
ಬೆಂಗಳೂರು: ನಕಲಿ ಆಧಾರ್ ಕಾರ್ಡ್ ಬಳಸಿ ಪಡೆದುಕೊಂಡಿದ್ದ ಪಾಸ್‌ಪೋರ್ಟ್ ಮೂಲಕ ಐದು ಬಾರಿ ಬಾಂಗ್ಲಾ ದೇಶಕ್ಕೆ ಪ್ರಯಾಣಿಸಿದ್ದ ಮತ್ತು ಸದ್ಯ ಮಾನವ ಕಳ್ಳಸಾಗಣೆ ಆರೋಪದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಾಂಗ್ಲಾ ಪ್ರಜೆಯೊಬ್ಬರಿಗೆ ಜಾಮೀನು ಮಂಜೂರು ಮಾಡಲು ಹೈಕೋರ್ಟ್ ನಿರಾಕರಿಸಿದೆ.
ಈ ಸಂಬಂಧ ಆರೋಪಿ ಅಮೋಲ್ ಚಂದ್ರದಾಸ್ ಅಲಿಯಾಸ್ ಸುಜೀಬ್ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ನೇತೃತ್ವದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ.
ವಿಚಾರಣೆ ವೇಳೆ ಎನ್ಐಎ ಪರ ವಕೀಲ ಪಿ.ಪ್ರಸನ್ನ ಕುಮಾರ್, ‘ಆರೋಪಿಯು ನಕಲಿ ಆಧಾರ್ ಕಾರ್ಡ್ ಹೊಂದಿದ್ದು ಅದು 2017ರ ಡಿಸೆಂಬರ್ 18ರ ದಿನಾಂಕ ಹೊಂದಿದೆ. ಅದೇ ದಿನಾಂಕದಂದು ಆತನ ಹೆಸರಿನಲ್ಲಿ ಮತ್ತೊಂದು ಆಧಾರ್ ಕಾರ್ಡ್ ಸೃಷ್ಟಿಸಲಾಗಿದ್ದು, ಒಂದರಲ್ಲಿ ಬೆಂಗಳೂರಿನ ವಿಳಾಸವಿದ್ದರೆ ಮತ್ತೊಂದರಲ್ಲಿ ಅಸ್ಸಾಂ ವಿಳಾಸವಿದೆ. ಒಂದೇ ದಿನದಲ್ಲಿ ಕರ್ನಾಟಕ ಮತ್ತು ಅಸ್ಸಾಂ ಎರಡೂ ಕಡೆ ಆಧಾರ್ ಕಾರ್ಡ್ ಪಡೆಯಲು ಸಾಧ್ಯವಿಲ್ಲ. ಒಂದು ವೇಳೆ ಆರೋಪಿಗೆ ಜಾಮೀನು ನೀಡಿದರೆ ಆತ ಬಂಧನದಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳಿವೆ’ ಎಂದು ಕಳವಳ ವ್ಯಕ್ತಪಡಿಸಿದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ‘ಆರೋಪಿ ಬಾಂಗ್ಲಾದ ಪ್ರಜೆಯಾಗಿದ್ದು, ಒಂದೇ ದಿನದಲ್ಲಿ ಕರ್ನಾಟಕ ಮತ್ತು ಅಸ್ಸಾಂ ವಿಳಾಸದ ನಕಲಿ ಆಧಾರ್ ಕಾರ್ಡ್‌ಗಳನ್ನು ಪಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹಾಗಾಗಿ, ಜಾಮೀನು ನೀಡಲು ಸೂಕ್ತ ಕಾರಣ ಕಂಡುಬರುತ್ತಿಲ್ಲ’ ಎಂಬ ಅಭಿಪ್ರಾಯದೊಂದಿಗೆ ಮೇಲ್ಮನವಿ ವಜಾಗೊಳಿಸಿದೆ. ಎನ್‌ಐಎ ವಿಶೇಷ ನ್ಯಾಯಾಲಯ ಆರೋಪಿಯ ಜಾಮೀನು ಅರ್ಜಿ ವಜಾಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.