ADVERTISEMENT

ಕೆ.ಆರ್‌.ಪೇಟೆ ಕುಂಭಮೇಳಕ್ಕೆ 6 ಲಕ್ಷ ಮಂದಿ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 18:07 IST
Last Updated 11 ಅಕ್ಟೋಬರ್ 2022, 18:07 IST
ಗೋಪಾಲಯ್ಯ
ಗೋಪಾಲಯ್ಯ   

ಬೆಂಗಳೂರು: ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ– ಸಂಗಾಪುರ– ಪುರ ಗ್ರಾಮಗಳ ಬಳಿ ಕಾವೇರಿ, ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳ ಸಂಗಮ ಸ್ಥಾನದಲ್ಲಿ ಇದೇ 13ರಿಂದ 16ರವರೆಗೆ ನಡೆಯುವ ಕುಂಭಮೇಳದಲ್ಲಿ ಆರು ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

ಕುಂಭಮೇಳದ ಸಿದ್ಧತೆ ಕುರಿತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಅವರು ಸ್ಥಳೀಯ ಶಾಸಕರೂ ಆದ ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಅವರೊಂದಿಗೆ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಲೆ ಮಹದೇಶ್ವರ ಬೆಟ್ಟದಿಂದ ಹೊರಟಿರುವ ಮೂರು ಜ್ಯೋತಿ ರಥಗಳು ಗುರುವಾರ ಸಂಗಮ ಸ್ಥಳ ತಲುಪಲಿವೆ. ಆ ದಿನ ಜಿಲ್ಲಾ ಉತ್ಸವದ ಉದ್ಘಾಟನೆಯೊಂದಿಗೆ ಕುಂಭಮೇಳ ಆರಂಭವಾಗಲಿದೆ. ನೂತನವಾಗಿ ನಿರ್ಮಿಸಿರುವ ಮಾದೇಶ್ವರ ದೇವಸ್ಥಾನವನ್ನೂ ಅದೇ ದಿನ ಉದ್ಘಾಟಿಸಲಾಗುವುದು. ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಿ.ವೀರೇಂದ್ರ ಹೆಗ್ಗಡೆ ಅವರು ಶುಕ್ರವಾರ ಕುಂಭಮೇಳ ಉದ್ಘಾಟಿಸುವರು. ಶನಿವಾರ ಧಾರ್ಮಿಕ ಸಭೆ ನಡೆಯಲಿದೆ. ಭಾನುವಾರ ಸಮಾರೋಪ ಸಮಾರಂಭದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ADVERTISEMENT

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಕುಂಭಮೇಳ ಆಯೋಜಿಸಲಾಗಿದೆ. ರಾಜ್ಯ ಸರ್ಕಾರ ₹ 2 ಕೋಟಿ ಒದಗಿಸಿದ್ದು, ಉಳಿದ ವೆಚ್ಚವನ್ನು ದಾನಿಗಳ ನೆರವಿನಿಂದಲೇ ಭರಿಸಲಾಗುವುದು ಎಂದು ತಿಳಿಸಿದರು.

ಸ್ವಾಮೀಜಿಗಳು, ಸಾಧು, ಸಂತರಿಗೆ ಪ್ರತ್ಯೇಕ ಸ್ನಾನಘಟ್ಟ ನಿರ್ಮಿಸಲಾಗಿದೆ. 200ಕ್ಕೂ ಹೆಚ್ಚು ಬಯೊ ಶೌಚಾಲಯ ಒದಗಿಸಲಾಗಿದೆ. 200 ಮಂದಿ ಸಾಧುಗಳ ವಾಸ್ತವ್ಯಕ್ಕೆ ಟೆಂಟ್‌ ವ್ಯವಸ್ಥೆ ಆಗಿದೆ. ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಿದ್ದು, ನುರಿತ ಈಜುಗಾರರನ್ನೂ ನಿಯೋಜಿಸಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.