ADVERTISEMENT

ಜಮೀನು ಸ್ವಾಧೀನ ಪ್ರಕ್ರಿಯೆ ವಿಳಂಬ ಸಲ್ಲ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 31 ಜನವರಿ 2024, 15:49 IST
Last Updated 31 ಜನವರಿ 2024, 15:49 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಅಭಿವೃದ್ಧಿ ನಿಟ್ಟಿನಲ್ಲಿನ ಜಮೀನು ಸ್ವಾಧೀನ ಪ್ರಕ್ರಿಯೆಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸದೇ ಇರುವುದು; ಪ್ರಾಥಮಿಕ ಅಧಿಸೂಚನೆಯಲ್ಲಿ ಗುರುತಿಸಲಾದ ಜಮೀನಿನ ಮಾಲೀಕರಿಗೆ ಸಾಕಷ್ಟು ಅನಾನುಕೂಲತೆ ಉಂಟು ಮಾಡುತ್ತದೆ. ಹೀಗಾಗಿ, ಅಗತ್ಯವಿಲ್ಲ ಎಂದಾದ ಜಮೀನುಗಳನ್ನು ಅಧಿಸೂಚನೆ ವ್ಯಾಪ್ತಿಗೆ ತರದಂತೆ ನೋಡಿಕೊಳ್ಳಬೇಕು’ ಎಂದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಹೈಕೋರ್ಟ್ ಸೂಚಿಸಿದೆ.

ತಮ್ಮ 4 ಎಕರೆ ಜಮೀನಿಗೆ ಸಂಬಂಧಿಸಿದಂತೆ 2009ರ ಡಿಸೆಂಬರ್ 11ರಂದು ಹೊರಡಿಸಲಾಗಿದ್ದ ಪ್ರಾಥಮಿಕ ಅಧಿಸೂಚನೆಯನ್ನು ಪ್ರಶ್ನಿಸಿ, ಬಾಗೇಪಲ್ಲಿ ತಾಲ್ಲೂಕಿನ ಕೊಂಡರೆಡ್ಡಿಪಲ್ಲಿಯ ಎಚ್.ಎಸ್.ಅಬ್ದುಲ್ ರಿಯಾಜ್ ಬಾಷಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

‘ಕೆಐಎಡಿಬಿ ತನ್ನ ಪ್ರಾಥಮಿಕ ಅಧಿಸೂಚನೆಯಲ್ಲಿ ವಿಶಾಲವಾದ ಭೂ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳಲು ಬಯಸುತ್ತದೆ. ಆದರೆ, ಅಂತಿಮ ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾದ ಮೂಲ ಜಮೀನಿನ ಶೇ 50ಕ್ಕಿಂತ ಕಡಿಮೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದು ಅನೇಕ ಸಂದರ್ಭಗಳಲ್ಲಿ ಕಂಡುಬರುತ್ತಿದೆ. ಇದು ಜಮೀನು ಸ್ವಾಧೀನಪಡಿಸಿಕೊಳ್ಳುವ ಮುನ್ನ ಮಂಡಳಿ ಸರಿಯಾದ ಅಧ್ಯಯನ ನಡೆಸಿಲ್ಲ ಎಂಬುದನ್ನು ತೋರಿಸುತ್ತದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.