ADVERTISEMENT

9 ಶಾಸಕರ ರಾಜೀನಾಮೆ ತಿರಸ್ಕೃತ | ಸರ್ಕಾರಕ್ಕೆ ತಾತ್ಕಾಲಿಕ ಜೀವದಾನ

ಶಾಸಕರ ಉಳಿಸಿಕೊಳ್ಳಲು ಮಿತ್ರಕೂಟಕ್ಕೆ ಅವಕಾಶ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 20:15 IST
Last Updated 9 ಜುಲೈ 2019, 20:15 IST
ಸರ್ಕಾರವನ್ನು ಬಿಜೆಪಿ ಅಸ್ಥಿರಗೊಳಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಮುಖಂಡರು ವಿಧಾನಸೌಧ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ
ಸರ್ಕಾರವನ್ನು ಬಿಜೆಪಿ ಅಸ್ಥಿರಗೊಳಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಮುಖಂಡರು ವಿಧಾನಸೌಧ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಒಂಬತ್ತು ಶಾಸಕರು ನೀಡಿದ್ದ ರಾಜೀನಾಮೆ ಪತ್ರಗಳನ್ನು ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್‌ ಕುಮಾರ್ ಅವರು ಮಂಗಳವಾರ ತಿರಸ್ಕರಿಸಿದ್ದು, ಪತನದ ಅಂಚಿಗೆ ತಲುಪಿದಂತಿದ್ದ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರಕ್ಕೆ ತಾತ್ಕಾಲಿಕವಾಗಿ ‘ಜೀವದಾನ’ ಸಿಕ್ಕಿದಂತಾಗಿದೆ.

ಮಂಗಳವಾರ ರಾಜೀನಾಮೆ ಕೊಟ್ಟ ಶಿವಾಜಿನಗರ ಶಾಸಕ ಆರ್. ರೋಷನ್‌ ಬೇಗ್‌ ಸೇರಿ ಈವರೆಗೆ ಒಟ್ಟು 14 ಶಾಸಕರು ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಸರ್ಕಾರ ಅಲ್ಪಮತಕ್ಕೆ ಕುಸಿದಂತಾಗಿತ್ತು. ಇನ್ನೇನು ಮೈತ್ರಿ ಸರ್ಕಾರ ಪತನವಾಗಲಿದ್ದು, ಹೊಸ ಸರ್ಕಾರ ರಚನೆಯ ಉಮೇದು ಬಿಜೆಪಿ ನಾಯಕರಲ್ಲಿ ಕಾಣಿಸಿಕೊಂಡಿತ್ತು.

ಶಾಸಕರು ನೀಡಿದ್ದ ರಾಜೀನಾಮೆ ಪತ್ರಗಳನ್ನು ಪರಿಶೀಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ರಮೇಶ್‌ಕುಮಾರ್, ‘ಐವರ ರಾಜೀನಾಮೆ ಕ್ರಮಬದ್ಧವಾಗಿದ್ದು, ಉಳಿದ 9 ಶಾಸಕರ ರಾಜೀನಾಮೆ ಕ್ರಮ ಬದ್ಧವಾಗಿಲ್ಲ. ಅವರು ಮತ್ತೊಮ್ಮೆ ಕ್ರಮಬದ್ಧವಾದ ರಾಜೀನಾಮೆ ಸಲ್ಲಿಸಬಹುದಾಗಿದೆ’ ಎಂದು ಹೇಳಿದರು.

ADVERTISEMENT

ಇದರಿಂದಾಗಿ ಅತೃಪ್ತ ಶಾಸಕರ ಗುಂಪು ಹಾಗೂ ಕಮಲ ಪಾಳಯಕ್ಕೆ ತುಸು ಹಿನ್ನಡೆಯಾದಂತಾಗಿದೆ. ಮುಂಬೈನಲ್ಲಿ ಬೀಡು ಬಿಟ್ಟಿರುವ ಅತೃಪ್ತ ಶಾಸಕರು ಬುಧವಾರ ಬೆಂಗಳೂರಿಗೆ ಬಂದು ಮತ್ತೊಮ್ಮೆ ಕ್ರಮಬದ್ಧವಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿರುವ ಅತೃಪ್ತ ಶಾಸಕರು, ‘ರಾಜೀನಾಮೆ ನಿರ್ಧಾರ ಅಚಲವಾಗಿದ್ದು, ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂದಕ್ಕೆ ಪಡೆಯುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಇವರ ಮನವೊಲಿಸಲು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಜೆಡಿಎಸ್‌ ಶಾಸಕ ಕೆ.ಎಂ. ಶಿವಲಿಂಗೇಗೌಡ ಬುಧವಾರ ಮುಂಬೈಗೆ ತೆರಳಲಿದ್ದಾರೆ.

ಈ ಮಧ್ಯೆ ಪರಿಸ್ಥಿತಿಯನ್ನು ನಿಭಾಯಿಸಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್‌ ಹಿರಿಯ ನಾಯಕ ಗುಲಾಂನಬಿ ಆಜಾದ್‌ ಬೆಂಗಳೂರಿಗೆ ಬಂದಿಳಿದಿದ್ದು, ಸರ್ಕಾರ ಉಳಿಸಿಕೊಳ್ಳುವ ಕಾರ್ಯಾಚರಣೆ ಆರಂಭಿಸಿದ್ದಾರೆ.

ಸರ್ಕಾರಕ್ಕೆ ಉಸಿರು

ಕ್ರಮಬದ್ಧ ವಾಗಿರುವ ಶಾಸಕರ ರಾಜೀನಾಮೆ ಕುರಿತು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಸಭಾಧ್ಯಕ್ಷರು ನಿರ್ಧರಿಸಿ ದ್ದಾರೆ.ಇದೇ 12 ರಂದು ಮೂವರು ಶಾಸಕರು ಹಾಗೂ 15ರಂದು ಇಬ್ಬರು ಶಾಸಕರ ವಿಚಾರಣೆ ನಡೆಯಲಿದೆ. ಅಲ್ಲಿಯವರೆಗೆ ಶಾಸಕರ ರಾಜೀನಾಮೆ ಅಂಗೀಕಾರ ಆಗುವುದಿಲ್ಲ. ರಾಜೀನಾಮೆ ಕೊಟ್ಟ ಶಾಸಕರನ್ನು ಓಲೈಸಿ, ಸರ್ಕಾರ ಉಳಿಸಿಕೊಳ್ಳುವ ಕಸರತ್ತು ನಡೆಸಲು ಮೈತ್ರಿ ಕೂಟದ ನಾಯಕರಿಗೆ ಅವಕಾಶ ಸಿಕ್ಕಂತಾಗಿದೆ.

‘ಈ ಮಧ್ಯೆ ಕಾಂಗ್ರೆಸ್‌ ನಾಯಕರು ಅತೃಪ್ತ ಶಾಸಕರ ಮನವೊಲಿಸಲು ಮುಂದಾಗಲಿದ್ದಾರೆ. ಸಚಿವ ಸ್ಥಾನವೂ ಸೇರಿ ಹಲವು ರೀತಿಯ ಆಮಿಷಗಳನ್ನು ಒಡ್ಡುವ ಸಾಧ್ಯತೆ ಇದೆ. ಅದರಲ್ಲಿ ಅವರು ಯಶಸ್ವಿಯಾದರೆ, ಸರ್ಕಾರ ಉಳಿಯುತ್ತದೆ. ಸುಮಾರು 10 ರಿಂದ 15 ದಿನಗಳ ಜೀವದಾನ ಸಿಕ್ಕಿದಂತಾಗಿದೆ. ಈ ಅವಧಿಯಲ್ಲಿ ಬಿರುಸಿನ ಕಾರ್ಯಾಚ ರಣೆಗೆ ಇಳಿಯಬಹುದು’ ಎಂದು ಹೇಳಲಾಗುತ್ತಿದೆ.

ಬೆಳಿಗ್ಗೆ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಟ್ಟು ಎಂಟು ಶಾಸಕರು ಗೈರಾಗಿದ್ದು ಪಕ್ಷದ ವರಿಷ್ಠರನ್ನು ಮತ್ತಷ್ಟು ಆತಂಕಕ್ಕೆ ದೂಡಿತ್ತು. ಅದರಲ್ಲಿ ಕೆಲವು ಶಾಸಕರು ಅನುಮತಿ ಕೇಳಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿಕೊಂಡಿವೆ. ಶಾಸಕಾಂಗ ಪಕ್ಷದ ಸಭೆಯ ಬಳಿಕ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್‌ ನಾಯಕರು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದರು.

ರಾಜೀನಾಮೆ ನೀಡಿರುವ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖಂಡರು ಸಭಾಧ್ಯಕ್ಷರಿಗೆ ದೂರನ್ನೂ ನೀಡಿದರು.

ಶಾಸಕಾಂಗ ಪಕ್ಷದ ಸಭೆ ಅಲ್ಲದೇ ಇನ್ನೂ ಹಲವು ವೇದಿಕೆಗಳ ಮೂಲಕ ವಾಪಸ್‌ ಬರುವಂತೆ ರಾಜೀನಾಮೆ ನೀಡಿರುವ ಶಾಸಕರಿಗೆ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ. ಆದರೆ, ಅದಕ್ಕೆ ಅತೃಪ್ತ ಶಾಸಕರು ಸೊಪ್ಪು ಹಾಕಿಲ್ಲ.

ಸಿದ್ದರಾಮಯ್ಯ ಅವರ ಆಪ್ತರೆಂದು ಗುರುತಿಸಿಕೊಂಡಿರುವ ಅತೃಪ್ತ ಶಾಸಕ ರಾದ ಭೈರತಿ ಬಸವರಾಜ್‌ ಮತ್ತು ಎಸ್‌.ಟಿ.ಸೋಮಶೇಖರ್‌ ಅವರು ತಮ್ಮ ಗುರುವಿನ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ‘ನಾವು ಯಾರ ಬೆನ್ನಿಗೂ ಚೂರಿ ಹಾಕಿಲ್ಲ. ಸಿದ್ದರಾಮಯ್ಯ ಅವರು ಕಾಂಗ್ರೆಸ್‌ಗೆ ಕಾಲಿಡುವುದಕ್ಕೂ ಮೊದಲೇ ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರಾಗಿ ಇದ್ದೆವು. ಅವರು ಮುಖ್ಯಮಂತ್ರಿ ಆಗುವುದಕ್ಕೆ ನಮ್ಮ ಕೊಡುಗೆಯೂ ಇದೆ. ಅದನ್ನು ಅವರು ಮರೆಯಬಾರದು’ ಎಂದು ತಿರುಗೇಟು ನೀಡಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ದೇವನಹಳ್ಳಿ ಸಮೀಪ ಕ್ಲಬ್‌ವೊಂದರಲ್ಲಿ ಬೀಡು ಬಿಟ್ಟಿರುವ ಪಕ್ಷದ ಶಾಸಕರಲ್ಲಿ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಸರ್ಕಾರಕ್ಕೆ ಏನೂ ಆಗುವುದಿಲ್ಲ. ಕೆಲವು ಶಾಸಕರು ವಾಪಸ್‌ ಬರುವ ವಿಶ್ವಾಸವಿದೆ. ಆದ್ದರಿಂದ ಸರ್ಕಾರ್ ಸೇಫ್‌ ಎಂದೂ ವಿಶ್ವಾಸದಿಂದ ನುಡಿದರೆಂದೂ ಮೂಲಗಳು ತಿಳಿಸಿವೆ.

ಸಂಜೆ ವಿಧಾನಸಭಾಧ್ಯಕ್ಷರನ್ನು ಭೇಟಿ ಮಾಡುವ ಬಿಜೆಪಿ ಪ್ರಯತ್ನಕ್ಕೆ ಯಶಸ್ಸು ಸಿಗಲಿಲ್ಲ. ಬಿಜೆಪಿ ಶಾಸಕರು ಸಭಾಧ್ಯಕ್ಷರ ಕಚೇರಿಯನ್ನು ತಲುಪುವ ಮೊದಲೇ ರಮೇಶ್‌ ಕುಮಾರ್‌ ಮನೆಗೆ ತೆರಳಿದ್ದರು.

ಬಿಜೆಪಿ ನಾಯಕರು ಶಾಸಕಾಂಗ ಪಕ್ಷದ ಸಭೆಯನ್ನು ನಡೆಸಿದ್ದು, ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಬುಧವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವುದರ ಜತೆಗೆ ರಾಜ್ಯಪಾಲರು ಮತ್ತು ವಿಧಾನಸಭಾಧ್ಯಕ್ಷರನ್ನು ಭೇಟಿ ಮಾಡಲು ತೀರ್ಮಾನಿಸಿದ್ದಾರೆ.

ರಾಜ್ಯಪಾಲ ವಾಲಾ ನಡೆಯತ್ತ ಎಲ್ಲರ ಚಿತ್ತ

ಈಗಿನ ರಾಜಕೀಯ ಸಂಕೀರ್ಣ ಸ್ಥಿತಿಯಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ವಿಶ್ವಾಸ ಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿಗೆ ಸೂಚಿಸುತ್ತಾರೋ ಅಥವಾ ಕಾದು ನೋಡುವ ತಂತ್ರ ಅನುಸರಿಸುತ್ತಾರೋ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆದಿದೆ.

ಮುಂದೆ ಯಾವ ಹೆಜ್ಜೆ ಇಡಬಹುದು ಎಂಬ ಬಗ್ಗೆ ಕಾನೂನು ಪರಿಣಿತರನ್ನು ಕರೆಸಿರಾಜ್ಯಪಾಲರು ಮಾಹಿತಿ ಪಡೆದುಕೊಂಡಿದ್ದಾರೆ. ತೀರಾ ಗೊಂದಲದ ಸ್ಥಿತಿ ನಿರ್ಮಾಣವಾದರೆ, ವಿಧಾನಸಭೆಯನ್ನು ಅಮಾನತ್ತಿನಲ್ಲಿ ಇಡುವ ನಿರ್ಧಾರ ತೆಗೆದುಕೊಳ್ಳಲೂ ಬಹುದು ಎಂದು ವಿಶ್ಲೇಷಿಸಲಾಗಿದೆ.

ರಾಜೀನಾಮೆ ನೀಡಿದ ಎಲ್ಲ ಶಾಸಕರೂ ರಾಜ್ಯಪಾಲರನ್ನು ಭೇಟಿ ಮಾಡಿ ಅವರ ಗಮನಕ್ಕೂ ತಂದಿದ್ದಾರೆ. ಆದರೆ, ರಾಜೀನಾಮೆಯ ಪ್ರಕರಣವನ್ನು ಸಭಾಧ್ಯಕ್ಷರೇ ನಿಭಾಯಿಸಿ, ನಿರ್ಣಯ ತೆಗೆದುಕೊಳ್ಳಬೇಕು. ಸಭಾಧ್ಯಕ್ಷರು ಒಂಬತ್ತು ಶಾಸಕರ ರಾಜೀನಾಮೆ ತಿರಸ್ಕರಿಸಿರುವುದ ರಿಂದ, ರಾಜ್ಯಪಾಲರನ್ನು ಭೇಟಿ ಮಾಡಲಿರುವ ಬಿಜೆಪಿ ನಾಯಕರು, ಸಭಾಧ್ಯಕ್ಷರ ನಡೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಬಹುದು. ಸರ್ಕಾರ ಅಲ್ಪಮತಕ್ಕೆ ಇಳಿದಿರುವುದರಿಂದ ವಿಶ್ವಾಸಮತ ಕೋರಲು ಮುಖ್ಯಮಂತ್ರಿಯವರಿಗೆ ಸೂಚಿಸಿ ಎಂದೂ ಮನವಿ ಮಾಡಬಹುದು ಎಂದು ಹೇಳಲಾಗಿದೆ.

*ಬಿಜೆಪಿ ಪ್ರಜಾಪ್ರಭುತ್ವ ಕಗ್ಗೊಲೆ ಮಾಡುತ್ತಿದೆ. ಶಾಸಕರಿಗೆ ಆಮಿಷ ಒಡ್ಡಿ ಆಪರೇಷನ್‌ ಮಾಡಿದೆ

ದಿನೇಶ್‌ ಗುಂಡೂರಾವ್‌, ಅಧ್ಯಕ್ಷ, ಕೆಪಿಸಿಸಿ

* ಬಿಜೆಪಿ ಆಪರೇಷನ್‌ ಈ ಬಾರಿಯೂ ಸಕ್ಸಸ್‌ ಆಗುವುದಿಲ್ಲ. ಶಾಸಕರು ನಿಶ್ಚಿಂತೆಯಿಂದ ಇರಬೇಕು

ಎಚ್‌.ಡಿ.ಕುಮಾರಸ್ವಾಮಿ,ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.