ADVERTISEMENT

ಬಿಬಿಎಂಪಿ: ನೂರಾರು ಕೋಟಿ ಅಕ್ರಮ ಪತ್ತೆ | 27 ಕಚೇರಿಗಳಲ್ಲಿ ಏಕಕಾಲಕ್ಕೆ ಶೋಧ

45 ಕಡತಗಳು ತನಿಖಾ ತಂಡದ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2022, 16:18 IST
Last Updated 25 ಫೆಬ್ರುವರಿ 2022, 16:18 IST
ಬಿಬಿಎಂಪಿ ಕಚೇರಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶುಕ್ರವಾರ ಶೋಧ ನಡೆಸುತ್ತಿರುವುದು– ಪ್ರಜಾವಾಣಿ ಚಿತ್ರ
ಬಿಬಿಎಂಪಿ ಕಚೇರಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶುಕ್ರವಾರ ಶೋಧ ನಡೆಸುತ್ತಿರುವುದು– ಪ್ರಜಾವಾಣಿ ಚಿತ್ರ   

ಬೆಂಗಳೂರು: ಅಧಿಕಾರ ದುರ್ಬಳಕೆ, ಭ್ರಷ್ಟಾಚಾರ ಮತ್ತು ಅವ್ಯವಹಾರಗಳ ಆರೋಪದ ಮೇಲೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) 27 ಕಚೇರಿಗಳಲ್ಲಿ ಶುಕ್ರವಾರ ಶೋಧ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ನೂರಾರು ಕೋಟಿ ರೂಪಾಯಿ ಮೊತ್ತದ ಅಕ್ರಮಗಳನ್ನು ಪತ್ತೆಮಾಡಿದೆ.

ಬಿಬಿಎಂಪಿ ಕಚೇರಿಗಳಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿರುವ ಕುರಿತು ತನಿಖಾ ಸಂಸ್ಥೆಗೆ ದೂರುಗಳು ಬಂದಿದ್ದವು. ಈ ಸಂಬಂಧ ಪ್ರಾಥಮಿಕ ತನಿಖೆ ನಡೆಸಲಾಗಿತ್ತು. ದೂರಿನಲ್ಲಿರುವ ಆರೋಪಗಳು ಮೇಲ್ನೋಟಕ್ಕೆ ಸತ್ಯ ಎಂಬುದಕ್ಕೆ ಸಾಕ್ಷ್ಯಗಳು ಲಭಿಸಿದ್ದವು. ಅದನ್ನು ಆಧರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿರುವ ಎಸಿಬಿ, ಶುಕ್ರವಾರ ಬೆಳಿಗ್ಗೆಯಿಂದ ಸಂಜೆಯವರೆಗೂ 11 ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ನಡೆಸಿತು.

‘ಪಾಲಿಕೆಯ ಜಾಹೀರಾತು ವಿಭಾಗ, ಕಂದಾಯ ವಿಭಾಗ, ವರ್ಗಾವಣೆ ಮಾಡಬಹುದಾದ ಆಸ್ತಿ ಹಕ್ಕು (ಟಿಡಿಆರ್‌) ವಿಭಾಗ, ನಗರ ಯೋಜನಾ ವಿಭಾಗ ಮತ್ತು ಕಾಮಗಾರಿಗಳ ವಿಭಾಗಗಳಲ್ಲಿ ಭಾರಿ ಪ್ರಮಾಣದ ಅಕ್ರಮಗಳು ಕಂಡುಬಂದಿವೆ. ಹೆಚ್ಚಿನ ತನಿಖೆಗಾಗಿ 45 ಕಡತಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಎಸಿಬಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ನಗರದ ವ್ಯಾಪ್ತಿಯಲ್ಲಿ ಜಾಹೀರಾತು ಪ್ರದರ್ಶಿಸುವವರಿಂದ ವಾರ್ಷಿಕ ಗುತ್ತಿಗೆ ಮೊತ್ತ, ಸರಕು ಮತ್ತು ಸೇವಾ ತೆರಿಗೆ ವಸೂಲಿಯಲ್ಲಿ ಅಕ್ರಮ ನಡೆಯುತ್ತಿರುವುದು ಪತ್ತೆಯಾಗಿದೆ. ಜಾಹೀರಾತು ವಿಭಾಗಕ್ಕೆ ಬರಬೇಕಿರುವ ₹ 230 ಕೋಟಿ ಬಾಕಿ ವಸೂಲಿ ಮಾಡಲು ಕ್ರಮಗಳನ್ನು ಕೈಗೊಂಡಿಲ್ಲ. ಒಂದು ವರ್ಷದಿಂದ ಬಸ್‌ ನಿಲ್ದಾಣಗಳಲ್ಲಿ ಜಾಹೀರಾತು ಅಳವಡಿಸಲು ಟೆಂಡರ್‌ ಪ್ರಕ್ರಿಯೆ ನಡೆಸದೇ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿರುವುದು ಕಂಡುಬಂದಿದೆ ಎಂದು ತನಿಖಾ ತಂಡ ಮಾಹಿತಿ ನೀಡಿದೆ.

ಸಂಬಂಧಿಕರ ಕಂಪನಿಗೆ ಟಿಡಿಆರ್‌:

ಆದೂರು, ರಾಮಪುರ, ಸೀಗೇಹಳ್ಳಿ, ವೈಟ್‌ಫೀಲ್ಡ್‌, ವಾರಣಾಸಿ ಮತ್ತಿತರ ಕಡೆಗಳಲ್ಲಿ ಟಿಡಿಆರ್‌ ವಿಭಾಗದಲ್ಲಿ ಭಾರಿ ಅಕ್ರಮ ನಡೆದಿರುವುದು ಪತ್ತೆಯಾಗಿದೆ. ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ಭೂಮಾಲೀಕರು ಹಾಗೂ ಮಧ್ಯವರ್ತಿಗಳ ಜತೆ ಸೇರಿ ಅಕ್ರಮ ಎಸಗಿದ್ದಾರೆ. ಕೆಲವೆಡೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಂಬಂಧಿಕರ ಕಂಪನಿಗಳ ಹೆಸರಿಗೆ ಅಕ್ರಮವಾಗಿ ಟಿಡಿಆರ್‌ ನೀಡಿರುವುದಕ್ಕೆ ದಾಖಲೆಗಳು ಲಭಿಸಿವೆ’ ಎಂದು ಎಸಿಬಿ ತಿಳಿಸಿದೆ.

ಅಕ್ರಮವಾಗಿ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ನಗರ ಯೋಜನಾ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಬಿಲ್ಡರ್‌ಗಳಿಗೆ ಸಹಕಾರ ನೀಡಿರುವುದನ್ನು ಎಸಿಬಿ ಬಯಲಿಗೆಳೆದಿದೆ. ಅಕ್ರಮಗಳ ಬಗ್ಗೆ ಮಾಹಿತಿ ಇದ್ದರೂ, ಯಾವುದೇ ಕ್ರಮ ಕೈಗೊಳ್ಳದಿರುವುದು ಕಂಡುಬಂದಿದೆ. ಕೆಲವು ಪ್ರಕರಣಗಳಲ್ಲಿ ಕಾನೂನಿಗೆ ವಿರುದ್ಧವಾಗಿ ಕಟ್ಟಡ ನಿರ್ಮಾಣಕ್ಕೆ ಅನುಮತಿ, ಸ್ವಾಧೀನ ಪ್ರಮಾಣ ಪತ್ರ ವಿತರಿಸಿರುವುದಕ್ಕೆ ಸಂಬಂಧಿಸಿದ ಕಡತಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.

ಒಂದೇ ಕೆಲಸಕ್ಕೆ ಎರಡು ಬಿಲ್‌: ಬಿಬಿಎಂಪಿಯಲ್ಲಿ ಕಾಮಗಾರಿ ನಡೆಸುತ್ತಿರುವ ವಿವಿಧ ವಿಭಾಗಗಳ ಕಚೇರಿಗಳಲ್ಲಿ 200 ಕಡತಗಳನ್ನು ಎಸಿಬಿ ತಂಡ ಪರಿಶೀಲಿಸಿದೆ. ಈ ಪೈಕಿ ಕೆಲವು ಪ್ರಕರಣಗಳಲ್ಲಿ ಒಂದೇ ಕೆಲಸಕ್ಕೆ ಎರಡು ಬಾರಿ ಬಿಲ್‌ ನೀಡಿರುವುದು ಕಂಡುಬಂದಿದೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಸೇರಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಹಣ ಪಡೆದಿರುವುದು ಪತ್ತೆಯಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ತೆರಿಗೆ ವಸೂಲಿಯಲ್ಲೂ ಅಕ್ರಮ

ಪಾಲಿಕೆ ವ್ಯಾಪ್ತಿಯ ಆಸ್ತಿಗಳ ಮಾಲೀಕರಿಂದ ಆಸ್ತಿ ತೆರಿಗೆ ವಸೂಲಿ ಮಾಡುವುದರಲ್ಲಿ ಅಧಿಕಾರಿಗಳು, ಸಿಬ್ಬಂದಿ ಅಕ್ರಮ ಎಸಗಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಒಂದು ಖಾಸಗಿ ಆಸ್ಪತ್ರೆ ಮತ್ತು ಎರಡು ಮಾಲ್‌ಗಳಿಂದ ಕೋಟ್ಯಂತರ ರೂಪಾಯಿ ತೆರಿಗೆ ಸಂಗ್ರಹಿಸದೇ ನಷ್ಟ ಉಂಟುಮಾಡಿರುವುದು ಕಂಡುಬಂದಿದೆ ಎಂದು ಎಸಿಬಿ ಹೇಳಿದೆ.

ಕಾರ್ಯಾಚರಣೆಗೆ 200 ಮಂದಿ

ಎಸಿಬಿ ಬೆಂಗಳೂರು ನಗರ ಎಸ್‌ಪಿ ಜಿ.ಎಚ್‌. ಯತೀಶ್‌ಚಂದ್ರ, ಕೇಂದ್ರ ವಲಯ ಎಸ್‌ಪಿ ಕಲಾ ಕೃಷ್ಣಸ್ವಾಮಿ ಮತ್ತು ಕೇಂದ್ರ ಸ್ಥಾನ ಎಸ್‌ಪಿ ಉಮಾ ಪ್ರಶಾಂತ್‌ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಡಿವೈಎಸ್‌ಪಿಗಳು, ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 200 ಅಧಿಕಾರಿಗಳು, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.