ADVERTISEMENT

ಅಬಕಾರಿ ಸನ್ನದು ಇ–ಹರಾಜು: ಮಧ್ಯಂತರ ತಡೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 15:38 IST
Last Updated 9 ಡಿಸೆಂಬರ್ 2025, 15:38 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ರಾಜ್ಯದಲ್ಲಿನ ಅಬಕಾರಿ ಸನ್ನದುಗಳನ್ನು ಇ-ಹರಾಜು ಮಾಡುವ ಉದ್ದೇಶದಿಂದ ಹೊರಡಿಸಲಾಗಿದ್ದ, ಕರ್ನಾಟಕ ಅಬಕಾರಿ (ಭಾರತೀಯ ಹಾಗೂ ವಿದೇಶಿ ಮದ್ಯ ಮಾರಾಟ) ಎರಡನೇ ತಿದ್ದುಪಡಿ ನಿಯಮಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ಈ ಸಂಬಂಧ, ‘ಕರ್ನಾಟಕ ಫೆಡರೇಷನ್‌ ಆಫ್‌ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಷನ್‌’ ಅಧ್ಯಕ್ಷ ಎಸ್‌.ಗುರುಸ್ವಾಮಿ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ ಹೆಗ್ಡೆ ಸೇರಿದಂತೆ ಐವರು ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್‌.ಹೇಮಲೇಖ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಡಿ.ಆರ್.ರವಿಶಂಕರ್‌ ಮಂಡಿಸಿದ, ‘ಸರ್ಕಾರದ ಆದೇಶವು, ಕಾನೂನು ಬಾಹಿರ, ಏಕಪಕ್ಷೀಯವಾದ ಸಕಾರಣವಿಲ್ಲದ ಮತ್ತು ಸಂವಿಧಾನದ ವಿಧಿಗಳಿಗೆ ವಿರುದ್ಧವಾಗಿದೆ’ ಎಂಬ ವಾದಾಂಶವನ್ನು ಮಾನ್ಯ ಮಾಡಿರುವ ನ್ಯಾಯಪೀಠ, ಮುಂದಿನ ಆದೇಶದವರೆಗೆ 2025ರ ನಿಯಮ 5 ಮತ್ತು ನಿಯಮ 5ಎ ಅನುಷ್ಠಾನಕ್ಕೆ ಮಧ್ಯಂತರ ತಡೆ ನೀಡಿದೆ.

ADVERTISEMENT

‘ಪ್ರತಿವಾದಿ ರಾಜ್ಯ ಸರ್ಕಾರ ಮಧ್ಯಂತರ ಆದೇಶದ ಮಾರ್ಪಾಡು ಅಥವಾ ತೆರವಿಗೆ ಅರ್ಜಿ ಸಲ್ಲಿಸಲು ಸ್ವತಂತ್ರವಿದೆ’ ಎಂದು ಸ್ಪಷ್ಟಪಡಿಸಿರುವ ನ್ಯಾಯಪೀಠ, ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಇದೇ 12ಕ್ಕೆ ಮುಂದೂಡಿದೆ.

‘ಕರ್ನಾಟಕ ಅಬಕಾರಿ (ಭಾರತೀಯ ಹಾಗೂ ವಿದೇಶಿ ಮದ್ಯ ಮಾರಾಟ) ಎರಡನೇ ತಿದ್ದುಪಡಿ ನಿಯಮ–2025ರ ನಿಯಮ 5 ಮತ್ತು 5ಎ ಅಡಿಯಲ್ಲಿ ಪ್ರಸ್ತಾಪಿಸಿರುವ ಹೊಸ ಷರತ್ತುಗಳು, ಮೀಸಲು ಮತ್ತು ಅರ್ಹತಾ ಮಾನದಂಡ ಮತ್ತಿತರ ಅಂಶಗಳು ಮೂಲ ಕರ್ನಾಟಕ ಅಬಕಾರಿ ಕಾಯ್ದೆ–1965ರ ನಿಬಂಧನೆಗಳ ವ್ಯಾಪ್ತಿಯ ಹೊರಗಿದ್ದಂತಿವೆ. ಹಾಗಾಗಿ, ಈ ಬಗ್ಗೆ ವಿಸ್ತೃತವಾದ ವಿಚಾರಣೆಯ ಅಗತ್ಯವಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅರ್ಜಿಯ ಸಾರಾಂಶ: ಹೆಚ್ಚುವರಿ ಅಬಕಾರಿ ಆದಾಯವನ್ನು ಸಂಗ್ರಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 2025-26ನೇ ಸಾಲಿನ ಬಜೆಟ್‌ನಲ್ಲಿ ಅಬಕಾರಿ ಪರವಾನಗಿಗಳಿಗೆ ಇ-ಹರಾಜು ಪರಿಚಯಿಸುವುದಾಗಿ ಘೋಷಿಸಿತ್ತು. ಅದರಂತೆ ಈ ಹಿಂದೆ ನವೀಕರಣಗೊಳ್ಳದ ಅಥವಾ ಸ್ಥಗಿತಗೊಂಡಿರುವ ಸುಮಾರು 500 ಅಬಕಾರಿ ಸನ್ನದುಗಳನ್ನು ಪಟ್ಟಿ ಮಾಡಿ ಅವುಗಳ ಹರಾಜಿಗೆ ಸಿದ್ಧತೆ ನಡೆಸಿದೆ. 

ಇದಕ್ಕೆ ಅನುಕೂಲವಾಗುವಂತೆ ಕಳೆದ ನವೆಂಬರ್‌ನಲ್ಲಿ ಕರ್ನಾಟಕ ಅಬಕಾರಿ (ಭಾರತೀಯ ಹಾಗೂ ವಿದೇಶಿ ಮದ್ಯ ಮಾರಾಟ) ಎರಡನೇ ತಿದ್ದುಪಡಿ ನಿಯಮ 5 ಮತ್ತು 5ಎ ಕರಡು ಪ್ರಕಟಿಸಿತ್ತು. ನಂತರ ಈ ಕರಡನ್ನು ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ. ಈ ಅಧಿಸೂಚನೆಯನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.