ADVERTISEMENT

ಆಂಬುಲೆನ್ಸ್‌ಗೆ ದಾರಿ ಮಾಡಿಕೊಡುತ್ತಿದ್ದ ಕಾನ್‌ಸ್ಟೆಬಲ್‌ಗೆ ಕಾರು ಡಿಕ್ಕಿ

ದಾರಿ ನೀಡದೆ ಅತಿ ವೇಗದಿಂದ ಕಾರು ಚಲಾಯಿಸಿದ್ದರಿಂದ ಅಪಘಾತ: ಆರೋಪ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 5:33 IST
Last Updated 29 ಅಕ್ಟೋಬರ್ 2019, 5:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಆಂಬುಲೆನ್ಸ್‌ಗೆ ದಾರಿ ಮಾಡಿಕೊಡುತ್ತಿದ್ದ ವೇಳೆಯಲ್ಲೇ ಕಾರೊಂದು ಡಿಕ್ಕಿ ಹೊಡೆದಿದ್ದರಿಂದ ಮಲ್ಲೇಶ್ವರ ಸಂಚಾರ ಠಾಣೆ ಕಾನ್‌ಸ್ಟೆಬಲ್ ಸಲ್ಮಾ ರಾಜೇಸಾಬ್ ಮುಲ್ಲಾ ಎಂಬುವರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ವರಲಕ್ಷ್ಮಿ ನರ್ಸೀಂಗ್ ಹೋಮ್‌ಗೆ ದಾಖಲಿಸಲಾಗಿದೆ.

ಎಂ.ಕೆ.ಕೆ ರಸ್ತೆಯಲ್ಲಿ ಭಾನುವಾರ ಸಂಜೆ ಈ ಅವಘಡ ಸಂಭವಿಸಿದೆ. ಆಂಬುಲೆನ್ಸ್‌ಗೆ ದಾರಿ ನೀಡದೆ ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ಅಪಘಾತಕ್ಕೆ ಕಾರಣವಾದ ಆರೋಪದಡಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

‘ಭಾನುವಾರ ಮಧ್ಯಾಹ್ನ ಕರ್ತವ್ಯಕ್ಕೆ ಹಾಜರಾಗಿದ್ದ ಸಲ್ಮಾ ಎಂಕೆಕೆ ರಸ್ತೆಯಲ್ಲಿ ಕೆಲಸ ಮಾಡುತ್ತಿದ್ದರು. ಸಂಜೆ 5.50ರ ಸುಮಾರಿಗೆ ವಾಹನಗಳ ದಟ್ಟಣೆ ಹೆಚ್ಚಿತ್ತು. ಅದೇ ಸಂದರ್ಭದಲ್ಲಿ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ದಟ್ಟಣೆಯಲ್ಲಿ ಸಿಲುಕಿತ್ತು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಆಂಬುಲೆನ್ಸ್‌ಗೆ ದಾರಿ ಮಾಡಿಕೊಡಲು ಮುಂದಾಗಿದ್ದ ಸಲ್ಮಾ, ಇತರೆ ವಾಹನಗಳನ್ನು ತಡೆದು ನಿಲ್ಲಿಸಿದ್ದರು. ಅದೇ ವೇಳೆ ಆಂಬುಲೆನ್ಸ್‌ಗೆ ಅಡ್ಡವಾಗಿ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿಕೊಂಡು ಬಂದಿದ್ದ ಚಾಲಕ, ಕಾನ್‌ಸ್ಟೆಬಲ್‌ ಸಲ್ಮಾ ಅವರಿಗೆ ಡಿಕ್ಕಿ ಹೊಡೆಸಿದ್ದ. ತೀವ್ರ ಗಾಯಗೊಂಡಿದ್ದ ಸಲ್ಮಾ ಅವರನ್ನು ಸಮೀಪದಲ್ಲೇ ಇದ್ದ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದು ಅವರು ತಿಳಿಸಿದರು.

ಕಾರು ಚಾಲಕ ಸಾವು: ಎಂಟನೇ ಮೈಲಿ ಸಮೀಪದ ಮೇಲ್ಸೇತುವೆಯಲ್ಲಿ ಭಾನುವಾರ ಸರಣಿ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಕೆ.ಎಸ್. ರಾಜಶೇಖರ್ (68) ಎಂಬುವರು ಮೃತಪಟ್ಟಿದ್ದಾರೆ.

‘ಬೆಳಿಗ್ಗೆ 10.40ರ ಸುಮಾರಿಗೆ ಮೇಲ್ಸೇತುವೆಯಲ್ಲೇ ಕ್ಯಾಂಟರೊಂದು ಕೆಟ್ಟು ನಿಂತಿತ್ತು. ವೇಗವಾಗಿ ಬಂದ ಕಾರೊಂದು ಕ್ಯಾಂಟರ್‌ಗೆ ಡಿಕ್ಕಿ ಹೊಡೆದು ಎದುರಿಗೆ ಬರುತ್ತಿದ್ದ ಮತ್ತೊಂದು ಕಾರಿಗೆ ಗುದ್ದಿತ್ತು. ಅಪಘಾತದಲ್ಲಿ ಕ್ಯಾಂಟರ್‌ ಕ್ಲೀನರ್ ಬಾಲರಾಜು ಹಾಗೂ ಕಾರಿನಲ್ಲಿದ್ದ ರಾಜಶೇಖರ್ ತೀವ್ರವಾಗಿ ಗಾಯಗೊಂಡಿದ್ದರು. ಅವರಿಬ್ಬರನ್ನು ಸ್ಪರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ರಾಜಶೇಖರ್ ಅಸುನೀಗಿದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.