ADVERTISEMENT

ಎಂಟು ದಿನಗಳ ಅಧಿವೇಶನ: 31 ಮಸೂದೆಗಳು

ಕೋವಿಡ್‌ ಪರೀಕ್ಷೆ ಸರ್ಟಿಫಿಕೇಟ್‌ ತೋರಿಸಿದರೆ ಕಲಾಪಕ್ಕೆ ಪ್ರವೇಶ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 16:17 IST
Last Updated 8 ಸೆಪ್ಟೆಂಬರ್ 2020, 16:17 IST
ವಿಶ್ವೇಶ್ವರ ಹೆಗಡೆ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ   

ಬೆಂಗಳೂರು: ಕೋವಿಡ್‌–19 ಲಾಕ್‌ಡೌನ್‌ ಮತ್ತು ಆ ಬಳಿಕ ಹೊರಡಿಸಿದ ಪ್ರಮುಖ 19 ಸುಗ್ರೀವಾಜ್ಞೆಗಳು ಸೇರಿ ಒಟ್ಟು 31 ಮಸೂದೆಗಳನ್ನು ಇದೇ 21 ರಿಂದ ಆರಂಭಗೊಳ್ಳಲಿರುವ ವಿಧಾನಸಭಾ ಅಧಿವೇಶನದಲ್ಲಿಸರ್ಕಾರ ಮಂಡಿಸಲಿದೆ.

ವೈಯಕ್ತಿಕ ಅಂತರ, ಸೋಂಕು ನಿರೋಧಕ ವ್ಯವಸ್ಥೆಯ ಕಠಿಣ ಕ್ರಮಗಳ ಮಧ್ಯೆ ವಿಧಾನಸಭೆ ಅಧಿವೇಶನ ನಡೆಸಲು ಸಕಲ ಸಿದ್ಧತೆ ನಡೆಸಲಾಗಿದೆ.ಎಂಟು ದಿನಗಳ ಕಲಾಪದಲ್ಲಿ ಎಲ್ಲ ಮಸೂದೆಗಳಿಗೂ ಒಪ್ಪಿಗೆ ಪಡೆಯಬೇಕು. ಅಲ್ಲದೆ, ಅಧಿವೇಶನದಲ್ಲಿ ಪ್ರಶ್ನೋತ್ತರಕ್ಕೂ ಅವಕಾಶ ನೀಡಲಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊರೊನಾ ಸೋಂಕು ಇರುವುದರಿಂದ ಸಾಕಷ್ಟು ಮುಂಜಾಗ್ರತೆ ವಹಿಸಲಾಗುವುದು. ಇದರ ಅಂಗವಾಗಿ ಎಲ್ಲ ಶಾಸಕರು, ಸಚಿವರು, ವಿಧಾನಸಭೆ ಕಲಾಪಕ್ಕೆ ಹಾಜರಾಗಬೇಕಾದ ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಅಧಿವೇಶನ ಆರಂಭವಾಗುವುದಕ್ಕೆ ಮೂರು ದಿನಗಳ ಮೊದಲು (ಸೆ.18 ರಂದು) ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು, ಅದರ ಸರ್ಟಿಫಿಕೇಟ್ ಕಡ್ಡಾಯವಾಗಿ ತರಬೇಕು. ಕೋವಿಡ್‌ ಸೋಂಕು ಇಲ್ಲದಿದ್ದರೆ ಮಾತ್ರ ಸದನಕ್ಕೆ ಪ್ರವೇಶ ನೀಡಲಾಗುವುದು ಎಂದರು.

ADVERTISEMENT

70 ವರ್ಷ ಮೇಲ್ಪಟ್ಟ ಸದಸ್ಯರೂ ಕಲಾಪಕ್ಕೆ ಹಾಜರಾಗಬಹುದು, ಕಟ್ಟುನಿಟ್ಟಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕಲಾಪಕ್ಕೆ ಹಾಜರಾಗುವ ಎಲ್ಲರಿಗೂ ಮಾಸ್ಕ್‌ ಮತ್ತು ಫೇಸ್‌ ಶೀಲ್ಡ್‌ ನೀಡಲಾಗುವುದು ಎಂದು ಕಾಗೇರಿ ತಿಳಿಸಿದರು.

ಸಾರ್ವಜನಿಕರಿಗೆ ಈ ಬಾರಿ ಕಲಾಪ ವೀಕ್ಷಣೆಗೆ ಪ್ರವೇಶ ಇರುವುದಿಲ್ಲ. ಪ್ರೇಕ್ಷಕರ ಗ್ಯಾಲರಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವ್ಯವಸ್ಥೆ ಮಾಡಲಾಗುವುದು. ಮುಂದಿನ ಅಧಿವೇಶನದಲ್ಲಿ ಈ ಹಿಂದಿನಂತೆ ಮಾಧ್ಯಮಗಳ ಗ್ಯಾಲರಿಯಲ್ಲಿ ಪತ್ರಕರ್ತರಿಗೆ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು.

ಎಲ್ಲ ಮಸೂದೆಗಳಿಗೆ ಅಂಗೀಕಾರ ಪಡೆಯಬೇಕಾಗಿದೆ. ಈ ಎಲ್ಲ ವಿಷಯಗಳ ಬಗ್ಗೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಕಾಗೇರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.