ADVERTISEMENT

ಸಚಿವನ ಮಗನಿಂದ ಅಪಘಾತ ಆರೋಪ: ಪ್ರತ್ಯದರ್ಶಿಗಳ ವಿಚಾರಣೆಗೆ ಪೊಲೀಸರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 14:34 IST
Last Updated 18 ಫೆಬ್ರುವರಿ 2020, 14:34 IST
   

ಹೊಸಪೇಟೆ: ರಾಜ್ಯದ ಪ್ರಭಾವಿ ಸಚಿವರ ಮಗ ಅತಿ ವೇಗ, ಅಜಾಗರೂಕತೆಯಿಂದ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣವಾಗಿದ್ದಾರೆ ಎನ್ನಲಾದ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಬಳ್ಳಾರಿ ಜಿಲ್ಲಾ ಪೊಲೀಸರು, ಘಟನಾ ಸ್ಥಳದಲ್ಲಿನ ಪ್ರತ್ಯದರ್ಶಿಗಳ ವಿಚಾರಣೆಗೆ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ತಾಲ್ಲೂಕಿನ ಮರಿಯಮ್ಮನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಫೆ. 10ರಂದು ಮಧ್ಯಾಹ್ನ ಅಪಘಾತ ಸಂಭವಿಸಿತ್ತು. ಘಟನಾ ಸ್ಥಳಲ್ಲಿರುವ ಪೆಟ್ರೋಲ್‌ ಬಂಕ್‌, ಡಾಬಾ, ಚಹಾದಂಗಡಿ, ಪಂಕ್ಚರ್‌ ಶಾಪ್‌ನವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿ, ಮಾಹಿತಿ ಕಲೆ ಹಾಕುವರು.

ಈ ಸಂಬಂಧ ಈಗಾಗಲೇ ಕೆಲವರಿಗೆ ಮೌಖಿಕವಾಗಿ ಪೊಲೀಸರು ಸೂಚನೆ ಸಹ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಪೆಟ್ರೋಲ್‌ ಬಂಕ್‌, ಡಾಬಾ, ಚಹಾದಂಗಡಿ, ಪಂಕ್ಚರ್‌ ಶಾಪ್‌ನವರನ್ನು ‘ಪ್ರಜಾವಾಣಿ’ ವಿಚಾರಿಸಿದಾಗ ಮಾಹಿತಿ ಹಂಚಿಕೊಳ್ಳಲು ಅವರು ನಿರಾಕರಿಸಿದರು.

ADVERTISEMENT

ಅಪಘಾತದಲ್ಲಿ ರಸ್ತೆ ಬದಿ ನಿಂತಿದ್ದ ಮರಿಯಮ್ಮನಹಳ್ಳಿ ತಾಂಡಾದ ರವಿ ನಾಯ್ಕ (16) ಮೃತಪಟ್ಟಿದ್ದರು. ಕಾರಿನಲ್ಲಿದ್ದ ಸಚಿನ್‌ (27) ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದರು. ಚಾಲಕ ರಾಹುಲ್‌, ಶಿವಕುಮಾರ, ರಾಕೇಶ್‌ ಹಾಗೂ ವರುಣ್‌ ಗಾಯಗೊಂಡಿದ್ದರು. ಸಚಿವರ ಮಗನೇ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣವಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.