ADVERTISEMENT

ಎಸ್‌.ಮೂರ್ತಿ ಮನೆ, ತೋಟದ ಮೇಲೆ ಎಸಿಬಿ ದಾಳಿ

ಅಕ್ರಮ ಆಸ್ತಿ ಗಳಿಕೆ ಆರೋಪ: ಕೋಟ್ಯಂತರ ಮೌಲ್ಯದ ಆಸ್ತಿ- ಪಾಸ್ತಿ ಪತ್ತೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 19:45 IST
Last Updated 3 ಅಕ್ಟೋಬರ್ 2019, 19:45 IST
ಎಸಿಬಿ ದಾಳಿ
ಎಸಿಬಿ ದಾಳಿ   

ಬೆಂಗಳೂರು: ವಿಧಾನಸಭೆ ಕಾರ್ಯದರ್ಶಿ ಹುದ್ದೆಯಿಂದ ಅಮಾನತುಗೊಂಡಿರುವ ಎಸ್. ಮೂರ್ತಿ ಮತ್ತು ಇಬ್ಬರು ಅಧಿಕಾರಿಗಳ ಮನೆಗಳು ಸೇರಿ ಒಟ್ಟು 16 ಕಡೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿ ಕೋಟ್ಯಂತರ ಮೌಲ್ಯದ ಆಸ್ತಿ- ಪಾಸ್ತಿ ಪತ್ತೆ ಹಚ್ಚಿದೆ.

‘ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಈ ದಾಳಿ ನಡೆದಿದೆ. ಶೋಧಕಾರ್ಯದ ಜೊತೆಗೆ ಈ ಅಧಿಕಾರಿಗಳು ಹೊಂದಿರುವ ಆಸ್ತಿ–ಪಾಸ್ತಿಗಳ ಮೂಲದ ಬಗ್ಗೆಯೂ ತನಿಖೆ ಮುಂದುವರಿದಿದೆ’ ಎಂದು ಎಸಿಬಿ ಮೂಲಗಳು ಹೇಳಿವೆ.

ಎಸ್. ಮೂರ್ತಿ ಅವರ ಸದಾಶಿವನಗರದಲ್ಲಿರುವ ಮನೆ, ಜಾಲಹಳ್ಳಿ ಕ್ರಾಸ್‌ನ ಎಚ್.ಎಂ.ಟಿ ಕಾಲೊನಿಯಲ್ಲಿರುವ ಮನೆ, ಆರ್.ಟಿ. ನಗರದ ಓಂ ಶಕ್ತಿ ಅಪಾರ್ಟ್‌ಮೆಂಟ್‌ನಲ್ಲಿರುವ ಎರಡು ಫ್ಲ್ಯಾಟ್, ಕೊಡಗು ಜಿಲ್ಲೆಯ ಕೆ. ನಿಡುಗಣಿ ಗ್ರಾಮದ ಕಾಫಿ ತೋಟದ ಮನೆ ಮೇಲೆ ದಾಳಿ ನಡೆದಿದೆ.

ADVERTISEMENT

ಬೆಂಗಳೂರು, ಕೊಡಗು ಸೇರಿದಂತೆ, ಅನೇಕ ಕಡೆ ಮೂರ್ತಿ ಆಸ್ತಿ ಸಂಪಾದಿಸಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿದ್ದ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ನಗದು, ಚಿನ್ನಾಭರಣ, ಐಷಾರಾಮಿ ವಸ್ತುಗಳು, ಆಸ್ತಿ-ಪಾಸ್ತಿಗಳ ದಾಖಲೆ ಪತ್ರ‌ ವಶಪಡಿಸಿಕೊಂಡಿದ್ದಾರೆ.

‘ಒಂದೂವರೆ ವರ್ಷದ ಹಿಂದೆ ಮೂರ್ತಿ ಕೊಡಗಿನಲ್ಲಿ 12 ಎಕರೆ ಭೂಮಿ ಖರೀದಿಸಿದ್ದಾರೆ. ಅದರಿಂದ ಒಂದು ಕೋಟಿ ಆದಾಯ ಬಂದಿದೆ ಎಂದು ಮೂರ್ತಿ ಹೇಳಿಕೆ ನೀಡಿದ್ದಾರೆ. ಆದರೆ, ಆ ಭೂಮಿ ಕಾಡು ಪ್ರದೇಶವಾಗಿದ್ದು, ಅಲ್ಲಿ ಏನನ್ನೂ ಬೆಳೆದಿಲ್ಲ’ ಎಂದೂ ಮೂಲಗಳು ಹೇಳಿವೆ.

ವಿಧಾನಸಭೆ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಸಂದರ್ಭದಲ್ಲಿ ನಡೆದ ಬೆಳಗಾವಿ ಅಧಿವೇಶನದಲ್ಲಿ ₹10 ಕೋಟಿ ಹಣ ದುರ್ಬಳಕೆ ಮಾಡಿರುವ ಆರೋಪವನ್ನು ಮೂರ್ತಿ ಹೊತ್ತಿದ್ದಾರೆ. ಅಲ್ಲದೆ, ಅದೇ ಅವಧಿಯಲ್ಲಿ ವಿಧಾನಸಭಾ ಸಚಿವಾಲಯಕ್ಕೆ ನಡೆದ ನೇಮಕಾತಿಯಲ್ಲೂ ಅಕ್ರಮ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.