ADVERTISEMENT

ನೀತಿ ಆಯೋಗ ಸಭೆಗೆ ಗೈರು: ಸಿಎಂ ಸ್ಪಷ್ಟನೆ ನೀಡಲಿ; ಎನ್.ರವಿಕುಮಾರ್

​ಪ್ರಜಾವಾಣಿ ವಾರ್ತೆ
Published 26 ಮೇ 2025, 15:39 IST
Last Updated 26 ಮೇ 2025, 15:39 IST
ಎನ್. ರವಿಕುಮಾರ್
ಎನ್. ರವಿಕುಮಾರ್   

ಬೆಂಗಳೂರು: ‘ಕೇಂದ್ರ ಸರ್ಕಾರ ನಡೆಸಿದ ನೀತಿ ಆಯೋಗದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಭಾಗವಹಿಸದೇ ನಿರ್ಲಕ್ಷ್ಯ ತಾಳಿರುವುದನ್ನು ನೋಡಿದರೆ ರಾಜ್ಯದ ಅಭಿವೃದ್ಧಿ ಕುರಿತು ಅವರಿಗೆ ಬದ್ಧತೆ ಇಲ್ಲದಿರುವುದು ಸ್ಪಷ್ಟವಾಗುತ್ತದೆ’ ಎಂದು ವಿಧಾನಪರಿಷತ್‌ ವಿರೋಧಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಟೀಕಿಸಿದ್ದಾರೆ.

‘ನೀತಿ ಆಯೋಗದ ಸಭೆಯು ರಾಜ್ಯದ ಅಭಿವೃದ್ಧಿಗೆ ಅತಿ ನಿರ್ಣಾಯಕ. ಅಲ್ಲಿ ರಾಜ್ಯ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ವಿಷಯ ಚರ್ಚೆಯಾಗುತ್ತದೆ. ಆದರೆ, ಮುಖ್ಯಮಂತ್ರಿಯವರು ಯಾವುದೇ ಗಂಭೀರ ಕಾರಣವಿಲ್ಲದೇ ಆ ಸಭೆಗೆ ಗೈರಾಗಿದ್ದಾರೆ’ ಎಂದು ಅವರು ಟೀಕಿಸಿದ್ದಾರೆ.

‘ಈ ಸಭೆಗೆ ಕಾಂಗ್ರೆಸ್‌ ಆಡಳಿತದ ರಾಜ್ಯಗಳಲ್ಲದೇ, ಬಿಜೆಪಿಯೇತರ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿ ತಮ್ಮ ಅಭಿಪ್ರಾಯ ದಾಖಲಿಸಿ, ಹಲವು ಸಲಹೆಗಳನ್ನು ನೀಡಿದ್ದಾರೆ. ಪಂಜಾಬ್‌, ತೆಲಂಗಾಣ, ತಮಿಳುನಾಡು, ಹಿಮಾಚಲ ಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿ ಮೋದಿ ಮತ್ತು ಬಿಜೆಪಿಯ ಕಟ್ಟಾ ವಿರೋಧಿಗಳು. ರಾಜಕೀಯ ವಿರೋಧವೇ ಬೇರೆ, ಅಭಿವೃದ್ಧಿಯ ವಿಚಾರವೇ ಬೇರೆ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

‘ಸಿದ್ದರಾಮಯ್ಯ ಮತ್ತು ರಾಜ್ಯದ ಕಾಂಗ್ರೆಸ್‌ ನಾಯಕರು ಮೋದಿಯವರನ್ನು ತಮ್ಮ ಶತ್ರು ಎಂದು ಪರಿಗಣಿಸಿರುವುದರಿಂದ ಪ್ರಧಾನಿ ನೇತೃತ್ವದ ಸಭೆಯಲ್ಲಿ ಭಾಗವಹಿಸಿಲ್ಲ. ಆದರೂ ರಾಜಕೀಯ ಎದುರಾಳಿಯಾಗುವುದು ಮತ್ತು ಶತ್ರುವಾಗಿರುವುದರ ನಡುವೆ ಬಹಳಷ್ಟು ವ್ಯತ್ಯಾಸವಿದೆ ಎನ್ನುವುದನ್ನು ಮುಖ್ಯಮಂತ್ರಿಯವರು ತಿಳಿದಿರಬೇಕು’ ಎಂದು ತಿಳಿಸಿದ್ದಾರೆ.

‘ಎಲ್ಲ ರಾಜ್ಯಗಳೂ ವಿಷನ್ ಡಾಕ್ಯುಮೆಂಟ್‌ ಸಿದ್ಧಪಡಿಸಿಕೊಳ್ಳುವಂತೆ ಪ್ರಧಾನಿಯವರು ಸಲಹೆ ನೀಡಿದ್ದಾರೆ. ಆದರೆ, ಕರ್ನಾಟಕ ಇನ್ನೂ ವಿಷನ್ ಡಾಕ್ಯುಮೆಂಟ್‌ ಸಿದ್ಧಪಡಿಸಿಲ್ಲ. ಇದು ಗಂಭೀರ ಲೋಪವಾಗಿದೆ. ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸದೇ ಇರುವುದು ಮತ್ತು ವಿಷನ್‌ ಡಾಕ್ಯುಮೆಂಟ್‌ ಸಿದ್ಧಪಡಿಸದೇ ಇರುವ ಬಗ್ಗೆ ನಾಡಿನ ಜನತೆಗೆ ಮುಖ್ಯಮಂತ್ರಿಯವರು ಸ್ಪಷ್ಟನೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.