ADVERTISEMENT

ಐವರು ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಶ್ರೀಧರ್‌ ಮತ್ತೆ ಗುರಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2018, 18:17 IST
Last Updated 28 ಡಿಸೆಂಬರ್ 2018, 18:17 IST
ಎಸಿಬಿ ಲಾಂಛನ
ಎಸಿಬಿ ಲಾಂಛನ   

ಬೆಂಗಳೂರು: ಸಹಕಾರ ಸಂಘಗಳ ರಿಜಿಸ್ಟ್ರಾರ್‌ ಕಚೇರಿಯ ಹೆಚ್ಚುವರಿ ರಿಜಿಸ್ಟ್ರಾರ್‌ ಆರ್‌. ಶ್ರೀಧರ್‌ ಸೇರಿದಂತೆ ವಿವಿಧ ಇಲಾಖೆಗಳ ಐವರು ಅಧಿಕಾರಿಗಳ ಮನೆ, ಕಚೇರಿ ಮತ್ತು ಸಂಬಂಧಿಕರ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ಶುಕ್ರವಾರ ಬೆಳಗಿನ ಜಾವ ದಾಳಿ ನಡೆಸಿದ್ದಾರೆ.

ಕೃಷಿ ಇಲಾಖೆ ದಾವಣಗೆರೆ ಉಪ ನಿರ್ದೇಶಕಿ ಹಂಸವೇಣಿ,ಬಿಬಿಎಂಪಿ ನಗರ ಯೋಜನೆ ಸಹಾಯಕ ನಿರ್ದೇಶಕ ಬೀಸೆಟ್ಟಪ್ಪ, ಸರ್ಕಾರಿ ಶಿಕ್ಷಕರ ಶಿಕ್ಷಣ ಕಾಲೇಜು, ಮಂಗಳೂರಿನ ಅಧ್ಯಾಪಕ ಡಿ. ಮಂಜುನಾಥ್‌ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಕಿರಿಯ ಎಂಜಿನಿಯರ್‌ ಕೆ. ಮಣಿ ಅವರ ಮನೆ ಹಾಗೂ ಕಚೇರಿ ಒಳಗೊಂಡಂತೆ 17 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ಆಸ್ತಿಪಾಸ್ತಿ ಕಾಗದಪತ್ರಗಳು ಹಾಗೂ ಬೇನಾಮಿ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು ಪರಿಶೀಲನೆ ನಡೆಯುತ್ತಿದೆ.

ADVERTISEMENT

ಶ್ರೀಧರ್‌, ನವೆಂಬರ್‌ ಮೊದಲ ವಾರ ಇಲ್ಲಿನ ಭಾರತಿ ಸಹಕಾರ ಸಂಘವನ್ನು ನೋಂದಣಿ ಮಾಡಿ, ಷೇರು ಸಂಗ್ರಹ ಪತ್ರ ವಿತರಿಸಲು ₹ 5.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡವಾಗಿ ₹ 50 ಸಾವಿರ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ಬಂಧಿಸಿ, ಬಳಿಕ ಬಿಡುಗಡೆ ಮಾಡಿದ್ದರು. ಈಗ ಪುನಃ ಮನೆ ಹಾಗೂ ಕಚೇರಿ ಹಾಗೂ ಚಿಂತಾಮಣಿಯಲ್ಲಿರುವ ಇವರ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.