ADVERTISEMENT

ನ.16ರಂದು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಅಬ್ದುಲ್ ಜಬ್ಬಾರ್ ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 8:52 IST
Last Updated 8 ನವೆಂಬರ್ 2021, 8:52 IST
   

ಬೆಂಗಳೂರು: ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಅಬ್ದುಲ್ ಜಬ್ಬಾರ್ ಅವರು ಇದೇ 16ರಂದು ಅಧಿಕಾರ ಸ್ವೀಕರಿಸಲಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಶಾಸಕ ಎನ್.ಎ. ಹ್ಯಾರಿಸ್ ಮತ್ತು ಅಬ್ದುಲ್ ಜಬ್ಬಾರ್ ಈ ವಿಷಯ ತಿಳಿಸಿದರು.

‘16ರಂದು ಬೆಳಿಗ್ಗೆ 10.30ಕ್ಕೆ ಅರಮನೆ ಮೈದಾನದ ನಲಪಾಡ್ ಪೆವಿಲಿಯನ್ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಪಕ್ಷದ ರಾಷ್ಟ್ರೀಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಮ್ರಾನ್ ಪ್ರತಪ್ಗರ್ಹಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್‌. ಪಾಟೀಲ್ ಉಪಸ್ಥಿತರಿರಲಿದ್ದಾರೆ’ ಎಂದು ಹ್ಯಾರಿಸ್‌ ತಿಳಿಸಿದರು.

ADVERTISEMENT

‘ಸದ್ಯ ಜಾತಿ ಹಾಗೂ ಧರ್ಮದ ಮೇಲೆ ಯಾವ ರೀತಿಯ ರಾಜಕಾರಣ ನಡೆಯುತ್ತಿದೆ ಎಂದು ನೋಡುತ್ತಿದ್ದೇವೆ. ಜಾತ್ಯತೀತ ರಾಜಕಾರಣಕ್ಕಾಗಿ ಎಲ್ಲ ಸಮಾಜಕ್ಕೆ ಆದ್ಯತೆ ನೀಡಲು ಕಾಂಗ್ರೆಸ್ ಪಕ್ಷ ಈ ಘಟಕವನ್ನು ಸ್ಥಾಪಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಅಲ್ಪಸಂಖ್ಯಾತ ಘಟಕವನ್ನು ಮತ್ತಷ್ಟು ಬಲಪಡಿಸುತ್ತೇವೆ’ ಎಂದರು.

‘ಕಾಂಗ್ರೆಸ್ ಅಲ್ಪಸಂಖ್ಯಾತರು, ದಲಿತರು, ಕೆಳ ಹಂತದಲ್ಲಿರುವ ಸಮಾಜದವರನ್ನು ಕೈ ಹಿಡಿದು ಮೇಲೆತ್ತಲು ಶ್ರಮಿಸುತ್ತಲೇ ಬಂದಿದೆ. ಈ ಸಮುದಾಯಗಳನ್ನು ನಿರ್ಲಕ್ಷಿಸುತ್ತಿರುವ ಸರ್ಕಾರದ ವಿರುದ್ಧ ಜಾತ್ಯತೀತವಾಗಿ ದೊಡ್ಡ ಹೋರಾಟ ರೂಪಿಸುವ ಜೊತೆಗೆ, ಎಲ್ಲರನ್ನೂ ಸೇರಿಸಿ ಪಕ್ಷ ಬಲಪಡಿಸಲು ಶ್ರಮಿಸುತ್ತೇವೆ’ ಎಂದೂ ಹೇಳಿದರು.

ಅಬ್ದುಲ್ ಜಬ್ಬಾರ್ ಮಾತನಾಡಿ, ‘ಸೋನಿಯಾ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ನಾಯಕರ ಆಶೀರ್ವಾದದಿಂದ ನಾನು ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷನಾಗಿ ನೇಮಕಗೊಂಡಿದ್ದೇನೆ’ ಎಂದರು.

‘ಪಕ್ಷದಿಂದ ಅಲ್ಪಸಂಖ್ಯಾತರು ಕೇವಲ ಏಳು ಕಡೆಗಳಲ್ಲಿ ಮಾತ್ರ ಆಯ್ಕೆಯಾಗಿದ್ದು, ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದಾರೆ. ಎಲ್ಲ 224 ಕ್ಷೇತ್ರಗಳಲ್ಲೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕ್ರೈಸ್ತರು, ಸಿಖ್ಖರು, ಬುದ್ಧರು, ಇತರೆ ಸಮುದಾಯದವರು ಆಯ್ಕೆಯಾಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಎಲ್ಲೆಲ್ಲಿ ಸಮಸ್ಯೆಗಳಿವೆಯೋ ಅದನ್ನು ಸರಿಪಡಿಸಲು ಶ್ರಮಿಸುತ್ತೇನೆ’ ಎಂದರು.

’ಕಾಂಗ್ರೆಸ್ಸನಿಂದ ಸಿ.ಎಂ. ಇಬ್ರಾಹಿಂ ಕಾಲು ಹೊರಗಿಟ್ಟಿರುವುದಾಗಿ ಹೇಳಿಕೆ ನೀಡಿದ್ದು, ಅಲ್ಪಸಂಖ್ಯಾತರಲ್ಲೇ ಹಲವು ಗುಂಪುಗಳಾಗಿವೆಯಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಹ್ಯಾರಿಸ್, ‘ಸಿ.ಎಂ. ಇಬ್ರಾಹಿಂ ಅವರು ಕಾಲು ಹೊರಗಿಟ್ಟಿದ್ದಾರೋ, ಇಲ್ಲವೋ ಎನ್ನುವುದು ಅವರ ವೈಯಕ್ತಿಕ ನಿರ್ಧಾರ. ನಾವು ಅದನ್ನು ಪ್ರಶ್ನಿಸುವುದಿಲ್ಲ. ನಾವು ಎಲ್ಲರನ್ನು ಜತೆಗೂಡಿಸುವ ಕೆಲಸ ಮಾಡುತ್ತೇವೆ’ ಎಂದರು.

‘ಸದ್ಯ ಪಕ್ಷದಲ್ಲಿ ನಾವು ಎಲ್ಲರೂ ಜತೆಯಾಗಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ತಮ್ಮ ಅಭಿಪ್ರಾಯ, ಅಸಮಾಧಾನ ಹೊರಹಾಕಬಹುದು. ಪಕ್ಷದಲ್ಲಿ ಅಲ್ಪಸಂಖ್ಯಾತರ ವಿಚಾರವಾಗಿ ತಿರ್ಮಾನ ಕೈಗೊಳ್ಳಲು ಪ್ರತ್ಯೇಕ ಘಟಕವಿದೆ’ ಎಂದರು.

‘ನಾವು ಮತ್ತು ಜಬ್ಬಾರ್ ಅವರು ಸಿ.ಎಂ. ಇಬ್ರಾಹಿಂ ಅವರ ಜತೆ ಮಾತನಾಡುತ್ತೇವೆ. ಅವರು ಕೂಡ ನಮ್ಮ ನಾಯಕರು. ಪಕ್ಷದಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಅನ್ಯಾಯವಾಗಿಲ್ಲ. ನಮಗೆ ನ್ಯಾಯಯುತವಾಗಿ ಸಿಗಬೇಕಾದ ಎಲ್ಲ ನ್ಯಾಯವೂ ಸಿಗುತ್ತಿದೆ. ಅಲ್ಪಸಂಖ್ಯಾತರಿಗೆ ಸರಿಯಾಗಿ ನ್ಯಾಯ ಸಿಗುತ್ತಿರುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ. ನಾನು ಶಾಸಕನಾಗಲು ಕಾರಣ ಕಾಂಗ್ರೆಸ್’ ಎಂದರು.

‘ಅಲ್ಪಸಂಖ್ಯಾತ ನಾಯಕರನ್ನು ಹಂತ ಹಂತವಾಗಿ ರಾಜಕೀಯವಾಗಿ ಸಿದ್ದರಾಮಯ್ಯ ಮುಗಿಸುತ್ತಿದ್ದಾರೆ’ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅಲ್ಪಸಂಖ್ಯಾತ ನಾಯಕರನ್ನು ಯಾರು ಮುಗಿಸಿದ್ದಾರೆ ಎಂದು ಜನ ನೋಡಿದ್ದಾರೆ. ತಮ್ಮ ಪಕ್ಷದಲ್ಲಿದ್ದ ಅಲ್ಪಸಂಖ್ಯಾತರಿಗೆ ಅವರು ಯಾವ ಸ್ಥಾನಮಾನ ಕೊಟ್ಟಿದ್ದರು ಎಂದು ಆ ಪಕ್ಷದಲ್ಲಿದ್ದ ನಾಯಕರೇ ಹೇಳಿದ್ದಾರೆ. ಕಳೆದ ಉಪಚುನಾವಣೆಯಲ್ಲಿ ಏನಾಯಿತು ಎಂದು ನಾವೆಲ್ಲರೂ ನೋಡಿದ್ದೇವೆ. ಕಾಂಗ್ರೆಸ್ ಪಕ್ಷದಲ್ಲಿ ಮಾತನಾಡುವ ಸ್ವಾತಂತ್ರ್ಯ ಇದೆ. ಅದಕ್ಕಾಗಿ ಮುಕ್ತವಾಗಿ ಮಾತನಾಡುತ್ತಾರೆ. ಇದೇ ರೀತಿ ಬಿಜೆಪಿಯಲ್ಲಿ ಮಾತನಾಡಲು ಸಾಧ್ಯವೇ‘ ಎಂದು ಪ್ರಶ್ನಿಸಿದರು.

‘ಸ್ಥಾನಮಾನದ ವಿಚಾರವಾಗಿ ನಾವು ಪಕ್ಷದ ಒಳಗೆ ಚರ್ಚೆ ಮಾಡುತ್ತೇವೆ. ಅಲ್ಪಸಂಖ್ಯಾತರ ಕಲ್ಯಾಣ ಎಂದರೆ ಕೇವಲ ಸ್ಥಾನಮಾನ ಅಷ್ಟೇ ಅಲ್ಲ, ಅವರಿಗಾಗಿ ಸರ್ಕಾರ ಇದ್ದಾಗ ಎಷ್ಟು ಅನುದಾನ ನೀಡಿ ಯಾವ ರೀತಿ ಕಾರ್ಯಕ್ರಮ ನೀಡಲಾಗಿದೆ ಎಂಬುದು ಮುಖ್ಯ. ನಮ್ಮ ಸರ್ಕಾರ ಇದ್ದಾಗ ನೀಡಲಾದ ಅನುದಾನ, ಈಗ ಯಾವ ರೀತಿ ಕಡಿಮೆಯಾಗಿದೆ, ಯೋಜನೆಗಳು ಯಾವ ರೀತಿ ಹಳ್ಳ ಹಿಡಿದಿವೆ, ವಿದ್ಯಾರ್ಥಿ ವೇತನ ನಿಂತಿದೆ ಎಂಬುದನ್ನು ಗಮನಿಸಬೇಕು. ಈ ಅನ್ಯಾಯವನ್ನು ಕೇಳುವ ಕೆಲಸ ಮಾಡಬೇಕಿದೆ. ವಿರೋಧ ಪಕ್ಷವಾಗಿ ನಾವು ನಮ್ಮ ಕೆಲಸ ಮಾಡುತ್ತೇವೆ’ ಎಂದರು.

ಜಬ್ಬಾರ್‌ ಪರಿಚಯ: 10 ವರ್ಷಗಳ ಕಾಲ ದಾವಣಗೆರೆ ಜಿಲ್ಲಾ ಅಧ್ಯಕ್ಷರಾಗಿ ಜಬ್ಬಾರ್‌ ಕೆಲಸ ಮಾಡಿದ್ದಾರೆ. ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಷ್ಟ್ರೀಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಇಮ್ರನ್ ಪ್ರತಪ್ಗರ್ಹಿ ಅವರು ಜಬ್ಬಾರ್ ಅವರನ್ನು ಇತ್ತೀಚೆಗೆ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.