ADVERTISEMENT

ಬಸನಗೌಡ ಪಾಟೀಲ ಯತ್ನಾಳ್ ಉಚ್ಛಾಟನೆಗೆ ಬಿಜೆಪಿ ಶಾಸಕರ ಆಗ್ರಹ

ಏಕವಚನದಲ್ಲಿ ಬೈದಾಡಿದ ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 14:15 IST
Last Updated 16 ಮಾರ್ಚ್ 2021, 14:15 IST
ಬಸನಗೌಡ ಪಾಟೀಲ ಯತ್ನಾಳ್
ಬಸನಗೌಡ ಪಾಟೀಲ ಯತ್ನಾಳ್   

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಮಾತನಾಡುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಬಿಜೆಪಿಯ ಆರು ಶಾಸಕರು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಶಾಸಕರು, ಯತ್ನಾಳ್ ವಿರುದ್ಧ ಕ್ರಮ ಜರುಗಿಸದೇ ಇದ್ದರೆ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದೂ ಎಚ್ಚರಿಸಿದ್ದಾರೆ.

ಶಾಸಕರಾದ ಮಾಡಾಳ್‌ ವಿರೂಪಾಕ್ಷಪ್ಪ, ಜ್ಯೋತಿಗಣೇಶ್‌, ಶಿವರಾಜ ಪಾಟೀಲ, ಅಶೋಕ್‌ ಕುಮಾರ್ ಪೂಜಾರ್‌, ಪ್ರೊ. ಲಿಂಗಣ್ಣ ಈ ವೇಳೆ ಜತೆಗಿದ್ದರು.

ADVERTISEMENT

‘ಯತ್ನಾಳ್‌ ನಿನಗೆ ತಾಕತ್ತಿದ್ದರೆ, ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದ್ದರೆ ಮೊದಲು ರಾಜೀನಾಮೆ ಕೊಡು. ಮತ್ತೆ ವಿಜಯಪುರದಲ್ಲಿ ಸ್ಪರ್ಧಿಸಿ ಗೆದ್ದು ಬಂದು ಮುಖ್ಯಮಂತ್ರಿ ಆಗು. ಆಗ ನಿನ್ನ ಮಾತನ್ನು ಒಪ್ಪಿಕೊಳ್ಳುತ್ತೇನೆ’ ಎಂದು ರೇಣುಕಾಚಾರ್ಯ ಹೇಳಿದರು.

‘ಯಡಿಯೂರಪ್ಪ, ವಿಜಯೇಂದ್ರ ಮತ್ತು ಅವರ ಕುಟುಂಬದವರು ಭ್ರಷ್ಟಾಚಾರ ಮಾಡಿದ್ದರೆ ಅದರ ದಾಖಲೆ ಬಿಡುಗಡೆ ಮಾಡಲಿ. ಹಾದಿಬೀದಿಯಲ್ಲಿ ನಿಂತು ಅವರ ಬಗ್ಗೆ ಮಾತನಾಡಿದರೆ ಸಹಿಸಿಕೊಂಡು ಕೂರುವುದಿಲ್ಲ. ಯಡಿಯೂರಪ್ಪ ಅವರನ್ನು ಟೀಕಿಸಿದರೆ ಬಿಜೆಪಿ ಮತ್ತು ಮೋದಿ ಅವರನ್ನು ಟೀಕಿಸಿದಂತೆ’ ಎಂದರು.

‘ಯಡಿಯೂರಪ್ಪ ಅವರು ಕುಟುಂಬವನ್ನು ದೂರ ಇಡಬೇಕು ಎಂದು ಹೇಳುತ್ತೀಯಲ್ಲ. ನೀನು ಮೊದಲು ನಿನ್ನ ಹೆಂಡತಿ ಮತ್ತು ಮಕ್ಕಳನ್ನು ಮನೆಯಿಂದ ಹೊರಗೆ ಕಳಿಸು. ಆಮೇಲೆ ಯಡಿಯೂರಪ್ಪ ಕುಟುಂಬದ ಬಗ್ಗೆ ಮಾತನಾಡು. ನೀನು ಬಿಜೆಪಿ ಬಿಟ್ಟು ಹೋದಾಗ ಶೆಟ್ಟರು, ಭಟ್ಟರ ಪಕ್ಷ ಎಂದು ಬಿಜೆಪಿಯನ್ನು ಟೀಕಿಸಿರಲಿಲ್ಲವೇ? ಆಗ ಪ್ರಲ್ಹಾದ ಜೋಶಿ, ಅನಂತಕುಮಾರ್, ಜಗದೀಶ ಶೆಟ್ಟರ್ ಅವರನ್ನು ಒಪ್ಪಿಸಿ ನಿನ್ನನ್ನು ಕರೆತಂದಿದ್ದು ಯಡಿಯೂರಪ್ಪ ಅವರಲ್ಲವೇ? ಅವೆಲ್ಲ ಮರೆತುಹೋಯಿತಾ’ ಎಂದು ಕಿಡಿಕಾರಿದರು.

‘ಈ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲು ಯಡಿಯೂರಪ್ಪ ಮತ್ತು ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೂಡಲೇ ಶಾಸಕಾಂಗ ಪಕ್ಷ ಸಭೆ ಕರೆಯಬೇಕು’ ಎಂದು ಅವರು ಹೇಳಿದರು.

ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ‘ಯತ್ನಾಳ್ ವಿರುದ್ಧ ಕ್ರಮ ಜರುಗಿಸದೇ ಇದ್ದರೆ ಅಧಿವೇಶನ ಮುಗಿದ ಬಳಿಕ ವರಿಷ್ಠರನ್ನು ಭೇಟಿ ಮಾಡಿ ಮನವಿ ಮಾಡುತ್ತೇವೆ. ಅದು ಫಲ ಕೊಡದೇ ಇದ್ದರೆ ಪಕ್ಷದ ರಾಜ್ಯ ಕಚೇರಿ ಎದುರು ಧರಣಿ ಮಾಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.