ADVERTISEMENT

ಚಿಕ್ಕಬಳ್ಳಾಪುರಕ್ಕೆ ಸುಡಾನ್ ನ್ಯಾಯಾಧೀಶರ ನಿಯೋಗ ಭೇಟಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 14:05 IST
Last Updated 16 ಡಿಸೆಂಬರ್ 2019, 14:05 IST
ಸುಡಾನ್ ನ್ಯಾಯಾಧೀಶರ ನಿಯೋಗಕ್ಕೆ ಹಿರಿಯ ವಕೀಲರಾದ ಕೆ.ಸೂರ್ಯನಾರಾಯಣ ಅವರು ಭಾರತೀಯ ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ ತಿಳಿಸಿದರು.
ಸುಡಾನ್ ನ್ಯಾಯಾಧೀಶರ ನಿಯೋಗಕ್ಕೆ ಹಿರಿಯ ವಕೀಲರಾದ ಕೆ.ಸೂರ್ಯನಾರಾಯಣ ಅವರು ಭಾರತೀಯ ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ ತಿಳಿಸಿದರು.   

ಚಿಕ್ಕಬಳ್ಳಾಪುರ: ಸುಡಾನ್‌ನ 25 ಮಂದಿ ನ್ಯಾಯಾಧೀಶರ ನಿಯೋಗ ಸೋಮವಾರ ಜಿಲ್ಲಾ ನ್ಯಾಯಾಲಯಕ್ಕೆ ಭೇಟಿ ನೀಡಿ ಇಲ್ಲಿನ ನ್ಯಾಯಾಲಯಗಳ ವ್ಯವಸ್ಥೆ, ಕಾರ್ಯವೈಖರಿ, ತೀರ್ಪುದಾನ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು.

ಸುಡಾನ್‌ನ ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರಾದ ಗಾಸೀಮ್ ಮಹಮ್ಮದ್ ಎಲ್ಕೇದರ್, ಅಬ್ದುಲ್ ರೆಹಮಾನ್, ಸುಡಾನ್ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾದ ಡೇರರ್ ಯೂಸೆಫ್, ಸೈಯದ್‍ಅಹಮ್ಮದ್ ಯೂಸೆಫ್ ಸೇರಿದಂತೆ ಜಿಲ್ಲಾ ಮತ್ತು ವಿವಿಧ ಸ್ತರಗಳ ನ್ಯಾಯಿಕ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರು ಜಿಲ್ಲೆಯ ನ್ಯಾಯಾಲಯದ ಆಡಳಿತ ವ್ಯವಸ್ಥೆ, ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯವೈಖರಿ, ಇ-ಕೋರ್ಟ್ ಮೂಲಕ ಕಕ್ಷಿದಾರರಿಗೆ ಮತ್ತು ವಕೀಲರಿಗೆ ನೀಡುತ್ತಿರುವ ಸೇವಾ ಸೌಲಭ್ಯಗಳು ಮತ್ತು ತ್ವರಿತ ನ್ಯಾಯಿಕ ನಿರ್ವಹಣೆ ವ್ಯವಸ್ಥೆ ಬಗ್ಗೆ ತಿಳಿದುಕೊಂಡರು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಅಮರನಾರಾಯಣ ಅವರು ಸೇರಿದಂತೆ ಜಿಲ್ಲಾ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರು ಸುಡಾನ್ ನ್ಯಾಯಾಧೀಶರ ನಿಯೋಗದೊಂದಿಗೆ ಸಂವಾದ ನಡೆಸಿದರು. ಹಿರಿಯ ವಕೀಲರಾದ ಕೆ.ಸೂರ್ಯನಾರಾಯಣ ಅವರು ಭಾರತೀಯ ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ ನಿಯೋಗದ ಸದಸ್ಯರಿಗೆ ತಿಳಿಸಿದರು.

ADVERTISEMENT

ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಚ್. ದೇವರಾಜು, ರೂಪಾ, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರುಗಳಾದ ಭಾನುಮತಿ, ನಟರಾಜ್, ವಕೀಲ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ತಮ್ಮೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.