ಬೆಂಗಳೂರು: ಐಶ್ವರ್ಯ ಗೌಡ ಅವರು ₹9.82 ಕೋಟಿ ಮೊತ್ತದ ಚಿನ್ನಾಭರಣ ವಂಚಿಸಿದ ಪ್ರಕರಣದಲ್ಲಿ, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ಮನೆಯಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಗುರುವಾರ ತಪಾಸಣೆ ನಡೆಸಿದರು.
ಶಾಸಕರ ಮನೆಗೆ ಬೆಳಿಗ್ಗೆಯೇ ಬಂದಿದ್ದ ಇ.ಡಿ ಅಧಿಕಾರಿಗಳು ಸಂಜೆಯವರೆಗೂ ತಪಾಸಣೆ ನಡೆಸಿದರು. ಮನೆಯಲ್ಲಿದ್ದ ಸಿಬ್ಬಂದಿಯ ವಿಚಾರಣೆ ನಡೆಸಿದರು. ಜತೆಗೆ ಮನೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು, ಕರೆ ವಿವರಗಳನ್ನು ಕಲೆ ಹಾಕಿದರು ಎಂದು ಮೂಲಗಳು ತಿಳಿಸಿವೆ.
ಐಶ್ವರ್ಯ ಗೌಡ ವಶಕ್ಕೆ: ಇದೇ ವೇಳೆ ಐಶ್ವರ್ಯ ಗೌಡ ಅವರ ಆರ್‌ಎಂಸಿ ಯಾರ್ಡ್ ನಿವಾಸ ನಿವಾಸದ ಮೇಲೆ ದಾಳಿ ನಡೆಸಿ, ಪರಿಶೀಲನೆ ಮಾಡಿದರು.
ಸಂಜೆಯವರೆಗೂ ನಡೆದ ಪರಿಶೀಲನೆ ನಂತರ ಹಲವು ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದರು. ಐಶ್ವರ್ಯ ಅವರನ್ನು ಮನೆಯಲ್ಲಿಯೇ ಕೆಲಕಾಲ ವಿಚಾರಣೆ ನಡೆಸಿ, ರಾತ್ರಿಯ ವೇಳೆಗೆ ವಶಕ್ಕೆ ಪಡೆದರು. ನಂತರ ಶಾಂತಿನಗರದಲ್ಲಿರುವ ಇ.ಡಿ ಕಚೇರಿಗೆ ಕರೆತಂದರು ಮೂಲಗಳು ತಿಳಿಸಿವೆ.
ಮಳವಳ್ಳಿ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿರುವ ಐಶ್ವರ್ಯ ಗೌಡ ಅವರ ಮನೆಯ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದರು. ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿಯ ಭದ್ರತೆಯೊಂದಿಗೆ ಗುರುವಾರ ಬೆಳಿಗ್ಗೆ 9ರ ವೇಳೆಗೆ ಬಂದ ಅಧಿಕಾರಿಗಳು ಸಂಜೆಯವರೆಗೂ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದರು. ಕೆಲ ದಾಖಲೆಗಳ ಸಂಬಂಧ ಅವರ ತಾಯಿ ಮತ್ತು ಸಹೋದರನ ವಿಚಾರಣೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.