ADVERTISEMENT

3 ಸಾವು: ಪೊಲೀಸ್‌ ಜೀಪ್‌ಗೆ ಬೆಂಕಿ

ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬಸ್‌ಗೆ ಡಿಕ್ಕಿ ಹೊಡೆದ ಟಂಟಂ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 18:40 IST
Last Updated 2 ಅಕ್ಟೋಬರ್ 2019, 18:40 IST
ಕೊರ್ತಿ ಕೊಲ್ಹಾರ ಸೇತುವೆ ಬಳಿ ಉದ್ರಿಕ್ತರು ಬುಧವಾರ ಬೆಂಕಿ ಇಟ್ಟ ಕಾರಣ ಪೊಲೀಸ್ ವಾಹನ ಹೊತ್ತಿ ಉರಿಯಿತು
ಕೊರ್ತಿ ಕೊಲ್ಹಾರ ಸೇತುವೆ ಬಳಿ ಉದ್ರಿಕ್ತರು ಬುಧವಾರ ಬೆಂಕಿ ಇಟ್ಟ ಕಾರಣ ಪೊಲೀಸ್ ವಾಹನ ಹೊತ್ತಿ ಉರಿಯಿತು   

ಕೊಲ್ಹಾರ (ವಿಜಯಪುರ): ಪಟ್ಟಣ ಸಮೀಪದ ಕೊರ್ತಿ ಕೊಲ್ಹಾರ ಸೇತುವೆ ಬಳಿ ಬುಧವಾರ ವಾಹನಗಳ ತಪಾಸಣೆ ನಡೆಸುತ್ತಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಟಂಟಂ ವಾಹನವು ಎದುರಿನಿಂದ ಬರುತ್ತಿದ್ದ ಸರ್ಕಾರಿ ಬಸ್‌ಗೆ ಡಿಕ್ಕಿ ಹೊಡೆದಿದ್ದು, ಟಂಟಂನಲ್ಲಿದ್ದ ಬಾಲಕಿ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಜನರು ಪಿಎಸ್‌ಐ ಮೇಲೆ ಕೈಮಾಡಿ, ಅವರ ಜೀಪ್‌ ಸುಟ್ಟುಹಾಕಿದ್ದಾರೆ.

ಮೃತರು ಬಾಗಲಕೋಟೆ ಜಿಲ್ಲೆಯವರು. ಟಂಟಂನಲ್ಲಿದ್ದ ಏಳು ಜನರಿಗೆ ಗಾಯಗಳಾಗಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಕೊಲ್ಹಾರದಲ್ಲಿ ವಾರದ ಸಂತೆ ಮುಗಿಸಿಕೊಂಡು ಹಿಂದಿರುಗುತ್ತಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಮೃತರ ಕಡೆಯ ಉದ್ರಿಕ್ತರು ಕೊಲ್ಹಾರ ಸಬ್‌ ಇನ್‌ಸ್ಪೆಕ್ಟರ್ ಅನಿಲ ಕುಂಬಾರ ಅವರನ್ನು ಜಗ್ಗಾಡಿ, ಏರುದನಿಯಲ್ಲಿ ತರಾಟೆಗೆ ತೆಗೆದುಕೊಂಡರು. ನಂತರ ಅವರ ವಾಹನವನ್ನು ಸುಟ್ಟು ಹಾಕಿದರು. ಇದಾದ ಬಳಿಕ ನಾಲ್ಕು ಪೊಲೀಸ್‌ ವಾಹನ, ಸಾರಿಗೆ ಬಸ್‌ ಹಾಗೂ ಖಾಸಗಿ ಕಾರಿನ ಗಾಜುಗಳನ್ನು ಜಖಂಗೊಳಿಸಿದರು. ಇದರಿಂದಾಗಿ ಸ್ಥಳದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಈ ಕುರಿತು ಮಾಧ್ಯಮಗಳಿಗ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ, ‘ಪೊಲೀಸರು ವಾಹನಗಳ ತಪಾಸಣೆ ಮಾಡುವಾಗ ತಪ್ಪಿಸಿಕೊಳ್ಳಲು ಹೋಗಿ ಅಪಘಾತ ಸಂಭವಿಸಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುವುದು’ ಎಂದರು.

ADVERTISEMENT

ಘಟನೆ ಸಂಬಂಧ ನಾಲ್ವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.