ADVERTISEMENT

75 ಹೊಸ ಎನ್‌ಸಿಸಿ ಘಟಕ: ಸಿಎಂ ಬೊಮ್ಮಾಯಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 19:30 IST
Last Updated 23 ಜನವರಿ 2022, 19:30 IST
ಜಕ್ಕೂರಿನ ಸರ್ಕಾರಿ ವೈಮಾನಿಕ ತರಬೇತಿ ಸಂಸ್ಥೆಯಲ್ಲಿ ಭಾನುವಾರ ನಡೆದ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎನ್‌ಸಿಸಿ ವಿದ್ಯಾರ್ಥಿನಿಯೊಬ್ಬರಿಗೆ ಬೆನ್ನು ತಟ್ಟಿ ಅಭಿನಂದಿಸಿದರು. ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ಎನ್‌ಸಿಸಿ ಕಮಾಂಡರ್‌ ಕನ್ವರ್‌ ಮತ್ತು ಯವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಇದ್ದರು– ಪ್ರಜಾವಾಣಿ ಚಿತ್ರ
ಜಕ್ಕೂರಿನ ಸರ್ಕಾರಿ ವೈಮಾನಿಕ ತರಬೇತಿ ಸಂಸ್ಥೆಯಲ್ಲಿ ಭಾನುವಾರ ನಡೆದ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎನ್‌ಸಿಸಿ ವಿದ್ಯಾರ್ಥಿನಿಯೊಬ್ಬರಿಗೆ ಬೆನ್ನು ತಟ್ಟಿ ಅಭಿನಂದಿಸಿದರು. ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ಎನ್‌ಸಿಸಿ ಕಮಾಂಡರ್‌ ಕನ್ವರ್‌ ಮತ್ತು ಯವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಇದ್ದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ರಾಜ್ಯದ 75 ಶಾಲಾ, ಕಾಲೇಜುಗಳಲ್ಲಿ ಹೊಸದಾಗಿ ಎನ್‌ಸಿಸಿ ಘಟಕ ಪ್ರಾರಂಭಿಸಿ, 7,500 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಜಕ್ಕೂರಿನಲ್ಲಿ ಭಾನುವಾರ ನಡೆದ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ 125ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ನವೀಕೃತ ಸರ್ಕಾರಿ ವೈಮಾನಿಕ ಶಾಲೆಯನ್ನು ಉದ್ಘಾಟಿಸಿ ಮತ್ತು 75 ಎನ್‌ಸಿಸಿ ಘಟಕಗಳನ್ನು ಘೋಷಿಸಿ ಮಾತನಾಡಿದರು. 75 ಪೈಲಟ್‌ಗಳ ತರಬೇತಿಗೆ ಚಾಲನೆ ನೀಡಿದ ಮುಖ್ಯಮಂತ್ರಿ, ಪಿ2006ಟಿ ವಿಮಾನವನ್ನೂ ಸೇವೆಗೆ ಅರ್ಪಿಸಿದರು.

ಎನ್‌ಸಿಸಿ ಸೇರುವ ಆಸಕ್ತಿಯನ್ನು ಬೆಳೆಸಲು ಹೊಸ ಘಟಕಗಳನ್ನು ಆರಂಭಿಸುವ ನಿರ್ಧಾರ ಮಾಡಲಾಗಿದೆ. ಇದಕ್ಕಾಗಿ ಪ್ರತಿ ವಿದ್ಯಾರ್ಥಿಗೆ ತಲಾ ₹ 12,000 ವೆಚ್ಚ ಮಾಡಲು ತೀರ್ಮಾನಿಸಲಾಗಿದೆ. ಈಗ ರಾಜ್ಯದಲ್ಲಿ 44,000 ಎನ್‌ಸಿಸಿ ಕೆಡೆಟ್‌ಗಳಿದ್ದು, ಹೊಸ ಘಟಕಗಳ ಆರಂಭದ ಬಳಿಕ ಈ ಸಂಖ್ಯೆ 50,000 ದಾಟಲಿದೆ ಎಂದರು.

ADVERTISEMENT

ರಾಜ್ಯದಲ್ಲಿ ಎನ್‌ಸಿಸಿ ಚಟುವಟಿಕೆಯನ್ನು ಪುನರ್‌ರಚಿಸುವ ಪ್ರಸ್ತಾವವಿದೆ. ಎಲ್ಲ ಘಟಕಗಳನ್ನೂ ಕಾಲೇಜುಗಳಿಗೆ ಸ್ಥಳಾಂತರಿಸಲು ಯೋಚಿಸಲಾಗಿದೆ. ಇದಕ್ಕೆ ರಕ್ಷಣಾ ಇಲಾಖೆಯ ಅನುಮತಿ ಬೇಕಿದೆ. ಒಪ್ಪಿಗೆ ದೊರೆತ ಬಳಿಕ ಈ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಮಹಿಳೆಯರಿಗೆ ಸ್ವಯಂರಕ್ಷಣೆ ತರಬೇತಿ ನೀಡಲು ಪೊಲೀಸ್‌ ಇಲಾಖೆಯ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಶಾಲಾ, ಕಾಲೇಜುಗಳಲ್ಲೂ ಈ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುವುದು. ಸುಭಾಷ್‌ಚಂದ್ರ ಬೋಸ್‌ ಅವರ ಕನಸುಗಳನ್ನು ಸಾಕಾರಗೊಳಿಸುವ ದಿಸೆಯಲ್ಲಿ ಈ ಎಲ್ಲ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ ಎಂದರು.

ವೈಮಾನಿಕ ತರಬೇತಿ ಸಂಸ್ಥೆಯಲ್ಲಿ ಪೂರ್ಣ ಪ್ರಮಾಣದ ರನ್‌ವೇ ನಿರ್ಮಾಣದ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಪರಿಶೀಲಿಸಿ, ಅಗತ್ಯ ಸ್ಥಳಾವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಕನಸು ನನಸಾಗಿದೆ: ಕ್ರೀಡೆ ಮತ್ತು ಯುವ ಸಬಲೀಕರಣ ಖಾತೆ ಸಚಿವ ಕೆ.ಸಿ. ನಾರಾಯಣಗೌಡ ಮಾತನಾಡಿ, ‘ಸರ್ಕಾರಿ ವೈಮಾನಿಕ ತರಬೇತಿ ಸಂಸ್ಥೆಯನ್ನು ತ್ವರಿತವಾಗಿ ಪುನರಾರಂಭ ಮಾಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೆ. ಆರು ತಿಂಗಳಲ್ಲೇ ಈ ಕನಸು ಸಾಕಾರಗೊಂಡಿದೆ. ಪ್ರತಿ ವರ್ಷ 100 ಪೈಲಟ್‌ಗಳಿಗೆ ತರಬೇತಿ ನೀಡುವ ಗುರಿ ಇದೆ’ ಎಂದು ಹೇಳಿದರು.

ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌, ರಾಜ್ಯದ ಸಚಿವರಾದ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಬಿ.ಸಿ. ನಾಗೇಶ್‌, ಶಾಸಕ ಕೃಷ್ಣ ಬೈರೇಗೌಡ, ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.