ಬೆಂಗಳೂರು: ಹಿಂದುಳಿದ ವರ್ಗಗಳ ಸಚಿವಾಲಯದ ಟೈಪಿಸ್ಟ್ ಮೋಹನ್ ಕುಮಾರ್ ಬಳಿ ಸಿಕ್ಕಿದ₹ 25.76 ಲಕ್ಷ ಲಂಚದ ಹಣದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರನ್ನು ಎಸಿಬಿ ಅಧಿಕಾರಿಗಳು ಶುಕ್ರವಾರ ಸತತ ಮೂರು ಗಂಟೆ ವಿಚಾರಣೆ ನಡೆಸಿದರು.
ಮೂವರು ಅಧಿಕಾರಿಗಳ ತಂಡ ಸಚಿವರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿತು. ಆದರೆ, ಯಾವುದೇ ಪ್ರಶ್ನೆಗೂ ಅವರು ಸಮರ್ಪಕ ಉತ್ತರ ನೀಡಲಿಲ್ಲ. ಇದರಿಂದಾಗಿ ತನಿಖೆ ಅಪೂರ್ಣಗೊಂಡಿದ್ದು ಪುಟ್ಟರಂಗಶೆಟ್ಟಿ ಅವರನ್ನು ಪುನಃ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಲಂಚ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಚಿವರಿಗೆ ಕಳೆದ ವಾರವೇ ಎಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದರೆ, ವೈಯಕ್ತಿಕ ಕಾರಣಗಳಿಗಾಗಿ ಕಾಲಾವಕಾಶ ನೀಡುವಂತೆ ಅವರು ಕೇಳಿದ್ದರು. ವಿಧಾನಮಂಡಲ ಬಜೆಟ್ ಅಧಿವೇಶನ ಗುರುವಾರ ಮುಗಿದಿದ್ದು, ಶುಕ್ರವಾರವೇ ಪುಟ್ಟರಂಗಶೆಟ್ಟಿ ವಿಚಾರಣೆಗೆ ಹಾಜರಾದರು.
ಈ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿರುವ ಮೋಹನ್ ಕುಮಾರ್ ಬಳಿ ವಿಧಾನಸೌಧ ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿರುವ ಹಣದ ಬಗ್ಗೆ ಸಚಿವರು ಸರಿಯಾದ ಉತ್ತರ ಕೊಡಲಿಲ್ಲ. ಮೋಹನ್ ಕುಮಾರ್, ಗುತ್ತಿಗೆದಾರರಾದ ನಂದ, ಶ್ರೀನಿಧಿ, ಶ್ರೀಧರ್ ಹಾಗೂ ಗುರುಮೂರ್ತಿ ಜೊತೆಗಿನ ಸಂಬಂಧ ಕುರಿತು ಏನನ್ನೂ ಹೇಳಲಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.ಪುನಃ ಗುತ್ತಿಗೆದಾರರ ವಿಚಾರಣೆಗೆ ನಡೆಸಲು ಎಸಿಬಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಜ.4ರಂದು ಮೋಹನ್ ಚೀಲದಲ್ಲಿ ಹಣ ಕೊಂಡೊಯ್ಯುವಾಗ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.