ADVERTISEMENT

ರಾಜ್ಯಕ್ಕೆ 12 ದಿನಗಳಲ್ಲಿ 8 ಲಕ್ಷ ಡೋಸ್‌ ಲಸಿಕೆ ಪೂರೈಕೆ: ಮುಖ್ಯ ಕಾರ್ಯದರ್ಶಿ

​ಪ್ರಜಾವಾಣಿ ವಾರ್ತೆ
Published 12 ಮೇ 2021, 5:23 IST
Last Updated 12 ಮೇ 2021, 5:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘45 ವರ್ಷ ದಾಟಿದವರಿಗೆ ಕೇಂದ್ರ ಸರ್ಕಾರವೇ ಉಚಿತವಾಗಿ ಲಸಿಕೆ ನೀಡುತ್ತಿದ್ದು, ಪ್ರತಿ 15 ದಿನಕ್ಕೆ 15 ಲಕ್ಷ ಡೋಸ್‌ ಲಸಿಕೆ ಕೊಡಬೇಕಿತ್ತು. ಆದರೆ, ರಾಜ್ಯಕ್ಕೆ 12 ದಿನಗಳಲ್ಲಿ 8 ಲಕ್ಷ ಮಾತ್ರ ಬಂದಿದೆ’ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ತಿಳಿಸಿದ್ದಾರೆ.

‘ಮೊದಲ ಡೋಸ್‌ ಪಡೆದವರಿಗೆ ಎರಡನೇ ಡೋಸ್‌ ಕೊಡುತ್ತೇವೆ. 45 ವರ್ಷ ದಾಟಿದವರಿಗೆ ಕೊಡಲು 15 ದಿನಗಳಲ್ಲಿ 80 ಸಾವಿರ ಡೋಸ್‌ ಮಾತ್ರ ಕೋವ್ಯಾಕ್ಸಿನ್‌ ಲಸಿಕೆ ಬಂದಿದೆ. ಮುಂದಿನ ಮೂರು ದಿನಗಳಲ್ಲಿ 7 ಲಕ್ಷ ಡೋಸ್‌ 3 ದಿನಗಳಲ್ಲಿ ಬರಬಹುದು’ ಎಂದೂ ಅವರು ಹೇಳಿದ್ದಾರೆ.

‘ಲಸಿಕೆ ಪೂರೈಕೆ ನಮ್ಮ ಕೈಯಲ್ಲಿಯೂ ಇಲ್ಲ. ಎರಡು ಲಸಿಕೆ ಉತ್ಪಾದಕ ಕಂಪನಿಗಳು (ಸೀರಂ ಮತ್ತು ಭಾರತ್‌ ಬಯೋಟೆಕ್‌) ಉತ್ಪಾದಿಸುವ ಲಸಿಕೆಯಲ್ಲಿ ಶೇ. 50 ಸರ್ಕಾರಕ್ಕೆ ಉಳಿದ ಶೇ. 50ರಷ್ಟು ಮಾರಾಟ ಮಾಡಲು ಅವಕಾಶ ಕೊಡಲಾಗಿದೆ. ಜುಲೈ ತಿಂಗಳಿನಿಂದ ಲಸಿಕೆ ಪೂರೈಕೆ ಪ್ರಮಾಣವನ್ನು ಜಾಸ್ತಿ ಮಾಡುವುದಾಗಿ ಈ ಕಂಪನಿಗಳು ಹೇಳಿವೆ. ಕರ್ನಾಟಕ ಒಂದೇ ಅಲ್ಲ, ಇಡೀ ದೇಶದಲ್ಲಿ ಲಸಿಕೆ ಕೊರತೆ ಇದೆ. ಕೇಂದ್ರ ಸರ್ಕಾರ ಸರಾಸರಿ ಆಧಾರದಲ್ಲಿ ಎಲ್ಲ ರಾಜ್ಯಗಳಿಗೂ ಲಸಿಕೆಯನ್ನು ಹಂಚುತ್ತಿದೆ’ಎಂದಿದ್ದಾರೆ.

‘18ರಿಂದ 45 ವಯೋಮಾನದವರಿಗೆ ರಾಜ್ಯವೇ ಲಸಿಕೆ ಖರೀದಿಸಿ ನೀಡುತ್ತಿದೆ. ಅದಕ್ಕಾಗಿ 3 ಕೋಟಿ ಡೋಸ್‌ಗೆ ಬೇಡಿಕೆ ಸಲ್ಲಿಸಿದ್ದೇವೆ. ಅದರಲ್ಲಿ ಮಂಗಳವಾರದ ವರೆಗೆ 7 ಲಕ್ಷ ಕೋವಿಶೀಲ್ಡ್‌ ಬಂದಿದೆ. ಅದನ್ನು 200 ಕಡೆ ಇಟ್ಟಿದ್ದೇವೆ. ಈ ವಯೋಮಾನದವರಿಗೆ ಕೊಡಲು ನಮಗೆ 6 ಕೋಟಿ ಡೋಸ್‌ ಬೇಕಾಗಿದೆ. ಒಂದೇ ಬಾರಿ ಲಸಿಕೆಯನ್ನು ತಂದು ಇಟ್ಟುಕೊಳ್ಳಲು ಆಗುವುದಿಲ್ಲ. ನಾವು 3 ಕೋಟಿ ಡೋಸ್‌ ಪೂರೈಕೆಯಾದರೆ ಅದನ್ನು ವಿತರಿಸಲು 4 ತಿಂಗಳು ಬೇಕಾಗಬಹುದು’ಎಂದೂ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.