ADVERTISEMENT

ಮಹಿಷಾಸುರ ಆಚರಣೆ ಅಭಾರತೀಯವಾದುದು: ಸಿ.ಆರ್. ಮುಕುಂದ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 9:30 IST
Last Updated 6 ಜೂನ್ 2020, 9:30 IST

ಬೆಂಗಳೂರು: ‘ಜವಾಹರ್‌ಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‍ಯು) ತುಕ್ಡೆ ತುಕ್ಡೆ ಘೋಷಣೆ ಕೂಗುವುದು, ಬೀಫ್ ಫೆಸ್ಟಿವಲ್ ಹಾಗೂ ಮಹಿಷಾಸುರನ ಆಚರಣೆ ಮಾಡುವ ಮನಸ್ಥಿತಿಗಳು ಅಭಾರತೀಯ ಹಾಗೂ ಅರಾಷ್ಟ್ರೀಯ ದೃಷ್ಟಿಕೋನಗಳು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸಹ ಸರಕಾರ್ಯವಾಹ ಸಿ.ಆರ್.ಮುಕುಂದ ಹೇಳಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ಹಾಗೂ ಜ್ಞಾನಾಕ್ಷಿ ಪ್ರಕಾಶನದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಹಾಗೂ ಪರಿಷತ್‌ನ ವೆಬ್‍ಸೈಟ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

’ರಾಷ್ಟ್ರ, ರಾಷ್ಟ್ರೀಯತೆಯ ಚರ್ಚೆ ಇವತ್ತು ನಡೆಯುತ್ತಿದೆ. ನಮ್ಮದು ಬಹುಸಂಸ್ಕೃತಿಯ ದೇಶ ಎಂಬ ಮಾರ್ಕ್ಸ್‌ವಾದಿ ಸಿದ್ದಾಂತ ನೆಲೆ ಒಂದು. ಮತ್ತೊಂದು ದಿಕ್ಕಿನಲ್ಲಿ ನಮ್ಮ ರಾಷ್ಟ್ರದ ಮೂಲ ತತ್ವ, ನಂಬಿಕೆ, ನಮ್ಮ ಪೂರ್ವಜರು ಶತಮಾನ ಕಾಲದಿಂದ ನಂಬಿಕೊಂಡು ಸಂಗತಿಗಳ ಮುಂದಿಟ್ಟು ರಾಷ್ಟ್ರೀಯತೆಯ ಚರ್ಚೆಯೂ ಆರಂಭವಾಗಿದೆ. ಈ ರೀತಿಯ ಮಂಥನಗಳು ಹೆಚ್ಚಾಗಿ ನಡೆಯಬೇಕಾಗಿದೆ‘ ಎಂದರು.

ADVERTISEMENT

’ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆ ವಿಚಾರವೂ ಚರ್ಚೆಯಲ್ಲಿದೆ. ಬೆಂಗಳೂರಿನ ರಸ್ತೆಯೊಂದಕ್ಕೆ ವೀರ ಸಾವರ್ಕರ್ ಅವರ ಹೆಸರಿಡುವ ವಿಷಯದಲ್ಲಿ ವಿರೋಧ ವ್ಯಕ್ತವಾಯಿತು. ಆ ವಿರೋಧವು ಕನ್ನಡ ಶ್ರೇಷ್ಠ, ಕನ್ನಡ ದೇಶ ಎಂಬ ನೆಲೆಯಿಂದ ಹೊರಟಿತ್ತು. ಅಂತಹ ಭಾವನೆ ಕೂಡ ತಪ್ಪಲ್ಲ. ಆದರೆ, ಭಾರತೀಯ ಸಂಸ್ಕೃತಿಯಲ್ಲಿ ಅಂತರ್ಗತವಾಗಿ ಪ್ರಾದೇಶಿಕ ಚಿಂತನೆ ಇದೆ ಎಂದು ಅರ್ಥಮಾಡಿಕೊಳ್ಳದೇ ಇದ್ದುದೇ ಇಂತಹ ವಿರೋಧಕ್ಕೆ ಕಾರಣ‘ ಎಂದು ಅವರು ವಿಶ್ಲೇಷಿಸಿದರು.

'ಅರಾಷ್ಟ್ರೀಯರೆಲ್ಲರೂ ದೇಶದ ಬಗ್ಗೆ ಕೆಟ್ಟದಾಗಿ ಮಾತನಾಡುವುದಿಲ್ಲ.ಅರಾಷ್ಟ್ರೀಯರಿಗೆ ಮೂಲ ಭಾರತೀಯ ದೃಷ್ಟಿಕೋನದ ಚಿಂತನೆ ಹಾಗೂ ಪರಿಚಯದ ಕೊರತೆ ಇದೆ. ಇದನ್ನು ಪರಿಚಯಿಸುವ ಬರಹಗಳು ಹಾಗೂ ಬರೆಯುವ ಲೇಖಕರು ಹೆಚ್ಚಾಗುವ ಅಗತ್ಯ ಇದೆ' ಎಂದು ತಿಳಿಸಿದರು.

ಲೇಖಕಿ ಎಸ್.ಆರ್.ಲೀಲಾ ಅವರ 'ಆಪರೇಷನ್ ರೆಡ್ ಲೋಟಸ್', 'ಜೀವಂತ ದುರ್ಗಾಪೂಜೆ, ನುಡುಗುಡಿಯ ಪೂಜಾರಿಗಳು', 'ಎರಡು ತೆರನಾದ ಭಾರತೀಯರು' ಹಾಗೂ ರೋಹಿಣಾಕ್ಷ ಶಿರ್ಲಾಲು ಅವರ 'ನೆಲದನಿಯ ಶೋಧ' ಪುಸ್ತಕಗಳು ಬಿಡುಗಡೆಗೊಂಡವು.

ಜ್ಞಾನಾಕ್ಷಿ ಶಿಕ್ಷಣ ಸಮೂಹದ ಪ್ರಧಾನ ಕಾರ್ಯದರ್ಶಿ ಹಯಗ್ರೀವಾಚಾರ್ಯ, ಸೆಂಚುರಿ ರಿಯಲ್ ಎಸ್ಟೇಟ್ ಹೋಲ್ಡಿಂಗ್‍ನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.