಗಳು ನಿಲ್ಲದಿರುವುದು ಕಳವಳಕ್ಕೆ ಕಾರಣವಾಗಿದೆ.

ADVERTISEMENT

21 ಕುಟುಂಬಗಳಿಗೆ ಪರಿಹಾರ

‘ಏಪ್ರಿಲ್‌ನಿಂದ ಇಲ್ಲಿವರೆಗೆ 28 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ. ಪ್ರಕರಣಗಳನ್ನು ಪರಿಶೀಲಿಸಲಾಗಿದ್ದು, 21 ಮಂದಿಯ ಕುಟುಂಬಗಳಿಗೆ ಸರ್ಕಾರದಿಂದ ದೊರೆಯುವ ₹ 5 ಲಕ್ಷ ಆರ್ಥಿಕ ನೆರವು ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. 4 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳನ್ನು ತಿಳಿಸಲಾಗುತ್ತಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಬರಗಾಲದಿಂದ ನೊಂದಿದ್ದ ರೈತರಿಗೆ ಪ್ರವಾಹ ಬರೆ ಎಳೆದಿದೆ. ಅವರ ಬದುಕೇ ಕೊಚ್ಚಿ ಹೋಗಿದೆ. ಹೀಗಾಗಿ, ಮುಂದೇನು ಎನ್ನುವ ಚಿಂತೆ ಮತ್ತು ಆತಂಕದಲ್ಲಿ ರೈತರು ಆತ್ಮಹತ್ಯೆಗೆ ಮುಂದಾಗುತ್ತಿರುವುದು ಕಂಡುಬರುತ್ತಿದೆ. ಆದರೆ, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ರಾಜ್ಯ ರೈತ ಸಂಘದ ಸಂಚಾಲಕ ಚೂನಪ್ಪ ಪೂಜಾರಿ ಆರೋಪಿಸಿದರು.

ಸಾಲ ಮನ್ನಾ ಮಾಡಬೇಕು

‘ಈಗ ಬೆಳೆ ಹಾನಿ ಸಮೀಕ್ಷೆಯನ್ನು ಹಳೆಯ ಮಾರ್ಗಸೂಚಿಗಳ ಪ್ರಕಾರ ನಡೆಸುತ್ತಿದ್ದಾರೆ. ಅದರಂತೆ ಪರಿಗಣಿಸಿದರೆ, ಉತ್ಪಾದನಾ ವೆಚ್ಚವೂ ಸಿಗುವುದಿಲ್ಲ. ಎಷ್ಟೇ ಬೆಳೆ ಹಾನಿಯಾಗಿದ್ದರೂ ಅಷ್ಟಕ್ಕೂ ಪರಿಹಾರ ನೀಡಬೇಕು. ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಸಂಪೂರ್ಣ ಸಾಲ ಮನ್ನಾ ಮಾಡಬೇಕು’ ಎಂದು ಒತ್ತಾಯಿಸುತ್ತಾರೆ ಅವರು.

ಸಿದಗೌಡ ಮೋದಗಿ

‘ಸರ್ಕಾರ, ಜಿಲ್ಲಾಧಿಕಾರಿ ಸೂಚನೆ ನಡುವೆಯೂ ಸಾಲ ವಸೂಲಾತಿ ಕಿರಿಕಿರಿಗಳು, ನೋಟಿಸ್‌ ಕೊಟ್ಟು ಬೆದರಿಸುವುದು ನಿಂತಿಲ್ಲ. ರೈತರಿಗೆ ಹೊಸ ಸಾಲ ನೀಡಲು ಯಾರೂ ಮುಂದಾಗುತ್ತಿಲ್ಲ. ಪ್ರವಾಹದಿಂದಾಗಿ ಜಮೀನುಗಳು ಸತ್ವ ಕಳೆದುಕೊಂಡಿವೆ. ಅನ್ನದಾತರು ಸಹಜ ಸ್ಥಿತಿಗೆ ಬರಲು ಹಲವು ವರ್ಷಗಳೇ ಬೇಕಾಗುತ್ತವೆ. ಅಲ್ಲಿವರೆಗೆ ಸರ್ಕಾರ ಅವರಿಗೆ ನೆರವಾಗಬೇಕು. ಸಂತ್ರಸ್ತ ಕುಟುಂಬಗಳಿಗೆ ತಲಾ ಒಂದು ಎಮ್ಮೆ ಅಥವಾ ಆಕಳು ಕೊಡಿಸಬೇಕು. ಆರ್ಥಿಕವಾಗಿ ಸುಧಾರಿಸಿಕೊಳ್ಳಲು ನೆರವಾಗಬೇಕು’ ಎಂದು ಭಾರತೀಯ ಕೃಷಿ ಸಮಾಜ (ಸಂಯುಕ್ತ) ಸಂಘಟನೆ ಅಧ್ಯಕ್ಷ ಸಿದಗೌಡ ಮೋದಗಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.