ADVERTISEMENT

ಇ.ಡಿಯನ್ನು ದುರ್ಬಳಕೆ ಮಾಡಿದ ಆರೋಪ: ಕಟೀಲ್ ಅರ್ಜಿ ತೀರ್ಪು ಕಾಯ್ದಿರಿಸಿದ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 16:23 IST
Last Updated 20 ನವೆಂಬರ್ 2024, 16:23 IST
<div class="paragraphs"><p>ನಳಿನ್ ಕುಮಾರ್ ಕಟೀಲ್</p></div>

ನಳಿನ್ ಕುಮಾರ್ ಕಟೀಲ್

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಚುನಾವಣಾ ಬಾಂಡ್‌ಗಳ ಮೂಲಕ ಬಹುಕೋಟಿ ದೇಣಿಗೆ ಪಡೆಯಲು ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಂಡ ಆರೋಪದಡಿ ದಾಖಲಿಸಿರುವ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್‌, ತೀರ್ಪು ಕಾಯ್ದಿರಿಸಿದೆ.

ADVERTISEMENT

ಈ ಸಂಬಂಧ ನಳಿನ್ ಕುಮಾರ್‌ ಕಟೀಲ್‌ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿರುವುದಾಗಿ ತಿಳಿಸಿದರು. ಅಂತೆಯೇ, ‘ತನಿಖೆಗೆ ಈಗಾಗಲೇ ನೀಡಲಾಗಿರುವ ಮಧ್ಯಂತರ ತಡೆ, ಅಂತಿಮ ತೀರ್ಪು ಪ್ರಕಟಿಸುವವರೆಗೆ ಚಾಲ್ತಿಯಲ್ಲಿರಲಿದೆ’ ಎಂದು ಆದೇಶಿಸಿದರು.

ಕಟೀಲ್‌ ಪರ ಹಿರಿಯ ವಕೀಲ ಕೆ.ಜಿ.ರಾಘವನ್‌ ಮತ್ತು ಫಿರ್ಯಾದುದಾರ ಅಯ್ಯರ್‌ ಪರ ಸುಪ್ರೀಂ ಕೋರ್ಟ್‌ ವಕೀಲ ಪ್ರಶಾಂತ್‌ ಭೂಷಣ್‌ ವಾದ ಮಂಡಿಸಿದ್ದರು.

‘ಚುನಾವಣಾ ಬಾಂಡ್‌ಗಳ ಮೂಲಕ ಬಹುಕೋಟಿ ದೇಣಿಗೆ ಪಡೆಯಲು ಬಿಜೆಪಿಯ ರಾಷ್ಟ್ರ ಮತ್ತು ರಾಜ್ಯ ಘಟಕಗಳು ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಂಡಿವೆ’ ಎಂದು ಆರೋಪಿಸಿ, ‘ಜನಾಧಿಕಾರ ಸಂಘರ್ಷ ಪರಿಷತ್‌’ ಸಹ ಅಧ್ಯಕ್ಷ ಆದರ್ಶ್‌ ಆರ್‌.ಐಯ್ಯರ್‌ ಖಾಸಗಿ ದೂರು ದಾಖಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ, ಜನಪ್ರತಿನಿಧಿಗಳ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್‌.ಶಿವಕುಮಾರ್‌ ಎಫ್‌ಐಆರ್ ದಾಖಲಿಸಲು ನಿರ್ದೇಶಿಸಿದ್ದರು.

ದೂರಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಂಸದ ಹಾಗೂ ರಾಜ್ಯ ಘಟಕದ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.