ADVERTISEMENT

ಸಮೀಕ್ಷೆ: ಬಾಗೇಪಲ್ಲಿ ತಾಲ್ಲೂಕಿನಲ್ಲಿ 600 ಬಾಲ್ಯ ವಿವಾಹ!

ಸುಶೀಲಾ ಡೋಣೂರ
Published 30 ಜನವರಿ 2020, 3:06 IST
Last Updated 30 ಜನವರಿ 2020, 3:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನಲ್ಲೇ 600ಕ್ಕಿಂತ ಹೆಚ್ಚು ಬಾಲ್ಯ ವಿವಾಹಗಳು ವರದಿಯಾಗಿವೆ. ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ಮತ್ತು ಅರ್ಪಣಂ ಸ್ವಯಂ ಸೇವಾ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ತಿಳಿದು ಬಂದಿದೆ.

ಆದರೆ, ಸರ್ಕಾರದ ಲೆಕ್ಕದಲ್ಲಿ ಈ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಬಾಗೇಪಲ್ಲಿ ತಾಲ್ಲೂಕಿನಲ್ಲಿ 2019ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ 38 ದೂರುಗಳು ದಾಖಲಾಗಿವೆ ಎನ್ನುತ್ತದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕಿ–ಅಂಶಗಳು.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಬಾಲ್ಯ ವಿವಾಹಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿದೆ. 36 ಬಾಲ್ಯ ವಿವಾಹಗಳನ್ನು ಯಶಸ್ವಿಯಾಗಿ ತಡೆಯಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ ಅವರು ‘ಪ್ರಜಾವಾಣಿ’ಗೆ ವಿವರಿಸಿದರು.

ADVERTISEMENT

‘ಚಿಕ್ಕಬಳ್ಳಾಪುರದಲ್ಲಿ ಹತ್ತು ಮದುವೆಗಳು ನಡೆದರೆ, ಎಂಟು ಮದುವೆ ಕಿಶೋರಿಯರದ್ದೇ ಆಗಿರುತ್ತವೆ. ಕೆಲವನ್ನು ತಡೆಯುತ್ತೇವೆ. ಕೆಲವು ನಮ್ಮ ಗಮನಕ್ಕೆ ಬರುವುದೇ ತಡವಾಗಿ. ಅಂತಹ ಸಂದರ್ಭದಲ್ಲಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ’ ಎಂದು ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ವಾಸುದೇವ ಶರ್ಮ ಹೇಳಿದರು.

‘ಶಾಲೆ ಬಿಟ್ಟವರನ್ನು ಮರಳಿ ಶಾಲೆಗೆ ಸೇರಿಸುವ, ಶಾಲೆಗೆ ಹೋಗಲಾರದವರನ್ನು ನೇರವಾಗಿ ಪರೀಕ್ಷೆಗೆ ಕೂರಿಸುವ, ವೃತ್ತಿತರಬೇತಿಗಳನ್ನು ನೀಡುವ ಯೋಜನೆಗಳಿವೆ’ ಎಂದು ತಿಳಿಸಿದರು.

ಊರಲ್ಲಿ ಯಾರ ಮನೆಯ ಮುಂದೆ ಮದುವೆ ಚಪ್ಪರ ಬಿದ್ದರೂಬಾಗೇಪಲ್ಲಿ ತಾಲ್ಲೂಕಿನ ಗೆರಿಗಿರೆಡ್ಡಿಪಾಳ್ಯದ 19 ವರ್ಷದ ಪದ್ಮಜಾ ಮನದಲ್ಲಿ ಆತಂಕ ಮೂಡುತ್ತದೆ. ಹಸೆಮಣೆ ಏರಲಿರುವ ಹುಡುಗಿ ಯಾರೆನ್ನುವುದು ಅವರ ಕೌತುಕ. ‘ವಧು ಬಾಲಕಿಯಾಗಿದ್ದರೆ ಕೂಡಲೇ ಆ ಮನೆಯ ಹಿರಿಯರನ್ನು ಭೇಟಿಯಾಗಿ ಮದುವೆಯನ್ನು ನಿಲ್ಲಿಸಲು ಅವರು ಮನವಿ ಮಾಡುವೆ. ಕೇಳದಿದ್ದರೆ ಪೊಲೀಸರಿಗೆ ದೂರು ಕೊಡುವ ಎಚ್ಚರಿಕೆ ನೀಡುವೆ’ ಎಂದು ಹೇಳಿದರು.

‘15 ವರ್ಷಕ್ಕೇ ಓದು ನಿಲ್ಲಿಸಿ ಮದುವೆ ಮಾಡಿದರು. ಅಪ್ಪನ ಒತ್ತಾಯಕ್ಕೆ ಮಣಿದು ಹಸಿಮಣೆ ಏರಿದೆ. ಬಣ್ಣ–ಬಣ್ಣದ ಸೀರೆ, ಚೆಂದದ ಒಡವೆ ನೋಡಿ ನನಗೂ ಬಾಯಿ ಕಟ್ಟಿ ಬಿಟ್ತು. ಓದಬೇಕು, ನೌಕರಿ ಮಾಡಬೇಕು ಎನ್ನುವ ಆಸೆಯನ್ನು ಬಿಸುಟಿ ಗಂಡನ ಮನೆಗೆ ಹೋದೆ’ ಎಂದು ನೋವು ತೋಡಿಕೊಂಡರು.

***

ಮದುವೆಯಾದಾಗ ನನಗೆ 13–14 ವರ್ಷವಷ್ಟೆ. ಒಂದೇ ವರ್ಷದಲ್ಲಿ ಗಂಡ ಆತ್ಮಹತ್ಯೆಗೆ ಶರಣಾದ. ನನಗೀಗ 19 ವರ್ಷ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇನೆ
- ಶಶಿಕಲಾ

***

ಬಾಲ್ಯವಿವಾಹಗಳು ಹೆಚ್ಚು ನಡೆಯುತ್ತಿವೆ ಎನ್ನುವುದು ನಮ್ಮ ಗಮನಕ್ಕೂ ಬಂದಿದೆ. ಮಾಹಿತಿ ಸಂಗ್ರಹಕ್ಕೆ ಪ್ರತ್ಯೇಕ ವಾಟ್ಸ್‌ಆ್ಯಪ್‌ ಗ್ರೂಪ್‌ ಸಹ ಮಾಡಿದ್ದೇವೆ.

- ಆರ್‌. ಲತಾ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.