ADVERTISEMENT

90 ಹುದ್ದೆಗೆ 160 ನೇಮಕ?

ಸಿ.ಎಂ ಕಚೇರಿಯಿಂದಲೂ 39 ಅಭ್ಯರ್ಥಿಗಳಿಗೆ ಶಿಫಾರಸು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 19:30 IST
Last Updated 6 ಮಾರ್ಚ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಿಧಾನಸಭೆ ಸಚಿವಾಲಯದಲ್ಲಿ ಖಾಲಿ ಇರುವ  ‘ಸಿ’ ಮತ್ತು ‘ಡಿ’ ದರ್ಜೆ ಹುದ್ದೆಗಳ ಸಂಖ್ಯೆ 90. ಆದರೆ ನೇಮಕ ಮಾಡಿಕೊಳ್ಳುತ್ತಿರುವುದು 160 ಮಂದಿಯನ್ನು. ಇದು ಈಗ ವಿವಾದಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರದ 39 ಮಂದಿಯನ್ನು ನೇಮಕ ಮಾಡುವಂತೆ ಒತ್ತಡ ಬಂದಿರುವುದರಿಂದ ಪಟ್ಟಿ ಬೆಳೆಯುತ್ತಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ದಲಾಯತ್‌ (ಕಡತ ಒಯ್ಯುವವರು), ಚಾಲಕರು, ಕಂಪ್ಯೂಟರ್, ಆಪರೇಟರ್‌ಗಳು ಮತ್ತು ಕಿರಿಯ ಸಹಾಯಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾ
ಗಿತ್ತು. ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ವಿಧಾನಸಭೆ ಸಚಿವಾಲಯ ತರಾತುರಿಯಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ.

ADVERTISEMENT

‘ಈಗಾಗ‌ಲೇ ಸಚಿವಾಲಯದಲ್ಲಿ 900 ನೌಕರರಿದ್ದಾರೆ. ಮುಂದಿನ ಕೆಲವು ತಿಂಗಳಲ್ಲಿ ನಿವೃತ್ತಿಯಿಂದ ಖಾಲಿಯಾಗುವ ಹುದ್ದೆಗಳಿಗೂ ಈಗಲೇ ನೇಮಕ ಮಾಡಿಕೊಳ್ಳಲಾಗುತ್ತಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ ಸದಸ್ಯರಾಗಿರುವ ವಿಶೇಷ ಮಂಡಳಿ ಒಪ್ಪಿಗೆ ಪಡೆದಿರುವ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ನೇಮಕಾತಿ ಕಸರತ್ತಿಗೆ ಕೈಹಾಕಿದ್ದಾರೆ. ಇದರ ಉಸ್ತುವಾರಿಯನ್ನು ಸಚಿವಾಲಯ ಕಾರ್ಯದರ್ಶಿ
ಎಸ್‌.ಮೂರ್ತಿ ನೋಡಿಕೊಳ್ಳುತ್ತಿದ್ದಾರೆ’ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಹಿರಿಯ ಸಚಿವರೊಬ್ಬರ ಬಳಿ ಸಹಾಯಕರಾಗಿ ಕೆಲಸ ಮಾಡುತ್ತಿರುವವರೊಬ್ಬರು ಸಿ ದರ್ಜೆ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಅರ್ಜಿ ತಿರಸ್ಕರಿ
ಸಲಾಗಿದೆ. ಈ  ಹುದ್ದೆಗಳಿಗೆ ಲಿಖಿತ ಪರೀಕ್ಷೆ ಇಲ್ಲ. ನೇರ ಸಂದರ್ಶನ ಮಾಡಲಾಗುತ್ತಿದೆ. ಇದು ವ್ಯಾಪಕ ಭ್ರಷ್ಟಾಚಾರಕ್ಕೆ ಕಾರಣವಾಗಿದೆ’ ಎಂದು ಸಂದರ್ಶನಕ್ಕೆ ಹಾಜರಾಗಿದ್ದ ಅಭ್ಯರ್ಥಿಯೊಬ್ಬರು ಆರೋಪಿಸಿದರು.

ಈ ಕುರಿತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಅವರನ್ನು ಸಂಪರ್ಕಿಸಿದಾಗ, ‘ಈ  ನೇಮಕಾತಿ ಪ್ರಕ್ರಿಯೆಯಲ್ಲಿ ನಮ್ಮ ಪಾತ್ರವೇನೂ ಇಲ್ಲ. ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರೇ ಅದನ್ನು ನೋಡಿಕೊಳ್ಳುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ವಿಧಾನಸಭಾ ಸಚಿವಾಲಯದ ಕಾರ್ಯದರ್ಶಿ ಎಸ್‌.ಮೂರ್ತಿ, ‘ವಿಧಾನಸಭಾಧ್ಯಕ್ಷರೇ ನೇರವಾಗಿ ಇದನ್ನು ನೋಡಿಕೊಳ್ಳುತ್ತಿದ್ದಾರೆ. ಕಾನೂನು ಬಿಟ್ಟು ಏನು ಮಾಡಲು ಸಾಧ್ಯವಿಲ್ಲ. ನಿಯಮ ಉಲ್ಲಂಘಿಸಿದರೆ ಆಯ್ಕೆ ಆಗದವರು ನ್ಯಾಯಾಲಯಕ್ಕೆ ಹೋಗುತ್ತಾರೆ’ ಎಂದರು.

ಅಗತ್ಯಕ್ಕಿಂತ ಹೆಚ್ಚು ಜನರನ್ನು ನೇಮಕ ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ‘ಈ ಬಗ್ಗೆ  ನಾನೇನೂ ಹೇಳುವುದಿಲ್ಲ, ಏನು ಬೇಕಾದರೂ ಬರೆದುಕೊಳ್ಳಿ’ ಎಂದರು.

ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದಾಗ, ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ‘ಕಚೇರಿಗೆ ಬನ್ನಿ ಮಾತನಾಡೋಣ’ ಎಂದು ಆಹ್ವಾನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.