ADVERTISEMENT

ಜಮೀರ್‌ಗೆ ಎಸಿಬಿ ನೋಟಿಸ್: ದಾಖಲೆಗಳೊಂದಿಗೆ 10 ದಿನಗಳಲ್ಲಿ ವಿಚಾರಣೆಗೆ ಬರಲು ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 15:32 IST
Last Updated 16 ಜುಲೈ 2022, 15:32 IST
ಜಮೀರ್‌ ಅಹಮ್ಮದ್ ಖಾನ್‌
ಜಮೀರ್‌ ಅಹಮ್ಮದ್ ಖಾನ್‌   

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದಲ್ಲಿ ಸೂಕ್ತ ದಾಖಲೆಗಳೊಂದಿಗೆ ಹತ್ತು ದಿನಗಳೊಳಗೆ ವಿಚಾರಣೆಗೆ ಹಾಜರಾಗುವಂತೆ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಿ.ಝೆಡ್‌. ಜಮೀರ್‌ ಅಹಮ್ಮದ್ ಖಾನ್‌ ಅವರಿಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶನಿವಾರ ನೋಟಿಸ್‌ ಜಾರಿ ಮಾಡಿದೆ.

ಜಾರಿ ನಿರ್ದೇಶನಾಲಯ (ಇ.ಡಿ) ರವಾನಿಸಿದ್ದ ವರದಿ ಆಧರಿಸಿ ಜಮೀರ್‌ ಅಹಮ್ಮದ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಎಸಿಬಿ, ಜುಲೈ 5ರಂದು ಶಾಸಕರ ಮನೆ, ಕಚೇರಿಗಳ ಮೇಲೆ ದಾಳಿಮಾಡಿತ್ತು. ಅಧಿಕೃತ ಆದಾಯಕ್ಕೆ ಹೋಲಿಸಿದರೆ ಜಮೀರ್‌ ಅವರು ₹ 87.34 ಕೋಟಿ ಮೌಲ್ಯದ ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಆರೋಪ ಎಫ್‌ಐಆರ್‌ನಲ್ಲಿದೆ. ಈ ಸಂಬಂಧ ದಾಖಲೆಗಳ ಪರಿಶೀಲನೆಗಾಗಿ ತನಿಖಾ ಸಂಸ್ಥೆ ಶೋಧ ನಡೆಸಿತ್ತು.

‘ಇ.ಡಿ ವರದಿಯಲ್ಲಿರುವ ಅಂಶಗಳು, ನಗರದ ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದ ಬಳಿ ಶಾಸಕರು ಬಂಗಲೆ ನಿರ್ಮಾಣಕ್ಕೆ ಮಾಡಿರುವ ವೆಚ್ಚ, ವರಮಾನದ ಮೂಲಗಳು ಸೇರಿದಂತೆ ಹಲವು ಅಂಶಗಳ ಕುರಿತು ವಿಚಾರಣೆ ನಡೆಸಲು ತನಿಖಾ ತಂಡ ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ಶಾಸಕರಿಗೆ ಶನಿವಾರ ಲಿಖಿತ ನೋಟಿಸ್‌ ಜಾರಿಮಾಡಲಾಗಿದೆ. ಹತ್ತು ದಿನಗಳೊಳಗೆ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.